ಬೀರೂರು: ರೈಲ್ವೆ ಪ್ರಯಾಣಿಕರ ಬವಣೆ

7

ಬೀರೂರು: ರೈಲ್ವೆ ಪ್ರಯಾಣಿಕರ ಬವಣೆ

Published:
Updated:

ಬೀರೂರು: ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮುಂಗಡ ಟಿಕೆಟ್ ಕಾಯ್ದಿರಿಸಿದ ನೂರಾರು ಪ್ರಯಾಣಿಕರು ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆ ತೆರಳಬೇಕಿದ್ದ ರೈಲುಗಳ ತಡ ಸಂಚಾರದಿಂದ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತುಕೊಳ್ಳಬೇಕಾದ ಪ್ರಸಂಗ ಶನಿವಾರ ಸಂಜೆ ನಡೆಯಿತು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳಬೇಕಾದ ಜನಶತಾಬ್ದಿ ರೈಲಿಗೆ ನಿತ್ಯ ಬೀರೂರು ರೈಲ್ವೆ ನಿಲ್ದಾಣದಿಂದ ನೂರಾರು ಪ್ರಯಾಣಿಕರು ಸಂಚರಿಸುತ್ತಾರೆ. ಹಬ್ಬದ ವೇಳೆ ಮತ್ತು ರಜಾ ಕಾಲದಲ್ಲಿ ಈ ಸಂಖ್ಯೆ ಹೆಚ್ಚುತ್ತದೆ.ಬದಲಾದ ವೇಳಾಪಟ್ಟಿಯಂತೆ ನಿತ್ಯ 5.30ಕ್ಕೆ ಬೀರೂರು ತಲುಪಬೇಕಾದ ರೈಲು ಶನಿವಾರ 7.15ಆದರೂ ಬಂದಿರದೆ ಪ್ರಯಾಣಿಕರು ಪರಿತಪಿಸುವಂತಾದರೆ 4.25ಕ್ಕೇ ಬರಬೇಕಿದ್ದ ದಾದರ್ -ಯಶವಂತಪುರ ರೈಲು 7 ಗಂಟೆಯಾದರೂ ಬಂದಿರಲಿಲ್ಲ. ಇನ್ನು ಮಧ್ಯಾಹ್ನ 4.40ಕ್ಕೆ ಶಿವಮೊಗ್ಗದಿಂದ ಬರುವ ಪ್ಯಾಸೆಂಜರ್ ರೈಲನ್ನು ಜತೆಯಾಗಿಸಿ ಬೆಂಗಳೂರಿಗೆ ತೆರಳಬೇಕಿದ್ದ ಹುಬ್ಬಳ್ಳಿ ಪ್ಯಾಸೆಂಜರ್‌ನಲ್ಲಿ ಕುಳಿತ ಪ್ರಯಾಣಿಕರು ಶಿವಮೊಗ್ಗದಿಂದ ಬರಬೇಕಿದ್ದ ರೈಲು 7ಗಂಟೆಯಾದರೂ ಬಾರದೆ ಫಜೀತಿಗೆ ಈಡಾಗಿದ್ದರು. ರೈಲು ಇಲ್ಲಿಂದ ಹೊರಟರೂ ಬೆಂಗಳೂರು ತಲುಪುವ ವೇಳೆಗೆ ಅಪರಾತ್ರಿಯಾಗಿರುತ್ತದೆ. ಆ ಸಮಯದಲ್ಲಿ ನಗರದ ವಿವಿಧ ಭಾಗಗಳಿಗೆ ತೆರಳುವುದು ಹೇಗೆ? ಮಕ್ಕಳು ಮತ್ತು ಹೆಚ್ಚು ಲಗೇಜ್ ಇದ್ದರೆ ನಾವು ತಲುಪಬೇಕಾದ ಸ್ಥಳವನ್ನು ಹೇಗೆ ತಲುಪುವುದು? ರೈಲ್ವೆ ಇಲಾಖೆ ತಡವಾಗಿ ಸಂಚರಿಸುವ ರೈಲುಗಳ ಬಗ್ಗೆ ಮೊದಲೇ ಏಕೆ ಸೂಚನೆ ನೀಡುವುದಿಲ್ಲ?  ಎಂದು ಪ್ರಯಾಣಿಕರು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry