ಬುಧವಾರ, ಏಪ್ರಿಲ್ 14, 2021
26 °C

ಬೀದರ್ ಜಿಲ್ಲೆಯಲ್ಲಿ ಕೃಪೆ ತೋರಿದ ಮುಂಗಾರು

ಉ.ಮ.ಮಹೇಶ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್:  ಮುಂಗಾರು ಮಳೆ ರಾಜ್ಯದ ಇತರ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಮುನಿಸಿಕೊಂಡಿದ್ದರೂ ಗಡಿ ಜಿಲ್ಲೆ ಬೀದರ್ ಮಟ್ಟಿಗೆ ಈ ಹಂಗಾಮಿನಲ್ಲಿ ಕೃಪೆ ತೋರಿದೆ. ನಾಲ್ಕು ತಿಂಗಳು ಕಾಲ ಬರ ಪರಿಸ್ಥಿತಿಯಲ್ಲಿ ನಲುಗಿದ ರೈತರು ಇದೀಗ ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.ಕೃಷಿ ಇಲಾಖೆ ಅನುಸಾರ ಈ ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್ 29ರಂದು ಇದ್ದಂತೆ ಅಂಕಿ-ಅಂಶಗಳ ಪ್ರಕಾರ ಸಾಮಾನ್ಯ ಮಳೆ ಪ್ರಮಾಣ 132.4 ಮಿ ಮೀಟರ್ ಇದ್ದರೆ, ಈ ಬಾರಿ ನಿರೀಕ್ಷೆಗೂ ಮೀರಿ ಅಂದರೆ 136.1 ಮಿ.ಮೀ. ಮಳೆಯಾಗಿದೆ.ಜುಲೈ ತಿಂಗಳ ಆರಂಭದಲ್ಲೂ 10 ಮಿ.ಮೀ ಮಳೆಯಾಗಿದ್ದು, ಬಿತ್ತನೆ ಕಾರ್ಯ ಶೇ 72ರಷ್ಟು ಮುಗಿದಿದೆ. ಜೋಳ 40 ಸಾವಿರ ಹೆಕ್ಟೇರ್, ಸೋಯಾಬಿನ್ 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿನ ಮಳೆ ಪ್ರಮಾಣ ಕೇವಲ 65.54 ಮಿಮೀ ಆಗಿತ್ತು. ಈ ಬಾರಿ ಮುಂಗಾರು ಮಳೆ ಜಿಲ್ಲೆಯ ಮಟ್ಟಿಗೆ ಹೆಚ್ಚಾಗಿಯೇ ಕೃಪೆ ತೋರಿದೆ.ಬೀದರ್ ತಾಲ್ಲೂಕು 130.6 ಮಿ.ಮೀ., ಭಾಲ್ಕಿ 145.1 ಮಿ.ಮೀ., ಬಸವಕಲ್ಯಾಣ 113 ಮಿ.ಮೀ., ಹುಮನಾಬಾದ್ 142.9 ಮಿ.ಮೀ, ಔರಾದ್ 148.5 ಮಿ.ಮೀ. ಮಳೆಯಾಗಿದೆ.

ಕೃಷಿ ಚಟುವಟಿಕೆಗೆ ಪೂರಕವಾಗಿ ಅಗತ್ಯವಿದ್ದಷ್ಟು ಮಳೆಯಾಗಿದೆ. ಬಿತ್ತನೆ ಕಾರ್ಯವೂ ಶೇ 70ರಷ್ಟು ಪೂರ್ಣಗೊಂಡಿದೆ. ಕೆಲವೆಡೆ ಆಗಲೇ ಬಿತ್ತನೆ ಮೊಳಕೆಯೊಡೆಯುವ, ಚಿಗುರುವ ಹಂತವನ್ನು ತಲುಪಿದೆ ಎಂದು ಅಧಿಕಾರಿ ಹೇಳುತ್ತಾರೆ.ಜೂನ್ ತಿಂಗಳ ಮಧ್ಯಭಾಗ ಮತ್ತು ಮಾಸಾಂತ್ಯದಲ್ಲಿ ಜಿಲ್ಲೆಯಾದ್ಯಂತ ಎರಡು ಬಾರಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಾಗಿ ಹಸನುಗೊಂಡಿದ್ದ ಭೂಮಿ ಚೆನ್ನಾಗಿ ನೀರು ಕುಡಿದಿದೆ. ಬಿತ್ತನೆ ಚಟುವಟಿಕೆಗೂ ಸಜ್ಜುಗೊಂಡಿತ್ತು. ಮುಂಗಾರು ಜೂನ್ 5ರ ವೇಳೆಗೆ ಜಿಲ್ಲೆ ಪ್ರವೇಶಿಸಬಹುದು ಎಂಬ ಕೃಷಿ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ರೈತರು ಭೂಮಿ ಹಸನು ಮಾಡಿ ಸಜ್ಜಾಗಿದ್ದರು. ಜೂನ್ 10ರ ವೇಳೆಗೂ ಮುಂಗಾರು ಬಾರದಿರುವುದರಿಂದ ಸಹಜವಾಗಿ ಆತಂಕ ಮೂಡಿತ್ತು.ಜೂನ್‌ನಲ್ಲಿ ದ್ವಿತೀಯಾರ್ಧದಲ್ಲಿ ಸುರಿದ ಮಳೆ ಚಿತ್ರಣವನ್ನು ಬದಲಿಸಿತು.  ಭೂಮಿಯಲ್ಲಿ ನೀರು ನಿಲ್ಲುವಷ್ಟು ಧಾರಾಕಾರವಾಗಿ ಸುರಿಯಿತು. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನೂ ಇದ್ದುದರಿಂದ ವಿತರಣೆ ಗೊಂದಲವೂ ಕಾಣಿಸಲಿಲ್ಲ.ಬಿತ್ತನೆ ವಿವರ: ಜೂನ್ 29ಕ್ಕೆ ಅಂತ್ಯವಾದ ಅವಧಿಯಲ್ಲಿ ಒಟ್ಟಾರೆ 22,835 ಹೆಕ್ಟೇರ್ ಭೂಮಿಯಲ್ಲಿ ಬತ್ತ, ಜೋಳ, ಮುಸುಕಿನ ಜೋಳ, ಸಜ್ಜೆ ಬಿತ್ತನೆಯಾಗಿದೆ. 47,096 ಹೆಕ್ಟೇರ್ ಭೂಮಿಯಲ್ಲಿ ತೊಗರಿ, ಉದ್ದು, ಹೆಸರು, ಹುರಳಿ, ಅಲಸಂದೆ, ಅವರೆ ಕಾಳು ಬಿತ್ತನೆಯಾಗಿದೆ.33,981 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ಎಳ್ಳು, ಸೂರ್ಯಕಾಂತಿ,ಗುರೆಳ್ಳು, ಸೋಯಾ ಅವರೆ ಬಿತ್ತನೆ ಆಗಿದೆ. 34,160 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯ ಕೃಷಿ ನಡೆದಿದೆ. ಒಟ್ಟಾರೆ ಜಿಲ್ಲೆಯಲ್ಲಿ 1,39,409 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.