ಭಾನುವಾರ, ಏಪ್ರಿಲ್ 18, 2021
32 °C

ಬೀದಿ ಬದಿಯಲ್ಲೇ ತರಕಾರಿ ವ್ಯಾಪಾರ..

ಪ್ರಜಾವಾಣಿ ವಾರ್ತೆ/ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಮಂಡ್ಯ: ನಾವು ದಿನನಿತ್ಯ ಆಹಾರದಲ್ಲಿ ಬಳಸುವ ತರಕಾರಿಗಳನ್ನು ರಸ್ತೆ ಬದಿಯಲ್ಲಿ, ಗಟಾರಿನ ದಂಡೆ ಮೇಲೆ, ಕಸದ ರಾಶಿಯ ಪಕ್ಕದಲ್ಲಿಟ್ಟುಕೊಂಡು ಮಾರಲಾಗುತ್ತಿದೆ.ಇದು ಮಂಡ್ಯದಲ್ಲಿನ ತರಕಾರಿ ಮಾರುಕಟ್ಟೆಯ ದುಸ್ಥಿತಿ.ಮಂಡ್ಯದ ತರಕಾರಿ ವ್ಯಾಪಾರವೆಲ್ಲ ರೈಲ್ವೆ ಹಳಿಯ ಪಕ್ಕದಲ್ಲಿರುವ ರಸ್ತೆಯಲ್ಲಿಯೇ ನಡೆಯುತ್ತದೆ. ಅವರು ಕುಳಿತುಕೊಳ್ಳುವ ಜಾಗದ ಹಿಂದೆಯೇ ಗಟಾರವಿದೆ. ಅದರ ಹಿಂದೆ ಕಸದ ರಾಶಿಯೂ ಬಿದ್ದಿರುತ್ತದೆ. ಇವುಗಳ ಮಧ್ಯೆಯೇ ಮಾರಾಟ ನಡೆಯುತ್ತದೆ.ತರಕಾರಿ ಮಾರಾಟ ಮಾಡಲು ಹಳೆಯದಾದ ತರಕಾರಿ ಮಾರುಕಟ್ಟೆ ಕಟ್ಟಡವೊಂದಿದೆ. ಅಲ್ಲಿಯೇ ಮಳಿಗೆಗಳ ಮೇಲ್ಛಾವಣಿಯ ಸಿಮೆಂಟ್ ಎಲ್ಲ ಕಿತ್ತಿ, ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ ಅವುಗಳಿಗೆ ಬೀಗ ಜಡಿದು ಹೊರಗಡೆಯೇ ವ್ಯಾಪಾರ ಮಾಡಲಾಗುತ್ತದೆ.ಇನ್ನು ಕೆಲವರು ರಸ್ತೆಯ ಎರಡೂ ಬದಿಗಳಲ್ಲಿ ತರಕಾರಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಬಿಸಿಲಿನ ತಾಪ, ಮಳೆ ನೀರಿನ ಕಾಟ ತಪ್ಪಿಸಿಕೊಳ್ಳಲು ತಾತ್ಕಾಲಿಕವಾಗಿ ನಾಲ್ಕು ಬಡಿಗೆಗಳನ್ನು ಕಟ್ಟಿ ಮೇಲೆ ಪ್ಲಾಸ್ಟಿಕ್ ಹೋದಿಕೆ ಹಾಕಿರುತ್ತಾರೆ.ಆದರೆ ಈ ವ್ಯವಸ್ಥೆ ಅವರಿಗೆ ಬಿಸಿಲಿನ ತಾಪದಿಂದಾಗಲೀ ಅಥವಾ ಮಳೆಯ ನೀರಿನ ಕಾಟದಿಂದಾಗಲೀ ತಪ್ಪಿಸುವುದಿಲ್ಲ. ಬಿಸಿಲಿನ ಝಳ ಹಾಗೂ ಮಳೆಯ ನೀರಿನಿಲ್ಲಿ ತೋಯಿಸಿಕೊಂಡೇ ವ್ಯಾಪಾರ ಮಾಡುತ್ತಾರೆ.

ರಸ್ತೆಯ ಎರಡೂ ಬದಿಗೆ ತರಕಾರಿ ಮಾರುವವರಿದ್ದರೆ, ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿ, ತರಕಾರಿ ಖರೀದಿಗೆ ಮುಂದಾಗುತ್ತಾರೆ ಗ್ರಾಹಕರು.ಕಾಲಿಡಲು ಕಷ್ಟವಿರುವಂತಹ ಇಂತಹ ಪರಿಸ್ಥಿತಿಯಲ್ಲಿಯೇ ಆ ಕಡೆಯಿಂದ ಈ ಕಡೆ ಬರುವವರು, ಈ ಕಡೆಯಿಂದ ಆ ಕಡೆಗೆ ವಾಹನಗಳ ಮೇಲೆ ಹೋಗುವ ಸಾರ್ವಜನಿಕರು ಸರ್ಕಸ್ ಮಾಡತ್ತಲೇ ಸಾಗಬೇಕಾದ ಸ್ಥಿತಿಯಿದೆ. ಉಸಿರು ಬಿಗಿ ಹಿಡಿದುಕೊಂಡೇ ವಾಹನ ಚಲಾಯಿಸಬೇಕು. ಇಲ್ಲದಿದ್ದರೆ ಅಪಘಾತ ಗ್ಯಾರಂಟಿ.ಸ್ಥಳಾಂತರ: ಹಳೆ ತಾಲ್ಲೂಕು ಕಚೇರಿ ಆವರಣದಲ್ಲಿ ತರಕಾರಿ ಮಾರುಕಟ್ಟೆಗೆಂದು ಮಳಿಗೆಗಳನ್ನು ನಿರ್ಮಿಸಲಾಗಿದೆ. ವಾಹನ ನಿಲ್ಲಿಸಲು ಜಾಗವಿಲ್ಲ ಹಾಗೂ ಜನರು ಬರುವುದಿಲ್ಲ ಎಂಬ ಕಾರಣಕ್ಕೆ ಹೋಗಲಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ವ್ಯಾಪಾರಿಯೊಬ್ಬರು.ಮಳೆ ಬಂತೆಂದರೆ ಸಾಕು ಇಲ್ಲಿಯೇ ಸ್ಥಿತಿಯನ್ನು ನೆನಸಿಕೊಳ್ಳುವ ಹಾಗಿರುವುದಿಲ್ಲ. ರಸ್ತೆ ಬದಿಯ ಪ್ರದೇಶವೆಲ್ಲ ಕೆಸರುಮಯವಾಗಿರುತ್ತದೆ. ಅದರ ಮೇಲೆಯೇ ಪ್ಲಾಸ್ಟಿಕ್ ಚೀಲ ಇಟ್ಟುಕೊಂಡು ಮಾರಾಟ ಮಾಡಬೇಕಾದ ಸ್ಥಿತಿ ವ್ಯಾಪಾರಿಗಳದ್ದು.ಕೆಸರಿನಲ್ಲಿಟ್ಟಿರುವ ತರಕಾರಿಯನ್ನು ಕೆಸರಿನಲ್ಲಿ ಕಾಲಿಟ್ಟುಕೊಂಡೇ ಹೋಗಿ ತರಬೇಕಾದಂತಹ ಸ್ಥಿತಿ ಗ್ರಾಹಕರದ್ದು. ಆಗಾಗ ಸಭೆಗಳಲ್ಲಿ ತರಕಾರಿ ಮಾರುಕಟ್ಟೆಯನ್ನು ಸುಸಜ್ಜಿತಗೊಳಿಸುವ ಮಾತುಗಳು ಕೇಳಿ ಬರುತ್ತವೆ.

ಹೊಸದಾಗಿಯೇ ಉತ್ತಮವಾದ ಮಾರುಕಟ್ಟೆ ನಿರ್ಮಿಸುವ ಕುರಿತೂ ಚರ್ಚೆಗಳು ಆಗುತ್ತವೆ. 2010ರಲ್ಲಿ ವಿಶೇಷ ಅನುದಾನವೆಂದು 30 ಕೋಟಿ ರೂಪಾಯಿ ನೀಡಲಾಗಿತ್ತು. ಅದರಲ್ಲಿ ಇದನ್ನು ದುರಸ್ತಿಗೊಳಿಸುವ ಕೆಲಸ ಆಗಿಲ್ಲ. ಈಗ ಮತ್ತೆ 30 ಕೋಟಿ ರೂಪಾಯಿ ಬಿಡುಗಡೆ ಆಗುತ್ತಿದೆ. ಈ ಬಾರಿಯಾದರೂ ದುರಸ್ತಿಯಾಗುವುದೇ ಎಂದು ಕಾದು ನೋಡಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.