ಮಂಗಳವಾರ, ಅಕ್ಟೋಬರ್ 22, 2019
26 °C

ಬೀರನ ರಣಕಹಳೆ

Published:
Updated:

ನಿರ್ದೇಶಕ ಸಂಜಯ್ ತಮ್ಮ `ಬೀರ~ ಚಿತ್ರದ ಶೂಟಿಂಗ್ ಅನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ಅಂದಮಾತ್ರಕ್ಕೆ, `ಬೀರ~ ಸಿಕ್ಕಾಪಟ್ಟೆ ಸೈಲೆಂಟು ಎನ್ನುವಂತಿಲ್ಲ. ತೆರೆಯ ಮೇಲೆ ಆತ ಸಿಕ್ಕಾಪಟ್ಟೆ ವೈಲೆಂಟ್ ಎನ್ನುವ ಇಂಗಿತ ನಿರ್ದೇಶಕರ ಮಾತಿನಲ್ಲಿತ್ತು.`ನಮ್ಮ ಪ್ರೀತಿಯ ರಾಮು~ ಎನ್ನುವ ಸದಭಿರುಚಿಯ ಚಿತ್ರ ನಿರ್ದೇಶಿಸಿದ್ದ ಸಂಜಯ್ ಈಗ ಸಂಪೂರ್ಣ ಭಿನ್ನವಾದ ಚಿತ್ರ ರೂಪಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಯುವಕನೊಬ್ಬ ಸಿಡಿದೇಳುವ ಕಥೆ `ಬೀರ~ ಚಿತ್ರದ್ದು. ಸಮಾಜದಲ್ಲಿನ ಕೆಡುಕಿನ ವಿರುದ್ಧ ಬೀರ ರಣಕಹಳೆ ಮೊಳಗಿಸುತ್ತಾನೆ. ಹಾಗೆಂದು ಇದು ಸಂಪೂರ್ಣ ಹೊಡಿಬಡಿ ಚಿತ್ರವಲ್ಲ, ಪ್ರೇಮದ ಆಯಾಮವೂ ಕಥೆಯಲ್ಲಿದೆ ಎಂದು ಸಂಜಯ್ ಸ್ಪಷ್ಟಪಡಿಸಿದರು.`ಗುಂಡ್ರಗೋವಿ~ ಚಿತ್ರದ ಮೂಲಕ ಹೆಸರು ಮಾಡಿದ್ದ ಸತ್ಯ ಅಲಿಯಾಸ್ ಸರ್ದಾರ್ ಸತ್ಯ `ಬೀರ~ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೀರನಾಗಿ ಅವರ ನಟನೆ ನಿರ್ದೇಶಕರಿಗೆ ತುಂಬಾ ಇಷ್ಟವಾಗಿದೆ. ಹಾಗೆ ನೋಡಿದರೆ ಸತ್ಯರ ಬಗೆಗಿನ ಸಂಜಯ್ ಪ್ರೇಮ ಈ ಚಿತ್ರದಿಂದ ಶುರುವಾದದ್ದಲ್ಲ. `ಆ ದಿನಗಳು~ ಚಿತ್ರದ ಪುಟ್ಟ ಪಾತ್ರದಲ್ಲಿನ ಅವರ ನಿರ್ವಹಣೆ ಸಂಜಯ್‌ಗೆ ಇಷ್ಟವಾಗಿತ್ತು. ಈ ಹುಡುಗನ ಚಿತ್ರವನ್ನು ನಾನು ನಿರ್ದೇಶಿಸಿಬೇಕು ಎಂದು ಅವರಿಗೆ ಆಗಲೇ ಅನ್ನಿಸಿತ್ತಂತೆ.`ಬೀರ~ ಚಿತ್ರದಲ್ಲಿನ ಸಾಹಸ ದೃಶ್ಯಗಳು ಸತ್ಯ ಅವರಿಗೆ ಹೊಸ ಅನುಭವ ನೀಡಿವೆ. ಥ್ರಿಲ್ಲರ್ ಮಂಜು ಹಾಗೂ ಕೌರವ ವೆಂಕಟೇಶ್ ವಿಭಿನ್ನ ದೃಶ್ಯಗಳನ್ನು ಸಂಯೋಜನೆ ಮಾಡಿದ್ದಾರಂತೆ. `ಬೀರ~ನ ಪಾತ್ರಕ್ಕೆ ವಿಭಿನ್ನ ಆಯಾಮಗಳು ಇರುವುದರಿಂದ ಸತ್ಯ ಅವರ ಪ್ರತಿಭೆಗೆ ಈ ಪಾತ್ರ ಸವಾಲಾಗಿ ಪರಿಣಮಿಸಿದೆ. ಬೀರ ಕ್ರಾಂತಿಕಾರಿಯಾದರೂ, ಪ್ರೇಮಿಸಲಿಕ್ಕೂ ಅವನಿಗೆ ಸಿಕ್ಕಾಪಟ್ಟೆ ಸಮಯ ಇದ್ದಂತಿದೆ. ಹಾಗಾಗಿಯೇ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಒಬ್ಬಾಕೆ ಶುಭಾ ಪೂಂಜಾ. ಮತ್ತೊಬ್ಬಳು ಚೆಲುವೆ ರೂಪಿಕಾ.

ಈಚಿನ ದಿನಗಳಲ್ಲಿ ಶುಭಾ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. `ಒಳ್ಳೆ ಪಾತ್ರಗಳಲ್ಲಷ್ಟೇ ಕಾಣಿಸಿಕೊಳ್ಳಲು ನಿರ್ಧರಿಸಿದ್ದು, ಬಂದ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳುತ್ತಿಲ್ಲ~ ಎಂದು ಶುಭಾ ಹೇಳಿದರು. `ಬೀರ~ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಮಗಳಾಗಿ ನಟಿಸುತ್ತಿರುವ ಅವರಿಗೆ, ತಮ್ಮದು ನಟನೆಗೆ ಅವಕಾಶವಿರುವ ಪಾತ್ರ ಅನ್ನಿಸಿದೆ. ಆಧುನಿಕ ಹುಡುಗಿಯ ಈ ಪಾತ್ರದಲ್ಲಿ ಚೆಲುವಿನ ಅನಾವರಣಕ್ಕೂ ಅವಕಾಶವಿದೆಯಂತೆ.ಜಾನ್ ಪೀಟರ್ ಸಂಗೀತ ನೀಡುತ್ತಿರುವ, ಬಾಲ ನಾಗೇಶ್ ಛಾಯಾಗ್ರಹಣದ `ಬೀರ~ ಚಿತ್ರದ ಚಿತ್ರೀಕರಣ ಮುಗಿದಿದೆ. ಆದರೆ, ಗೀತೆಗಳ ಶೂಟಿಂಗ್ ಇನ್ನೂ ಬಾಕಿಯಿದೆ. ಬ್ಯಾಂಕಾಕ್‌ನಲ್ಲಿ ಬೀರನ ಪ್ರೇಮಯುಗಳದ ಚಿತ್ರೀಕರಣಕ್ಕೆ ನಿರ್ದೇಶಕರು ಯೋಜನೆ ರೂಪಿಸಿದ್ದಾರೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)