ಗುರುವಾರ , ಮೇ 19, 2022
21 °C

ಬೀದಿ ದೀಪ: ನಿರ್ವಹಣೆಯಲ್ಲಿ ಲೋಪ

ಶಿವರಾಂ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದಿ ದೀಪ: ನಿರ್ವಹಣೆಯಲ್ಲಿ ಲೋಪ

ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಹಳೇ ಮೂರು ವಲಯಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ ನೂರು ವಾರ್ಡ್‌ಗಳಲ್ಲಿ 2008-09ರಿಂದ 2010-11ನೇ ಸಾಲಿನವರೆಗೆ ಬೀದಿ ದೀಪಗಳ ವಾರ್ಷಿಕ ನಿರ್ವಹಣೆಯಲ್ಲಿ ಸಾಕಷ್ಟು ಲೋಪಗಳಾಗಿರುವುದು ವಿಶೇಷ ಲೆಕ್ಕ ಪರಿಶೋಧನೆಯಿಂದ ಬೆಳಕಿಗೆ ಬಂದಿದೆ.ಈ ಮೂರು ವರ್ಷಗಳಲ್ಲಿ ಹೊಸದಾಗಿ ಟೆಂಡರ್ ಕರೆಯದೆ ಹಳೇ ಗುತ್ತಿಗೆಯನ್ನು ಮುಂದುವರೆಸಿರುವುದರಿಂದ ಗುತ್ತಿಗೆದಾರರಿಗೆ ಸುಮಾರು 1.83 ಕೋಟಿ ರೂಪಾಯಿಗಳಿಗೂ ಅಧಿಕ ಲಾಭ ಮಾಡಿಕೊಟ್ಟಂತಾಗಿದೆ ಎಂಬುದನ್ನು ವರದಿ ದೃಢಪಡಿಸಿದೆ.2008-09, 2009-10 ಹಾಗೂ 2010-11ರಲ್ಲಿ ಕ್ರಮವಾಗಿ ರೂ. 41,81,791, ರೂ. 76,64,406 ಹಾಗೂ ರೂ. 65,02,549 ಸೇರಿದಂತೆ ಒಟ್ಟು 1,83,48,746 ರೂಪಾಯಿಗಳಷ್ಟು ಗುತ್ತಿಗೆದಾರರಿಗೆ ಅನಪೇಕ್ಷಿತ ಲಾಭ ಮಾಡಿಕೊಡಲಾಗಿದೆ ಎಂದು ನೂರು ವಾರ್ಡ್‌ಗಳಲ್ಲಿ ಬೀದಿ ದೀಪಗಳ ವಾರ್ಷಿಕ ನಿರ್ವಹಣೆ ಕುರಿತು ಲೆಕ್ಕ ಪರಿಶೋಧನೆ ನಡೆಸಿದ ಪಾಲಿಕೆಯ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್ (ವಿದ್ಯುತ್) ಅವರು ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.2008-09ನೇ ಸಾಲಿನ ಟೆಂಡರನ್ನು ಮತ್ತೆರಡು ವರ್ಷ ಮುಂದುವರಿಸಿರುವುದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕ ಅಧಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಬೀದಿ ದೀಪಗಳ ನಿರ್ವಹಣೆ ಕುರಿತು ಕಚೇರಿಯಲ್ಲಿ ಯಾವುದೇ ದಾಖಲೆಗಳನ್ನು ನಿರ್ವಹಿಸಿರುವುದಿಲ್ಲ. ಗುತ್ತಿಗೆದಾರ ಅಗತ್ಯ ಸಿಬ್ಬಂದಿಯನ್ನು ಹೊಂದಿದ್ದಾನೆಯೇ ಎಂಬುದನ್ನು ಯಾವುದೇ ಅಧಿಕಾರಿಗಳು ಪರಿಶೀಲಿಸಿ ದೃಢೀಕರಿಸಿಲ್ಲ.

