ಬೀದಿಯೇ ಬೋಧಿ

7

ಬೀದಿಯೇ ಬೋಧಿ

Published:
Updated:
ಬೀದಿಯೇ ಬೋಧಿ

ಆಟೊ ಮೇಲೆ ಅಕ್ಷರ ಮೂಡಿಸುತ್ತ, ನಾಟಕಗಳನ್ನು ನೋಡುತ್ತ, ದೊಡ್ಡ ದೊಡ್ಡ ನಿರ್ದೇಶಕರ ಕೈಯಲ್ಲಿ ಪಳಗುತ್ತ, ಸಿನಿಮಾಗಳಿಗೆ ಕಲಾ ನಿರ್ದೇಶನ ಮಾಡುತ್ತ, ಕಿರುತೆರೆಯನ್ನೂ ಆತುಕೊಂಡು ಬೆಳೆದವರು ಅರುಣ್ ಸಾಗರ್.ಕಲೆಯ ಬಗ್ಗೆ ಅಕಾಡೆಮಿಕ್ ಆಗಿ ಏನನ್ನೂ ಕಲಿಯದಿದ್ದರೂ ಕಲೆ ಅವರ ಉಸಿರೊಳಗೆ ಬೆರೆತುಹೋಗಿದೆ. ಹೊಟ್ಟೆಪಾಡಿಗಾಗಿ ಎಂದು ನೆಚ್ಚಿಕೊಂಡ ಹುಚ್ಚೊಂದು ಈವರೆಗೂ ಇವರನ್ನು ಕೈ ಹಿಡಿದು ನಡೆಸಿದೆ.ಅತ್ತ ಯಕ್ಷಗಾನ, ಇತ್ತ ಬಯಲಾಟ, ಆಗಾಗ ನಡೆಯುವ ನಾಟಕಗಳು. ಅದು ಶಿವಮೊಗ್ಗ ಜಿಲ್ಲೆಯ ಸಾಗರ. ಆ ಊರಿನಲ್ಲಿ ಕೃಷ್ಣ ಟಾಕೀಸ್ ಅಂತ ಒಂದು ಚಲನಚಿತ್ರ ಮಂದಿರ. ಅಲ್ಲಿ ಮಲಕ್ಕಪ್ಪ ಎಂಬುವವರು ಪೋಸ್ಟರ್‌ಗಳನ್ನು ಬರೆಯುತ್ತಿದ್ದರು.ಅರುಣ್ ಅಲ್ಲಿಗೆ ಹೋಗಿ ನಿಂತಾಗ ಮಲಕ್ಕಪ್ಪ ಅಕ್ಷರಗಳಿಗೆ ಬಣ್ಣ ತುಂಬುವುದಕ್ಕೆ ಕೊಡುತ್ತಿದ್ದರು. ಹಾಗೆ ತುಂಬುವಾಗ ಒಂದು ದಿನ ಅವರ ಬಣ್ಣದ ಬ್ರಶ್ ಕದ್ದು ತಂದರು. ಮನೆಗೆ ಬಂದವರೇ ಸುಣ್ಣದ ಗೋಡೆಗೆ ನೀರಿನಲ್ಲಿ ಬ್ರಶ್ ಅದ್ದಿ ಬರೆಯತೊಡಗಿದರು.ನೀರಿನಲ್ಲಿ ಬರೆಯುತ್ತಿದ್ದರಿಂದ ಮನೆಯಲ್ಲಿ ಬೈಸಿಕೊಳ್ಳುವ ಗೊಡವೆಯೂ ಇರಲಿಲ್ಲ. ಇವರು ಕಲೆಯ ಅ ಆ ಇ ಈ ಕಲಿತದ್ದು ಹೀಗೆ. ಈಗಲೂ ಆ ಬ್ರಶ್ ಅರುಣ್ ಬಳಿ ಜೋಪಾನವಾಗಿದೆ.

