ಬೀದರ್: ಬಸ್ ನಿಲ್ದಾಣ ಇನ್ನು ಕನ್ನಡಮಯ

7

ಬೀದರ್: ಬಸ್ ನಿಲ್ದಾಣ ಇನ್ನು ಕನ್ನಡಮಯ

Published:
Updated:
ಬೀದರ್: ಬಸ್ ನಿಲ್ದಾಣ ಇನ್ನು ಕನ್ನಡಮಯ

ಬೀದರ್: ಜನನಿಬಿಡ ಕೇಂದ್ರಗಳಾಗಿರುವ ನಿಲ್ದಾಣಗಳನ್ನು ಕನ್ನಡ ನಾಡು ಹಾಗೂ ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸುವ ವೇದಿಕೆಗಳನ್ನಾಗಿ ಬಳಸಿಕೊಳ್ಳಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ. ಈ ಕಾರ್ಯಕ್ಕೆ ನಗರದ ಕೇಂದ್ರ ಬಸ್‌ನಿಲ್ದಾಣದಲ್ಲಿ ಗುರುವಾರ (ಜೂನ್ 28) ಚಾಲನೆ ಸಿಗಲಿದೆ.

ಬಸ್ ನಿಲ್ದಾಣವನ್ನು ಕನ್ನಡಮಯಗೊಳಿಸುವ ಕಾರ್ಯ ಕೈಗೆತ್ತಿಕೊಂಡಿರುವ ಸಂಸ್ಥೆಯು, ನಿಲ್ದಾಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಎಂಟು ಸಾಹಿತಿಗಳ ಭಾವಚಿತ್ರಗಳು ಮತ್ತು ಸಾಹಿತಿಗಳ ಕನ್ನಡಪರ ನುಡಿಮುತ್ತುಗಳನ್ನು ಪ್ರದರ್ಶಿಸಲಿದೆ.

ಸಂಸ್ಥೆಯ ಹಿರಿಯ ಅಧಿಕಾರಿಗಳು ಗುರುವಾರ ಬೀದರ್ ಬಸ್‌ನಿಲ್ದಾಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಅನಾವರಣಗೊಳಿಸಲಿದ್ದು, ಈ ಹಿನ್ನೆಲೆಯಲ್ಲಿ ನಿಲ್ದಾಣಕ್ಕೆ ಬಣ್ಣ ಬಳಿದು ಹೊಸ ರೂಪ ನೀಡಲಾಗುತ್ತಿದೆ.

ಬೃಹತ್ ಮಾರ್ಗದರ್ಶಿ ಫಲಕಗಳು, ಬಸ್‌ಗಳ ಮಾಹಿತಿ ನೀಡಲು ಧ್ವನಿವರ್ಧಕ ವ್ಯವಸ್ಥೆ, ಎಲ್‌ಸಿಡಿ ಜೊತೆಗೆ ನಿಲ್ದಾಣದಲ್ಲಿ ಬಸ್‌ಗೆ ಕಾಯುವ ಅವಧಿಯಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ಕ್ರಮವಾಗಿ ಗ್ರಂಥಾಲಯ ಆರಂಭಿಸುವ ಕಾರ್ಯಕ್ಕೂ ಚಾಲನೆ ನೀಡಲಾಗುತ್ತದೆ.

`ಆರಂಭದಲ್ಲಿ ಬೀದರ ನಿಲ್ದಾಣದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ವ್ಯಾಪ್ತಿಯ ಇತರೆ ಜಿಲ್ಲೆಗಳಲ್ಲೂ ಈ ಕ್ರಮ ಕೈಗೊಳ್ಳಲಾಗುವುದು~ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್.ಶಿವಮೂರ್ತಿ ಪ್ರತಿಕ್ರಿಯಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ. ಗೋಕಾಕ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ ಹಾಗೂ ಡಾ. ಚಂದ್ರಶೇಖರ ಕಂಬಾರ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಹಿನ್ನೆಲೆಯಲ್ಲಿ ಒಂದೆಡೆ ರಾಜ್ಯ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ ಮತ್ತೊಂದೆಡೆ ಬೀದರ್‌ನ ಪ್ರಸಿದ್ಧ ಮಹಮೂದ್ ಗಾವಾನ್ ಮದರಸಾದ  ಬೃಹತ್ ಚಿತ್ರಗಳು ಮತ್ತು ನಡುವೆ ಸಾರಿಗೆಯ ಸಂಸ್ಥೆಯ ಲಾಂಛನ ಅಳವಡಿಸಲಾಗಿದೆ. ಮಹಾನ್ ವ್ಯಕ್ತಿಗಳ ಆಯ್ದ ನುಡಿಮುತ್ತುಗಳನ್ನು ಹಾಕಲಾಗಿದೆ.

ಸಂಸ್ಥೆ ವ್ಯಾಪ್ತಿಯ ಬೀದರ್, ಗುಲ್ಬರ್ಗ-1, ಗುಲ್ಬರ್ಗ-2, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಹೊಸಪೇಟೆ ಹಾಗೂ ವಿಜಾಪುರ ಜಿಲ್ಲೆಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ತಲಾ ಒಂದರಲ್ಲಿ 6 ಕನ್ನಡ ನುಡಿಗಟ್ಟುಗಳಂತೆ 24,500 ನುಡಿಮುತ್ತುಗಳನ್ನು ಅಂಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿವಮೂರ್ತಿ ವಿವರಿಸಿದರು.

ಸ್ಲೀಪರ್ ಕ್ಲಾಸ್ ಬಸ್: ಬೀದರ್- ಬೆಂಗಳೂರು ನಡುವೆ ಗುಲ್ಬರ್ಗ, ಬಳ್ಳಾರಿ ಮಾರ್ಗವಾಗಿ ಎರಡು ಸ್ಲೀಪರ್ ಕೋಚ್ ಬಸ್‌ಗಳ ಸಂಚಾರಕ್ಕೂ ಚಾಲನೆ ನೀಡಲಾಗುತ್ತಿದೆ.  ಈ ಹೊಸ ಬಸ್ ಬೀದರ್‌ನಿಂದ ಸಂಜೆ 6 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ತಲುಪುವುದು. ಅದೇ ರೀತಿ ಬೆಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಡುವ ಬಸ್ ಬೆಳಿಗ್ಗೆ 7 ಗಂಟೆಗೆ ಬೀದರ್ ತಲುಪುವುದು. ಟಿಕೆಟ್ ದರ ರೂ. 853.

ಬಸ್‌ಗಳ ಆಗಮನ ಮತ್ತು ನಿರ್ಗಮನ ಕುರಿತು ಬೀದರ್ ಬಸ್‌ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ~ಸ್ವಯಂ ಚಾಲಿತ ಪ್ರಯಾಣಿಕರ ಮಾಹಿತಿ ಪ್ರಸಾರ ವ್ಯವಸ್ಥೆ~ ಅಂದರೆ, ಎಸ್‌ಎಂಎಸ್ ಮೂಲಕ ಮಾಹಿತಿ ಒದಗಿಸುವ ಕ್ರಮ ಜಾರಿಗೆ ತರಲಾಗುತ್ತಿದೆ ಎಂದರು.

ಪ್ರಯಾಣಿಕರು ಬಸ್ ಸಂಚಾರದ ಮಾಹಿತಿ ಅರಿಯಲು ಎಉ ಎಂದು ಬರೆದು ನಿರ್ಗಮಿಸುವ ಮತ್ತು ತಲುಪುವ ಊರುಗಳ ಹೆಸರುಗಳನ್ನು ಬರೆದು  54646ಗೆ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಿದರೆ ಕ್ಷಣದಲ್ಲೇ ಮಾಹಿತಿ ಲಭ್ಯವಾಗಲಿದೆ. ಸಂಸ್ಥೆ ವ್ಯಾಪ್ತಿಯ ನಿಲ್ದಾಣಗಳಲ್ಲೂ ಈ ಸೇವೆ ಜಾರಿಗೆ ತರುವ ಉದ್ದೇಶವಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry