ಬೀದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ

7

ಬೀದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ

Published:
Updated:

ಬೆಂಗಳೂರು: ನಗರದ ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಇತ್ತೀಚೆಗೆ ತೆರವುಗೊಳಿಸಿದ ಅಂಗಡಿಗಳ ಮಾಲೀಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೋಮವಾರ ವಿಧಾನಸಭೆಗೆ ತಿಳಿಸಿದರು.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ, ರಸ್ತೆ ಬದಿ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.ರಸ್ತೆ ಬದಿ ವ್ಯಾಪಾರಿಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಆದರೆ ಈಚಿನ ದಿನಗಳಲ್ಲಿ ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿ ಹಾಕಿಕೊಳ್ಳುವ ಪ್ರವೃತ್ತಿ ಹೆಚ್ಚಿದ ಕಾರಣ ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಹೈಟೆಕ್ ಸಿಟಿ. ವಿದೇಶಿ ಗಣ್ಯರು ಬರುತ್ತಾರೆ. ಸ್ವಚ್ಛತೆ ಕಾಪಾಡಬೇಕಾಗುತ್ತದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕ ಸುರಕ್ಷೆ ದೃಷ್ಟಿಯಿಂದ ಬಿಬಿಎಂಪಿ ಈ ಅಂಗಡಿಗಳನ್ನು ತೆರವುಗೊಳಿಸಿದೆ ಎಂದು ಅವರು ಸಮರ್ಥಿಸಿಕೊಂಡರು.ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯ, `ಕಾರ್ಪೊರೇಷನ್ ಕಮಿಷನರ್ ಹೇಳಿಕೆ ನೀಡಿದಂತೆ ಉತ್ತರಿಸಿದರೆ ಹೇಗೆ? ಪರ್ಯಾಯ ವ್ಯವಸ್ಥೆ ಆಗುವವರೆಗೆ ಅಲ್ಲಿ ವ್ಯಾಪಾರ ನಡೆಸಲು ಅವಕಾಶ ಕೊಡಬೇಕು. 1994ರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಭರವಸೆಯ ಮಾತುಗಳು ಕೇಳಿಬಂದಿವೆ. ಆದರೆ ಕ್ರಿಯೆಗೆ ಇಳಿದಿಲ್ಲ. ಇದಕ್ಕೆ ಪಾಲಿಕೆಯೇ ಹೊಣೆ~ ಎಂದು ಟೀಕಿಸಿದರು.`ಬಡ ಕುಟುಂಬಗಳ 200ಕ್ಕೂ ಹೆಚ್ಚು ವ್ಯಾಪಾರಸ್ಥರು 50 ವರ್ಷಗಳಿಂದ ಅಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಅವರಲ್ಲಿ 60 ಮಂದಿಗೆ ಪರವಾನಗಿ ಇದೆ. ಅವರನ್ನೆಲ್ಲ ಏಕಾಏಕಿ ಒಕ್ಕಲೆಬ್ಬಿಸಿದರೆ ಆ ಬಡ ಕುಟುಂಬಗಳ ಗತಿ ಏನು~ ಎಂದು ಅವರು ಪ್ರಶ್ನಿಸಿದರು.ದೋಸೆ-ದೂರು: ಅಲ್ಲಿ ವಿದ್ಯಾರ್ಥಿ ಭವನ ಹೋಟೆಲ್ ಇದೆ. ದೋಸೆ, ಇಡ್ಲಿ ತಿನ್ನಲು ಬರುವವರು ಯಾರೋ ದೂರು ನೀಡಿರಬೇಕು. ಅಧಿಕಾರಿಗಳು ಅದನ್ನೇ ನೆಪ ಮಾಡಿಕೊಂಡು ಯಂತ್ರಗಳನ್ನು ನುಗ್ಗಿಸಿ ಅಂಗಡಿಗಳನ್ನು ಉರುಳಿಸಿದರೆ ಹೇಗೆ? ಇದರಿಂದ ರೂ 2 ಕೋಟಿ ನಷ್ಟ ಆಗಿದೆ. ನಷ್ಟಕ್ಕೆ ಒಳಗಾದ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಪಾಲಿಕೆ ಈ ಕ್ರಮದಿಂದ ನಗರದ ಎಲ್ಲೆಡೆ ಇರುವ ಬೀದಿ ಬದಿ ವ್ಯಾಪಾರಿಗಳಲ್ಲಿ ಭಯ ಮೂಡಿದೆ ಎಂದು ಕಾಂಗ್ರೆಸ್‌ನ ರೋಷನ್ ಬೇಗ್ ಹೇಳಿದರು. ಜೀವನಕ್ಕೆ ಆಧಾರವಾಗಿದ್ದ ಅಂಗಡಿ ಕಳೆದುಕೊಂಡು ವ್ಯಾಪಾರಿಗಳು ನಿರ್ಗತಿಕರಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಕಳವಳಪಟ್ಟರು.ನೆ.ಲ.ನರೇಂದ್ರಬಾಬು, ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರೂ ವ್ಯಾಪಾರಿಗಳ ಪರವಾಗಿ ದನಿ ಎತ್ತಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry