ಬುಧವಾರ, ಏಪ್ರಿಲ್ 14, 2021
23 °C

ಬೀದಿಗೆ ಬಿದ್ದರು ನಿರ್ಗತಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ತಾಲ್ಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ನಿರ್ಗತಿಕರು ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಜೆ.ಸಿ.ಬಿ ಯಂತ್ರದಿಂದ ತೆರವು ಗೊಳಿಸಿದ ಪರಿಣಾಮ ಬುಧವಾರ ಗುಡಿಸಲ ವಾಸಿಗಳು ಚಿಕ್ಕಿತಿರುಪತಿ ಸರ್ಜಾಪುರಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದೀಢೀರ್ ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು.ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮದ  30 ಗುಂಟೆ ಸರ್ಕಾರಿ ಜಮೀನಿನಲ್ಲಿ ಮನೆ ಇಲ್ಲದ ನಿರ್ಗತಿಕರು ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿ ನಿಲಯ ನಡೆಯುತ್ತಿದ್ದು, ಸಮರ್ಪಕ ಕಟ್ಟಡದ ವ್ಯವಸ್ಥೆ ಇಲ್ಲದ ಕಾರಣ ಈ ಮೂವತ್ತು ಗುಂಟೆಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಗುಡಿಸಲು ಹಾಕಿಕೊಂಡಿದ್ದ ವರ ಮನವೊಲಿಸಿ ಅದರ ಪಕ್ಕದಲ್ಲಿದ್ದ 36 ಗುಂಟೆ ಸರ್ಕಾರಿ ಜಮೀನಿನಲ್ಲಿ ತಾತ್ಕಾಲಿಕವಾಗಿ ಗುಡಿಸಲು ಹಾಕಿಕೊಳ್ಳಲು ಸೂಚಿಸಲಾಗಿತ್ತು. ಅದರಂತೆ ಗುಡಿಸಲ ನಿವಾಸಿಗಳು ನೂತನ ಗುಡಿಸಲು ಹಾಕಿಕೊಳ್ಳಲು ಮುಂದಾಗಿದ್ದರು. ಆದರೆ ಈ  ಜಮೀನ ಪಕ್ಕವೇ ಜಮೀನು ಖರೀದಿಸಿದ ಅನೇಕಲ್ ತಾಲ್ಲೂಕಿನ ದೊಮ್ಮಸಂದ್ರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು  ಮಂಗಳವಾರ ರಾತ್ರೋರಾತ್ರಿ ಈ ಗುಡಿಸಲು ತೆರಳುಗೊಳಿಸಿದ್ದಾರೆ.ಈ ಸಂಬಂಧ ಗುಡಿಸಲ ವಾಸಿಗಳು ತಹಶೀಲ್ದಾರ್ ಜಿ.ವಿ. ನಾಗರಾಜ್ ಮತ್ತು ಸಿ.ಪಿ.ಐ ಸಂಪತ್ ಕುಮಾರ್ ರವರಿಗೆ ದೂರು ನೀಡಿದ್ದರು. ಬುಧವಾರ  ಜಿ.ಪಂ ಸದಸ್ಯ ಎಂ.ನಾರಾಯಣಸ್ವಾಮಿ ಹಾಗೂ ದಲಿತ ಮುಖಂಡ ವೆಂಕಟಾಪು ಸತ್ಯಂ ನೇತೃತ್ವದಲ್ಲಿ ನೂರಾರು ಮಂದಿ ಗುಡಿಸಲ ವಾಸಿಗಳು ಚಿಕ್ಕತಿರುಪತಿ-ಸರ್ಜಾಪುರ ಮುಖ್ಯ ರಸ್ತೆಯಲ್ಲಿ ರಸ್ತೆ ನಡೆಸಿ ಪ್ರತಿಭಟನೆ ನಡೆಸಿದರು.ತಹಶೀಲ್ದಾರ್ ಜಿ.ವಿ.ನಾಗರಾಜ್, ಸಿ.ಪಿ.ಐ ಸಂಪತ್‌ಕುಮಾರ್ ಸ್ಥಳಕ್ಕೆ ಭೇಟಿ  ನೀಡಿ ಇದೇ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳಲು ಜಾಗಕ್ಕಾಗಿ ಸರ್ಕಾರಕ್ಕೆ  ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದರು. ಈ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಮುನಿರಾಜು ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.