 

ಬೀದಿ ದೀಪಗಳ ದೈನಂದಿನ/ ಮಾಸಿಕ ಬದಲಾವಣೆ ನಮೂನೆಗಳಲ್ಲಿ ಏಕರೂಪತೆ ಇರುವುದಿಲ್ಲ. ಬಿಡುಗಡೆಗೊಂಡ ಸಾಮಗ್ರಿಗಳ ಬಾಬ್ತು ಕಟಾಯಿಸಲಾಗುತ್ತಿರುವ ಶೇ 2ರ ಮೊತ್ತಕ್ಕೆ ಯಾವುದೇ ಆಧಾರ ಅಥವಾ  ಪ್ರಮಾಣೀಕೃತ ದಾಖಲೆಗಳು ಲಭ್ಯವಾಗಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.ವರದಿಯ ಪ್ರಮುಖ ಅಂಶ: ನೂರು ವಾರ್ಡ್‌ಗಳಲ್ಲಿ ಬೀದಿ ದೀಪಗಳ ನಿರ್ವಹಣೆಗಾಗಿ 32 ಪ್ಯಾಕೇಜ್ ವಿಂಗಡಿಸುವ ಮೂಲಕ 2008-09ನೇ ಸಾಲಿಗೆ ಅಂದಾಜುಪಟ್ಟಿ ತಯಾರಿಸಿ ಗುತ್ತಿಗೆ ನೀಡಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಕೇವಲ 27 ಪ್ಯಾಕೇಜ್‌ಗಳ ದಾಖಲೆಗಳನ್ನು ಮಾತ್ರ ಕಚೇರಿಗೆ ಸಲ್ಲಿಸಿದ್ದಾರೆ. ಅಲ್ಲದೆ, ಇವು ಕೂಡ ಪರಿಪೂರ್ಣ ಮಾಹಿತಿ ಹಾಗೂ ನಂಬಲರ್ಹ ದಾಖಲೆಗಳಾಗಿ ಕಂಡು ಬರುವುದಿಲ್ಲ.ಉದಾಹರಣೆಗೆ ಟ್ಯೂಬ್‌ಲೈಟ್‌ಗಳು ಮಾಸಿಕವಾಗಿ ಶೇ 10ರಷ್ಟು ಹಾಗೂ ವಾರ್ಷಿಕವಾಗಿ ಶೇ 120ರಷ್ಟು ಹಾಳಾಗುತ್ತವೆ ಎಂದು ನಿರ್ಧರಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಆದರೆ, ಈ ಸಾಲಿನಲ್ಲಿ ಬದಲಾಯಿಸಲಾದ ಬೀದಿ ದೀಪಗಳ ವಿವರಗಳನ್ನು ಅಂದಾಜಿನಲ್ಲಿ ಸೇರಿಸುವ ಪೂರ್ವದಲ್ಲಿ ದತ್ತಾಂಶ ಲೆಕ್ಕಾಚಾರದ ದಾಖಲೆಗಳೊಂದಿಗೆ ಪರಿಶೀಲಿಸಿದಾಗ, 27 ಪ್ಯಾಕೇಜ್‌ಗಳಲ್ಲಿ 60,673 ಟ್ಯೂಬ್‌ಲೈಟ್‌ಗಳ ಬದಲಿಗೆ ವಾರ್ಷಿಕ 72,916 ಬದಲಾಯಿಸಬೇಕಾಗಿರುತ್ತದೆ.ಆದರೆ, ವಾಸ್ತವವಾಗಿ 42,488 ಟ್ಯೂಬ್‌ಲೈಟ್ ಮಾತ್ರ ಬದಲಾಯಿಸಿರುವುದು ದೃಢಪಟ್ಟಿದೆ. ಅಂದರೆ, ಅಂದಾಜು ಪಟ್ಟಿಯಂತೆ ಶೇ 120ರ ಬದಲಿಗೆ ಶೇ 69.92ರಷ್ಟು ದೀಪಗಳನ್ನು ಮಾತ್ರ ಬದಲಾಯಿಸಿರುವುದು ಕಂಡು ಬಂದಿದೆ. ಈ ಶೇಕಡಾವಾರು ಬೀದಿ ದೀಪಗಳ ಬದಲಾವಣೆಯನ್ನು ಆಧಾರವಾಗಿಟ್ಟುಕೊಂಡು 2009-10ನೇ ಸಾಲಿನ ಅಂದಾಜುಪಟ್ಟಿ ತಯಾರಿಸಿ ಟೆಂಡರ್ ಕರೆದಿದ್ದರೆ ವಾರ್ಷಿಕ 13,53,790 (ಟೆಂಡರ್ ಪ್ರೀಮಿಯಂ ಹೊರತುಪಡಿಸಿ) ರೂಪಾಯಿಗಳನ್ನು ಉಳಿಸಬಹುದಾಗಿತ್ತು.ಉಳಿತಾಯ ಮಾಡಬಹುದಿತ್ತು: ಇದೇ ರೀತಿ, 2009-10 ಹಾಗೂ 2010-11ನೇ ಸಾಲಿನ ಅಂದಾಜುಪಟ್ಟಿಯನ್ನು ತುಲನೆ ಮಾಡಿ ವಾಸ್ತವವಾಗಿ ಬದಲಾಯಿಸಿರುವ ಟ್ಯೂಬ್‌ಲೈಟ್ ಹಾಗೂ ಇತರೆ ವಿದ್ಯುತ್ ಉಪಕರಣಗಳ ಸಂಖ್ಯೆಯನ್ನು ಅವಲೋಕಿಸಿದಾಗ ಕ್ರಮವಾಗಿ ರೂ. 23,46,299 ಹಾಗೂ 31,93,275 ರೂಪಾಯಿಗಳನ್ನು ಉಳಿಸಬಹುದಾಗಿತ್ತು.ಒಟ್ಟಾರೆ ಮೂರು ವರ್ಷಗಳಲ್ಲಿ 68,93,363 ರೂಪಾಯಿಗಳನ್ನು ಉಳಿತಾಯ ಮಾಡಬಹುದಿತ್ತು. ಆದರೆ, ಅಂದಾಜು ಪಟ್ಟಿ ತಯಾರಿಸುವಾಗ ಈ ಅಂಶವನ್ನು ಗಣನೆಗೆ ತೆಗೆದುಕೊಂಡಿಲ್ಲ. ಇದರಿಂದ ಗುತ್ತಿಗೆದಾರರಿಗೆ ಅನಪೇಕ್ಷಿತ ಲಾಭ ಮಾಡಿಕೊಟ್ಟಂತಾಗಿದೆ ಎಂದು ವರದಿ ತಿಳಿಸಿದೆ.ಅದೇ ರೀತಿ, ಟ್ಯೂಬ್ ಲೈಟ್ ಸೇರಿದಂತೆ ಮೆಟಲ್ ಹಲ್ಯಾಡ್ 250/400, ಸೋಡಿಯಂ ವೇಫರ್ 250/400, ಮರ್ಕ್ಯೂರಿ ವೇಫರ್ 125/400 ಬೀದಿ ದೀಪಗಳನ್ನು ಪರಿಶೀಲಿಸಿದಾಗ ಪ್ರತಿ ವರ್ಷವೂ ಗುತ್ತಿಗೆದಾರ ವಾಸ್ತವವಾಗಿ ಬದಲಾಯಿಸಿರುವ ಬಲ್ಬು ಹಾಗೂ ಇತರೆ ಉಪಕರಣಗಳ ಅಂಕಿ-ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಸಮರ್ಥನೆಗೆ ಸಿಗದ ಬೀದಿ ದೀಪ ಹಾಳಾಗುವ ವಿವರಗಳ ದತ್ತಾಂಶದ ಆಧಾರದ ಮೇಲೆ ಅಂದಾಜು ಪಟ್ಟಿ ತಯಾರಿಸಿರುವುದನ್ನೇ ಆಧಾರವಾಗಿಟ್ಟುಕೊಂಡು, ಹೊಸದಾಗಿ ಟೆಂಡರ್ ಕೂಡ ಕರೆಯದೇ ಹಳೇ ಗುತ್ತಿಗೆದಾರರನ್ನೇ ಮುಂದುವರಿಸಿರುವುದರಿಂದ ಮೂರು ವರ್ಷಗಳಲ್ಲಿ ಗುತ್ತಿಗೆದಾರರಿಗೆ ಒಟ್ಟು ರೂ. 1.83 ಕೋಟಿಗಳಷ್ಟು ಅನಪೇಕ್ಷಿತ ಲಾಭವಾಗಿದೆ ಎಂದು ವರದಿ ತಿಳಿಸಿದೆ.ಈ ಮಧ್ಯೆ, ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ವಿವರ ಒದಗಿಸದ ಹಾಗೂ ಷರತ್ತುಗಳನ್ನು ಸರಿಯಾಗಿ ಪಾಲಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸುವುದರ ಜತೆಗೆ, ದಂಡ ವಿಧಿಸುವುದು ಸೂಕ್ತ ಎಂದು ಬಿಬಿಎಂಪಿ ಮುಖ್ಯ ಲೆಕ್ಕ ಪರಿಶೋಧಕರ ಕಚೇರಿಯು ಶಿಫಾರಸು ಮಾಡಿದೆ.

