ಭಾನುವಾರ, ಏಪ್ರಿಲ್ 18, 2021
30 °C

ಬೀರೂರು: ಹೆದ್ದಾರಿ ಕಾಮಗಾರಿ, ಕಟ್ಟಡ ತೆರವು ಪುನಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಭದ್ರಾ ನದಿಯಿಂದ ಕಡೂರು ಬೀರೂರು ಪಟ್ಟಣ ಮತ್ತು ಸುತ್ತಮುತ್ತಲ ಹಳ್ಳಿಗಳಿಗೆ ನೀರು ಪೂರೈಕೆ ಸಂಬಂಧ ಕಾಮಗಾರಿ ಚುರುಕಾಗಿ ನಡೆಯುತ್ತಿದ್ದು, ಬೀರೂರು ಪಟ್ಟಣದಲ್ಲಿ ಪುರಸಭೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬದಿಯ ಕಟ್ಟಡ ತೆರವು ಕಾರ್ಯಾಚರಣೆ ಬುಧವಾರ ಪುನಃ ಆರಂಭಗೊಂಡಿದೆ.ಈ ಮುನ್ನ ಪತ್ರಿಕಾ ಹೇಳಿಕೆಯಲ್ಲಿ ಮಂಗಳವಾರದವರೆಗೆ ಸ್ವಯಂ ಕಟ್ಟಡ ತೆರವುಗೊಳಿಸಲು ಗಡುವು ನೀಡಿದ್ದ ಪುರಸಭೆ ಮುಖ್ಯಾಧಿಕಾರಿ ಓಂಕಾರಮೂರ್ತಿ ನೇತೃತ್ವದಲ್ಲಿ ಈವರೆಗೆ ತೆರವು ಪೂರ್ಣಗೊಳಿಸದ ಕಟ್ಟಡಗಳ ಬಳಿ ತೆರಳಿದ ಪುರಸಭೆ ಜೆಸಿಬಿ ಯಂತ್ರ ಕೆಲವು ಕಟ್ಟಡಗಳನ್ನು ಮುಂದಾಯಿತು. ಈ ಹಂತದಲ್ಲಿ ಅನೇಕರು ತಾವೇ ಕಟ್ಟಡ ತೆರವುಗೊಳಿಸುವುದಾಗಿ ಭರವಸೆ ನೀಡಿದ ನಂತರ ಜೆಸಿಬಿ ಯಂತ್ರ ಕಾರ್ಯಾಚರಣೆ ಸ್ಥಗಿತಗೊಳಿಸಿತು.ಇದೇ ಸಮಯದಲ್ಲಿ ಕೆಲವು ಕಟ್ಟಡ ಮಾಲೀಕರು ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ನಾವು ಈಗಾಗಲೇ 46- 48 ಅಡಿಗೆ ಕಟ್ಟಡಗಳನ್ನು ನೀವು ಪ್ರಕ್ರಿಯೆ ಆರಂಭಿಸುವ ಆರು ತಿಂಗಳು ಮೊದಲೇ ತೆರವುಗೊಳಿಸಿದ್ದು ಸಾಕಷ್ಟು ಹಾನಿ ಅನುಭವಿಸಿದ್ದೇವೆ. ನಾವು ನ್ಯಾಯಾಲಯದ ಮೊರೆ ಹೋಗದೆ ಪುರಸಭೆಯ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸ್ವಯಂ ಸ್ಫೂರ್ತಿಯಿಂದ ಕಟ್ಟಡ ತೆರವು ಮಾಡಿದ್ದೇವೆ ಎಂದರು.ವಿಧಾನ ಪರಿಷತ್ ಸಭಾಧ್ಯಕ್ಷರಾಗಿದ್ದ ಡಿ.ಎಚ್. ಶಂಕರಮೂರ್ತಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ 45 ಅಡಿಗೆ ತೆರವುಗೊಳಿಸುವಂತೆ ತೀರ್ಮಾನ ಕೈಗೊಂಡು ಅದರಂತೆ ಪುರಸಭೆ ಆಟೊ ಮೂಲಕ ನಡೆಸಿದ ಪ್ರಕಟಣೆಗೆ ಅನುಗುಣವಾಗಿ ನಾವು ಸ್ವತಃ ಕಟ್ಟಡ ತೆರವುಗೊಳಿಸಿದ್ದೆವು. ಆದರೆ ಈಗ 50 ಅಡಿಗೆ ಒಂದು ಇಂಚೂ ಕಡಿಮೆ ಇರದೆ ತೆರವುಗೊಳಿಸಬೇಕು ಎಂಬ ಅಧಿಕಾರಿಗಳ ಹಠ ಸರಿಯಲ್ಲ. ನಾವು ಇದ್ದ ಜಾಗ ಕಳೆದುಕೊಂಡು ಪರಿಹಾರವೂ ಇಲ್ಲದೆ ಅರ್ಧ ಬೀದಿ ಪಾಲಾಗಿದ್ದೇವೆ. 50 ಅಡಿಗೇ ತೆರವುಗೊಳಿಸಬೇಕು ಎಂದು ತೆರವಿಗೆ ಮುಂದಾದರೆ ನಾವು ನಿರ್ಗತಿಕರಾಗಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮೃದು ನಿಲುವು ತಾಳಿ ಆರೇಳು ತಿಂಗಳುಗಳ ಮುನ್ನವೇ ಸ್ವತಃ ತೆರವು ಮಾಡಿ 45 ಅಡಿಗಿಂತ ಹಿಂದೆ ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಯಥಾಸ್ಥಿತಿಯಲ್ಲಿ ಕಟ್ಟಡ ಉಳಿಸಿಕೊಡುವಂತೆ ಒತ್ತಾಯಿಸಿದರು.ಪುರಸಭೆ ಮುಖ್ಯಾಧಿಕಾರಿ ಓಂಕಾರಮೂರ್ತಿ ಪ್ರತಿಕ್ರಿಯಿಸಿ ಸ್ವಯಂ ಕಟ್ಟಡ ತೆರವುಗೊಳಿಸುವುದಾಗಿ ಕಟ್ಟಡ ಮಾಲೀಕರು ನೀಡಿದ ಭರವಸೆಯ ಮೇರೆ ಕಾರ್ಯಾಚರಣೆ ನಿಂತಿದೆ. ಏನೇ ಆದರೂ ಶನಿವಾರದ ವೇಳೆಗೆ 50 ಅಡಿಗೆ ಕಟ್ಟಡ ತೆರವುಗೊಳಿಸುವುದಾಗಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.