ಬೀದಿ ನಾಯಿ ಹಾವಳಿ : ಪ್ರಮಾಣಪತ್ರ ಸಲ್ಲಿಸಲು ಸೂಚನೆ

7

ಬೀದಿ ನಾಯಿ ಹಾವಳಿ : ಪ್ರಮಾಣಪತ್ರ ಸಲ್ಲಿಸಲು ಸೂಚನೆ

Published:
Updated:

ಬೆಂಗಳೂರು: ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಎಂಟು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.`ಬೀದಿ ನಾಯಿಗಳನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ, ಸಮಸ್ಯೆ ನಿಯಂತ್ರಿಸಬಹುದು. ಆದರೆ ಸಮಸ್ಯೆ ಪರಿಹರಿಸುವ ಸಂಬಂಧ ಬಿಬಿಎಂಪಿ ಸ್ಪಷ್ಟ ಯೋಜನೆ ರೂಪಿಸಿಲ್ಲ. ಬೀದಿ ನಾಯಿಗಳ ಸಮಸ್ಯೆಯನ್ನು ಹಿಂಸಾತ್ಮಕವಲ್ಲದ ರೀತಿಯಲ್ಲೇ ಪರಿಹರಿಸಬೇಕು ಎಂದು ಕಾನೂನು ಹೇಳುತ್ತದೆ~ ಎಂದು ಕೆಲವು ಸ್ವಯಂ ಸೇವಾ ಸಂಸ್ಥೆಗಳ ಪರ ವಕೀಲರು ವಾದಿಸಿದರು.ಬೀದಿ ನಾಯಿಗಳನ್ನು ಕೆರಳಿಸಿದರೆ ಅವು ಮನುಷ್ಯರ ಮೇಲೆ ಎರಗುತ್ತವೆ. ಬೆಂಗಳೂರಿನಲ್ಲಿ ವರದಿಯಾದ ಶೇಕಡ 95ರಷ್ಟು ಪ್ರಕರಣಗಳು ಇದೇ ರೀತಿಯವು. ಇದೇ ಜೂನ್ 15ರಂದು ಟ್ಯಾನರಿ ರಸ್ತೆಯಲ್ಲಿ ಮೂರು ವರ್ಷದ ಬಾಲಕಿ ಬೀದಿ ನಾಯಿಗೆ ಒದೆಯಲು ಮುಂದಾದ ಕಾರಣ, ನಾಯಿ ಅವಳ ಕೆನ್ನೆಗೆ ಕಚ್ಚಿತು ಎಂದು ಬಿಬಿಎಂಪಿ ಅಧಿಕಾರಿಗಳು ನ್ಯಾಯಪೀಠಕ್ಕೆ ವಿವರಣೆ ನೀಡಿದರು.

ಕಬ್ಬನ್ ಉದ್ಯಾನಕ್ಕೆ ಭೇಟಿ ನೀಡುವವರ ಪೈಕಿ ಬಹುಪಾಲು ಮಂದಿ, ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ಆ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಇದೂ ಕಾರಣ ಎಂದು ಅಧಿಕಾರಿಗಳು ವಿವರಣೆ ನೀಡಿದರು.ಸಾರ್ವಜನಿಕರಿಗೆ ಉಪಟಳ ನೀಡುವ ಬೀದಿ ನಾಯಿಗಳನ್ನು ನಿಯಂತ್ರಿಸಿ. ಆದರೆ ಕ್ರೌರ್ಯದ ಮಾರ್ಗ ಅನುಸರಿಸುವುದು ಬೇಡ ಎಂದು ಬಿಬಿಎಂಪಿಗೆ ಮೌಖಿಕ ಸೂಚನೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry