ಸೋಮವಾರ, ಮೇ 17, 2021
27 °C

ಬೀದಿನಾಯಿ ಹಾವಳಿಯಿಂದ ಬೇಸತ್ತ ನಾಗರಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ನಗರದಲ್ಲಿ ಪಶು ಗಣತಿಯ ಅಂದಾಜಿನಂತೆ ಬೀದಿ ನಾಯಿಗಳ ಸಂಖ್ಯೆ ಮೂರು ಸಾವಿರ ದಾಟಿದ್ದರೆ, ಹಂದಿಗಳ ಸಂಖ್ಯೆ ಐದಾರು ಸಾವಿರದಷ್ಟಿದೆ. ಬೀದಿ ನಾಯಿ-ಹಂದಿಗಳ ಸಂಖ್ಯೆ ಹೆಚ್ಚಿದಷ್ಟು ನಾಗರಿಕರ ನೆಮ್ಮದಿ ಹಾಳಾಗುತ್ತಿದೆ.ಬೀದಿನಾಯಿ ಹಾಗೂ ಹಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುರಸಭೆಗೆ ವಿವಿಧ ಸಂಘಟನೆಗಳು, ನಾಗರಿಕರು ಮಾಡಿರುವ ಮನವಿಗಳಿಗೆ ಲೆಕ್ಕವಿಲ್ಲ. ಜಿಲ್ಲಾಧಿಕಾರಿ, ಪೌರಾಡಳಿತ ಸಚಿವರಿಗೆ ಮಾಡಿರುವ ಮನವಿಯಿಂದಲೂ ಪ್ರಯೋಜನ ವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಇದು ತಮಗೆ ಸಂಬಂಧವಿಲ್ಲದ ವಿಚಾರ ಎನ್ನುವಂತೆ ಮೌನವಾಗಿದ್ದಾರೆ ಎಂದು ವಂದೇಮಾತರಂ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ವಿ. ಅರುಣ್‌ಕುಮಾರ್ ಆರೋಪ ಮಾಡಿದ್ದಾರೆ.ಯುವಕ ಸಂಘಗಳು, ಪ್ರಗತಿಪರ ಸಂಘಟನೆಗಳು ಕ್ರಮಕ್ಕೆ ಒತ್ತಾಯಿಸಿ, ಧರಣಿ, ಪ್ರತಿಭಟನೆ ನಡೆಸಿದಾಗ ಒಂದೆರಡು ದಿನ ಹಂದಿ-ಬೀದಿ ನಾಯಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ನಾಟಕವಾಡಿ ನಂತರ ಸುಮ್ಮನಾಗುವುದು ಪುರಸಭೆ ಆಡಳಿತ ಹಿಡಿದಿರುವವರಿಗೆ ಅಭ್ಯಾಸವಾಗಿದೆ. ಪ್ರಾಣಿಗಳ ಮೇಲೆ ಅಷ್ಟೊಂದು ಕರುಣೆಯಿದ್ದರೆ, ಜನರನ್ನಾದರೂ ನಗರ ಪ್ರದೇಶದಿಂದ ಹೊರಗೆ ಕಳಿಸುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದೂ ಆಯಿತು. ಈ ಮಾತನ್ನು ತಮಾಷೆ ಎಂದು ಪರಿಗಣಿಸಿ ಪುರಸಭೆಯವರು ಸುಮ್ಮನಾಗಿದ್ದಾರೆ ಎಂದು ಅವರು ಆಪಾದನೆ ಮಾಡಿದ್ದಾರೆ.ಹಂದಿಗಳನ್ನು ನಗರ ಪ್ರದೇಶದಿಂದ ಹೊರಗಿಡಬೇಕೆಂಬ ನಿಯಮವಿದ್ದರೂ, ಹಿರಿಯೂರಿನಲ್ಲಿ ಮಾತ್ರ ಈ ನಿಯಮ ಜಾರಿಗೆ ಬರುತ್ತಿಲ್ಲ. ನಾಯಿ ಕಡಿತಕ್ಕೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ ಇಲ್ಲದಿದ್ದರೂ ಕಚ್ಚುವ ನಾಯಿಗಳಿಗೆ ಇಲ್ಲಿ ಬರವಿಲ್ಲ. ಸಂತಾನೋತ್ಪತ್ತಿ ಆಗದಂತೆ ನಾಯಿಗಳಿಗೆ ಚುಚ್ಚುಮದ್ದು ಹಾಕುವ ವ್ಯವಸ್ಥೆಯನ್ನಾದರೂ ಜಾರಿಗೆ ತರುತ್ತಿಲ್ಲ ಎಂದು ಅರುಣ್‌ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.ಒತ್ತಾಯ: ನಗರ ಪ್ರದೇಶದ ಒಳಗೆ ಹಂದಿಗಳನ್ನು ಬಿಡುವ ಹಂದಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಬೀದಿನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕ ನೇಮಕ ಮಾಡಿಕೊಂಡು ನಗರದ ಸ್ವಚ್ಛತೆ ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.