23 ಕೋಟಿಯ್ಲ್ಲಲೇ ನಿರ್ವಹಣೆ

ಬೀದಿ ದೀಪಗಳ ನಿರ್ವಹಣೆಗಾಗಿ ಗುತ್ತಿಗೆದಾರರು ಪ್ರತಿ ವರ್ಷ 28 ಕೋಟಿ ರೂ. ಗಳಷ್ಟು ಬಿಲ್ ಪಡೆಯುತ್ತಿದ್ದಾರೆ. ಒಂದು ವಲಯಕ್ಕೆ ತಿಂಗಳಿಗೆ 64ರಿಂದ 65 ಲಕ್ಷ ರೂ. ಖರ್ಚು ತೋರಿಸಲಾಗುತ್ತಿದೆ. ಆದರೆ, ಬಲ್ಬು ಅಥವಾ ಚೋಕ್ ಬದಲಾಯಿಸುವುದಕ್ಕೆ ಗುತ್ತಿಗೆದಾರರು ಸರಿಯಾದ ದಾಖಲೆ ಕೊಡುತ್ತಿಲ್ಲ.

 

ಕೆಲವು ಕಂಪೆನಿಗಳ ಬಲ್ಬು ಅಥವಾ ಚೋಕ್‌ಗಳು 3-4ವರ್ಷ ಬಾಳಿಕೆ ಬಂದರೂ ಪ್ರತಿ ವರ್ಷ ಬದಲಾಯಿಸಿರುವುದಾಗಿ ಬಿಲ್ ಪಡೆಯಲಾಗುತ್ತಿದೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಈಗಲೂ ವೈಜ್ಞಾನಿಕ ರೀತಿಯಲ್ಲಿ ಬೀದಿ ದೀಪಗಳನ್ನು ನಿರ್ವಹಿಸುವುದಾದರೆ ಇಡೀ ನಗರಕ್ಕೆ ವಾರ್ಷಿಕ 23 ಕೋಟಿ ರೂಪಾಯಿ ಸಾಕು.

-ಎಸ್. ಹರೀಶ್ ಮಾಜಿ ಉಪ ಮೇಯರ್ಗುತ್ತಿಗೆದಾರರಿಗೇ ನಿರ್ವಹಣೆ ಹೊಣೆ..

ಸದ್ಯದಲ್ಲೇ  ಹೊಸದಾಗಿ  ಕರೆಯುವ ಬೀದಿ ದೀಪಗಳ ಮರು ಟೆಂಡರ್‌ನಲ್ಲಿ ಬೀದಿ ದೀಪಗಳ  ಸರಬರಾಜು  ಹಾಗೂ ನಿರ್ವಹಣೆ ಹೊಣೆಯನ್ನು ನಿರ್ದಿಷ್ಟ ವರ್ಷಗಳ ಅವಧಿಗೆ ಗುತ್ತಿಗೆ ದಾರರಿಗೇ ವಹಿಸಲಾಗುತ್ತಿದೆ. ಗುತ್ತಿಗೆ ದಾರರು ಟೆಂಡರ್‌ನಲ್ಲಿ ನಮೂದಿಸಿದ ಮೊತ್ತಕ್ಕೆ ಬೀದಿ ದೀಪಗಳನ್ನು ನಿರ್ವಹಣೆ ಮಾಡಬೇಕು. ಇದರಿಂದ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.ನಗರದ 198 ವಾರ್ಡ್‌ಗಳ ಬೀದಿ ದೀಪಗಳ ನಿರ್ವಹಣೆಗೆ 127 ಪ್ಯಾಕೇಜ್‌ಗಳಲ್ಲಿ ಸುಮಾರು 25ರಿಂದ 30 ಕೋಟಿ ರೂ. ಮರು ಟೆಂಡರನ್ನು ಶೀಘ್ರ ಕರೆಯಲಾಗುವುದು. ಯಾವುದೇ `ಗೋಲ್‌ಮಾಲ್~ಗೆ ಅವಕಾಶ ವಿಲ್ಲದಂತೆ ಗುತ್ತಿಗೆದಾರರಿಗೆ ಷರತ್ತು ವಿಧಿಸಲಾಗುವುದು.

-ಎಂ.ಕೆ. ಶಂಕರಲಿಂಗೇಗೌಡಆಯುಕ್ತರು, ಬಿಬಿಎಂಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.