ಮುಂದೆ ಆಟೊಗಳಿಗೆ ಚಿತ್ರ ಬರೆಯುವ ಕಾಯಕ. ಹಾಗೆ ಬರೆಯುತ್ತಿದ್ದಾಗ ಒಮ್ಮೆ ಮನೆಯ ಹತ್ತಿರವೇ ವಾಸಿಸುತ್ತಿದ್ದ ಮಾಜಿ ಮುಖ್ಯಮಂತ್ರಿಯೊಬ್ಬರ ಸಂಬಂಧಿಕರು ಅರುಣ್‌ನನ್ನು ಕಂಡು `ಬಣ್ಣದ ಹುಡುಗ~ ಎಂದು ಬೆರಗಿನಿಂದ ಕರೆದರು.ಆಮೇಲೆ ಸಾಗರದ ತುಂಬ ಅರುಣ್ ಬಣ್ಣದ ಹುಡುಗನೆಂದೇ ಹೆಸರಾದರು. ಸಾಗರದ ಲಾಲ್‌ಬಹದ್ದೂರ್‌ಶಾಸ್ತ್ರಿ ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭ. ಒಂದೆಡೆ ಊರಿಗೆ ಕಂಪೆನಿ ನಾಟಕಗಳ ಆಗಮನ. ಮತ್ತೊಂದೆಡೆ `ಉದಯ ಕಲಾವಿದರು~, `ವಿನೋಬಾ ಕಲಾವಿದ~ರಿಂದ ಹವ್ಯಾಸಿ ನಾಟಕಗಳ ಪ್ರದರ್ಶನ.

 

ಈ ನಾಟಕಗಳನ್ನು ನೋಡುತ್ತ ನೋಡುತ್ತ ಒಮ್ಮೆ ಅರುಣ್ ಒಂದು ಪಾತ್ರವನ್ನೂ ಮಾಡಿದರು. ಅದು ಉದಯ ಕಲಾವಿದರು ಮೈಸೂರಿನಲ್ಲಿ ಆಡಿಸಿದ `ಫಟಿಂಗ ಪ್ರಹಸನ~ ನಾಟಕ. ಇಕ್ಬಾಲ್ ಅಹಮದ್ ನಿರ್ದೇಶಕರು. ಬಿ.ವಿ.ಕಾರಂತ್, ಜಯತೀರ್ಥ ಜೋಷಿ ಅಂತಹವರು ನಾಟಕವನ್ನು ನೋಡಿ ಮೆಚ್ಚಿಕೊಂಡರು. ಪ್ರಕಾಶ್ ರೈ ಅಪ್ಪಿಕೊಂಡು ಭೇಷ್ ಹೇಳಿದರು.ಅಷ್ಟರಲ್ಲಿ ಸರ್ಕಾರ ನಾಟಕ ರೆಪರ್ಟರಿ ತೆರೆಯುವ ತಯಾರಿಯಲ್ಲಿತ್ತು. ಈಗ ರಂಗಾಯಣ ಎಂದು ಹೆಸರಾಗಿರುವ ಸಂಸ್ಥೆಗೆ ಮೊದಲ ನಿರ್ದೇಶಕರು ಬಿ.ವಿ.ಕಾರಂತರು. ಮಂಡ್ಯ ರಮೇಶ್, ರಂಗಾಯಣ ರಘು ಅವರ ಜತೆಯಲ್ಲಿ ಅರುಣ್ ಅರ್ಜಿ ಗುಜರಾಯಿಸಿದರು. ಸಂಸ್ಥೆ ನಡೆಸಿದ ಮೂರು ಸಂದರ್ಶನಗಳಲ್ಲಿ ಮೂವರೂ ಪಾಸಾದರು. ಕಾರಂತರ ಗರಡಿಯಲ್ಲಿ ಪಳಗಿದ್ದು, ದೇಶ ವಿದೇಶ ತಿರುಗಿ ನಾಟಕ ಆಡಿದ್ದು ಅರುಣ್‌ಗೆ ಕನಸಿನಲ್ಲಿ ನಡೆದಂತಿದೆ.

 ರಂಗಾಯಣ ತೊರೆದ ಮೇಲೆ ಇವರನ್ನು ಕೈಬೀಸಿ ಕರೆದದ್ದು ಚಿತ್ರರಂಗ. `ಭೂಮಿಗೀತ~ ಸಿನಿಮಾದ ನಾಯಕನಾಗಲು ಬುಲಾವ್. ಆದರೆ ತೆಳ್ಳಗಿದ್ದ ಕಾರಣ ನಾಯಕ ಪಾತ್ರಕ್ಕೆ ನಕಾರ. ಆದರೇನಂತೆ ಅದೇ ಚಿತ್ರಕ್ಕೆ ಕಲಾ ನಿರ್ದೇಶಕನಾಗಿ ದುಡಿದರು. `ಭೂಮಿಗೀತ~ಕ್ಕೆ ರಾಷ್ಟ್ರಪ್ರಶಸ್ತಿ ದೊರೆತಾಗ ಇವರಿಗೆ ಕಲಾ ನಿರ್ದೇಶನದ ಯಶಸ್ಸು ಕೂಡ ಗೋಚರವಾಯಿತು.ಪ್ರಶಂಸೆಯ ಮಹಾಪೂರವೇ ಹರಿದು ಬಂತು. ಆಮೇಲೆ `ಶಾಂತಿ ಶಾಂತಿ ಶಾಂತಿ~, ರವಿಚಂದ್ರನ್ ಅವರ ಎಂಟು ಸಿನಿಮಾಗಳಿಗೆ ಕಲಾ ನಿರ್ದೇಶಕರಾದರು. `ಓ ನನ್ನ ನಲ್ಲೆ~ ಇವರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿತು. ಆದರೆ ಅಭಿನಯ? ಬಹುತೇಕ ಪ್ರತಿಭಾವಂತರಿಗೂ ಆಗುವ ಅನ್ಯಾಯವೇ ಇವರಿಗೂ ಆಯಿತು. `ಜನುಮದ ಜೋಡಿ~ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದು ಹೊರತುಪಡಿಸಿದರೆ ಇನ್ನಾವ ಅವಕಾಶಗಳೂ ಸಿಗಲಿಲ್ಲ.ಅಷ್ಟು ಹೊತ್ತಿಗಾಗಲೇ ಟಿ.ಎನ್.ಸೀತಾರಾಂ ಅವರ `ಮಾಯಾಮೃಗ~ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆಯಿತು. ಆಮೇಲೆ `ಮನ್ವಂತರ~ದ ಮಾಧವನಾಗಿ ಮಿಂಚಿದರು. ಆ ಪಾತ್ರದ ಮೂಲಕ ಅರುಣ್ ಮನೆಮಾತಾಗಿ ಹೋದರು. `ಮರ್ಮ~ ಚಿತ್ರದಲ್ಲಿ ಕಲಾ ನಿರ್ದೇಶಕನಾಗಿದ್ದ ಸಂದರ್ಭ. ಖ್ಯಾತ ಖಳನಟ ರಘುವರನ್ ಅವರು ಪಾತ್ರವೊಂದರಲ್ಲಿ ನಟಿಸಬೇಕಿತ್ತು. ಆದರೆ ಸುನೀಲ್ ಕುಮಾರ್ ದೇಸಾಯಿ ಅರುಣ್‌ಗೆ ಆ ಪಾತ್ರ ವಹಿಸಿದರು. ಅದು ಒಳ್ಳೆಯ ಹೆಸರು ತಂದುಕೊಟ್ಟಿತು.`ಜಸ್ಟ್ ಮಾತ್ ಮಾತಲ್ಲಿ~ ಚಿತ್ರಕ್ಕೆ ನಟಿಸಲು ಅವಕಾಶ ಕೊಟ್ಟ ನಟ ಸುದೀಪ್ ಅವರನ್ನು ಪ್ರೀತಿಯಿಂದ ಸ್ಮರಿಸುವ ಇವರು `ಒಬ್ಬ ಉತ್ತಮ ನಿರ್ದೇಶಕ ಇದ್ದಾಗಲೇ ಒಳ್ಳೆಯ ತಂತ್ರಜ್ಞರು, ನಟರು ಹುಟ್ಟಲು ಸಾಧ್ಯ. ನಟರ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಂತಹ ಕ್ಯಾಪ್ಟನ್‌ಗಳು ಕನ್ನಡಕ್ಕೆ ಬೇಕು~ ಎನ್ನುತ್ತಾರೆ.ಅರುಣ್ ಪ್ರತಿಭೆಗೆ ರತ್ನಗಂಬಳಿ ಹಾಸಿದ್ದು `ಮಜಾ ವಿತ್ ಸೃಜ~ ಟೀವಿ ಕಾರ್ಯಕ್ರಮ. ಅರುಣ್ ಒಳಗಿರುವ ನಿಜವಾದ ಕಲಾವಿದನನ್ನು ವೀಕ್ಷಕರಿಗೆ ಈ ಕಾರ್ಯಕ್ರಮ ಪರಿಚಯಿಸಿತು. ಯೋಗಗುರುವಾಗಿ, ಕುಡುಕನಾಗಿ, ಭಯೋತ್ಪಾದಕನಾಗಿ, ಗುರೂಜಿಯಾಗಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡರು. ಅರುಣ್ ಒಳಗಿದ್ದ ನಟನೆಯ ಹಸಿವನ್ನು ಕಾರ್ಯಕ್ರಮ ಅರ್ಥಪೂರ್ಣವಾಗಿ ನೀಗಿಸಿತು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸ್ಕ್ರಿಪ್ಟ್ ಸಿದ್ಧವಿದ್ದರೂ ಅದನ್ನು ಮೀರಿ ನಿಂತಲ್ಲೇ ಹುಟ್ಟುವ ಹಾಸ್ಯವನ್ನು ಕಲಾತ್ಮಕವಾಗಿ ಮಂಡಿಸಿದರು ಅರುಣ್.`ಮಜಾ ವಿತ್ ಸೃಜ~ ಕಾರ್ಯಕ್ರಮ ನಡೆಸಿಕೊಡುವಾಗಲೇ ರಾಜಕೀಯ ವಿಡಂಬನೆಯಿರುವ ಕಾರ್ಯಕ್ರಮವನ್ನು ನಡೆಸಿಕೊಡಲು ಸುದ್ದಿ ವಾಹಿನಿಯೊಂದರಿಂದ ಕರೆ ಬಂದಿತ್ತು. `ಮಜಾ ವಿತ್ ಸೃಜ~ದಲ್ಲಿ ಒಂದು ಕಿಡಿಯಾಗಿಯಷ್ಟೇ ಬರುತ್ತಿದ್ದ ರಾಜಕೀಯ ವಿಡಂಬನೆಯನ್ನು ಒಂದು ಕಾರ್ಯಕ್ರಮವಾಗಿ ರೂಪಿಸಲು ಅರುಣ್ ಮನಸ್ಸು ಮಾಡಿದರು. ರಂಗಭೂಮಿಯಲ್ಲಿ ಮಾಸ್ಟರ್ ಹಿರಣ್ಣಯ್ಯನವರಂತಹ ನಟರು ಮಾಡಿದ ಕಾಯಕವನ್ನೇ ಅರುಣ್ ಟಿವಿಗೆ ಇಳಿಸಿದರು. ಅದೇ `ಕೊಯ್ಯಂ ಕೊಟ್ರ~ ಕಾರ್ಯಕ್ರಮ. ಜನ ಸಾಮಾನ್ಯರ ಪ್ರತಿನಿಧಿಯಾಗಿ `ಕೊಯ್ಯಂ ಕೊಟ್ರ~ ಮಾತನಾಡುತ್ತಾನೆ.ರಾಜಕೀಯ ವಿಡಂಬನೆಯನ್ನು ಪರಿಣಾಮಕಾರಿಯಾಗಿ ಹೇಗೆ ಗ್ರಹಿಸುತ್ತೀರಿ ಎಂಬ ಪ್ರಶ್ನೆಗೆ `ನಾನು ಕಾರಿಗಿಂತ ಹೆಚ್ಚಾಗಿ ಕಾಲುಗಳನ್ನೇ ನಂಬಿಕೊಂಡವನು. ಬೀದಿ ಬೀದಿಗಳಲ್ಲಿ ಸಂದಿಗೊಂದಿಗಳಲ್ಲಿ ಅಲೆಯುತ್ತೇನೆ. ಟೀ ಅಂಗಡಿ, ಬಸ್ ನಿಲ್ದಾಣ ಮುಂತಾದ ಕಡೆ ಜನರ ಮಾತಿಗೆ ಕಿವಿಯಾಗುತ್ತೇನೆ. ಕಾರುಗಳಲ್ಲಿ ಓಡಾಡುವವರಿಂದಾಗಿಯೇ ರೀಮೇಕ್‌ಗಳು ಹೆಚ್ಚುತ್ತಿವೆ. ಯೋಚಿಸುವ ಶಕ್ತಿ ಸಂಕುಚಿತಗೊಳ್ಳುತ್ತದೆ. ನನ್ನೊಳಗಿನ ಮನುಷ್ಯ ಬೆಳೆಯಬೇಕು ಎಂದರೆ ಬೀದಿ ಮುಖ್ಯ. ಬೀದಿಯ ಜತೆ ನಂಟಿದ್ದವನು ಅಪ್ಪಟ ಕಲಾವಿದನಾಗುತ್ತಾನೆ~ ಎನ್ನುತ್ತಾರೆ.ಅರುಣ್ ಈಗ ತೆಲುಗು ಚಿತ್ರರಂಗದತ್ತಲೂ ವಾಲಿದ್ದಾರೆ. ಕೆ. ರಾಘವೇಂದ್ರ ರಾವ್ ನಿರ್ದೇಶನದ, ನಾಗಾರ್ಜುನ್ ನಾಯಕನಾಗಿ ಅಭಿನಯಿಸಿರುವ `ಶಿರಡಿ ಸಾಯಿಬಾಬಾ~ ಚಿತ್ರದಲ್ಲಿ ಅವರಿಗೊಂದು ಪುಟ್ಟ ಆದರೆ ಮಹತ್ವದ ಪಾತ್ರ ದೊರೆತಿದೆ. ಒಂದು ಚಿತ್ರದ ನಂತರ ಮತ್ತೊಂದನ್ನು ಒಪ್ಪಿಕೊಳ್ಳುವುದು ಇವರ ವೈಖರಿ.`ಬ್ರೇಕಿಂಗ್ ನ್ಯೂಸ್~ ಚಿತ್ರದ ಬಳಿಕ ಅನೇಕ ಅವಕಾಶಗಳು ಬಂದರೂ ಅವುಗಳನ್ನು ಪಕ್ಕಕ್ಕೆ ಸರಿಸಿದ್ದಾರೆ. `ವೃಕ್ಷ~ ಎಂಬ ಸಾಂಸ್ಕೃತಿಕ ಸಂಸ್ಥೆಯೊಂದನ್ನು ಸ್ಥಾಪಿಸಿರುವ ಅರುಣ್ ಇದನ್ನು ಸಾಗರಕ್ಕೂ ಚಾಚಲು ಉತ್ಸುಕರಾಗಿದ್ದಾರೆ. ಅಲ್ಲಿನ ಎಳೆಯ ಪ್ರತಿಭೆಗಳನ್ನು ಗುರುತಿಸಲು ಸಂಸ್ಥೆ ಶ್ರಮಿಸಲಿದೆಯಂತೆ. ಸಿನಿಮಾ ಕಿರುತೆರೆಯಲ್ಲಿ ಎಷ್ಟೇ ಬಿಜಿಯಾಗಿದ್ದರೂ ರಂಗಭೂಮಿಯ ನಂಟನ್ನು ಬಿಟ್ಟಿಲ್ಲ. ಇತ್ತೀಚೆಗೆ ಇವರು ರಂಗವಿನ್ಯಾಸ ಮಾಡಿದ ನಾಟಕ ಗಿರೀಶ್ ಕಾರ್ನಾಡರ `ಒಡಕಲು ಬಿಂಬ~.ಸಿನಿಮಾ ರಂಗ ನಿಮ್ಮನ್ನು ಸರಿಯಾಗಿ ದುಡಿಸಿಕೊಂಡಿದೆಯೇ ಎಂದು ಕೇಳಿದಾಗ ಅರುಣ್ ಒಂದು ಕತೆ ಹೇಳಿದರು. ಹೊಲದಲ್ಲಿ ಮಕ್ಕಳು ಹುಲ್ಲು ಕೀಳುತ್ತಿದ್ದರಂತೆ. `ಅಮ್ಮಾ ಇನ್ನೂ ಎಷ್ಟು ಹುಲ್ಲು ಕುಯ್ಯಬೇಕು~ ಎಂದು ಮಗನೊಬ್ಬ ಕೇಳಿದನಂತೆ. ಅದಕ್ಕೆ ಆ ಹೆಣ್ಣುಮಗಳು ನೀಡಿದ ಉತ್ತರ: ತಲೆ ಎತ್ತದೆ ಸುಮ್ಮನೆ ಕುಯ್ತಾ ಇರು ಮಗಾ. ಯಾವತ್ತೂ ತಲೆ ಎತ್ತಬೇಡ. ಎಷ್ಟು ಕುಯ್ದೆ ಅಂತ ಲೆಕ್ಕಹಾಕಬೇಡ. ಆಗ ನೀನು ಇಲ್ಲಿರಲ್ಲ, ಎಲ್ಲಿಗೋ ಹೋಗಿರ‌್ತೀಯ.`ಈಗ ನಾನೂ ತಲೆ ಎತ್ತದೆ ಹುಲ್ಲು ಕತ್ತರಿಸುತ್ತಿದ್ದೇನೆ~ ಎಂಬ ಮಾರ್ಮಿಕ ನುಡಿ ಅರುಣ್ ಅವರದು.

-

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry