ಶನಿವಾರ, ಮಾರ್ಚ್ 6, 2021
32 °C
ಬೀಳಗಿ ಸಮೀಪ ಕಲ್ಲು ತಯಾರಿಕೆ: ಅಲೆಮಾರಿಗಳಿಗೆ ಕೈತುಂಬ ಕೆಲಸ

ಬೀಸುವ ಕಲ್ಲುಗಳಿಗೆ ಕುಗ್ಗದ ಬೇಡಿಕೆ

ಪ್ರಜಾವಾಣಿ ವಾರ್ತೆ/ಕಿಶನರಾವ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೀಸುವ ಕಲ್ಲುಗಳಿಗೆ ಕುಗ್ಗದ ಬೇಡಿಕೆ

ಹನುಮಸಾಗರ: ಅನಾದಿ ಕಾಲದಿಂದಲೂ ಸಮೀಪದ ಬೀಳಗಿ ಬೆಟ್ಟದ ಬೀಸುವ ಕಲ್ಲಿಗೆ ಪ್ರಸಿದ್ಧಿ ಪಡೆದಿದೆ. ಕಲ್ಲುಗಳು ತಿಳಿ ಗುಲಾಬಿ ಬಣ್ಣ ಹೊಂದಿರುವುದು, ಕೆತ್ತನೆಗೆ ಸೂಕ್ತವಾಗಿರುವುದು ಹಾಗೂ ಕೆತ್ತಿದಷ್ಟು ಕಲ್ಲಿನಲ್ಲಿ ನಾಜೂಕು ಹೊರಹೊಮ್ಮುವ ಕಾರಣ ಉತ್ತರ ಕರ್ನಾಟಕದಲ್ಲಿ ಈ ಬೀಸುವ ಕಲ್ಲು ಗೃಹಣಿಯರಿಗೆ ಅಚ್ಚುಮೆಚ್ಚು.ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕೆಲವು ಕುಟುಂಬಗಳು ಹಲವಾರು ವರ್ಷಗಳಿಂದ ಬೀಸುವಕಲ್ಲುಗಳನ್ನು ಕೆತ್ತನೆ ಮಾಡುವುದನ್ನೇ ಮೂಲ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬೀಸುವ ಕಲ್ಲುಗಳನ್ನೇ ಮರೆಸಿರುವ ಗ್ರೈಂಡರ್‌, ಮಿಕ್ಸರ್‌ಗಳ ಈ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗಾದರೂ ಅವಶ್ಯವಾಗಿರುತ್ತವೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಲವಾರು ಕುಟುಂಬಗಳು ಮಕ್ಕಳು ಮರಿಗಳೊಂದಿಗೆ ಗ್ರಾಮದ ಹೊರಭಾಗದಲ್ಲಿ ಜೋಪಡಿ ಹಾಕಿಕೊಂಡು ನೆಲೆಸಿ ಬದುಕು ಸಾಗಿಸುತ್ತಿದ್ದಾರೆ. ರೂ 50ಕ್ಕೆ ಒಂದು ಜೋಡಿ ಕಚ್ಚಾ ಕಲ್ಲುಗಳನ್ನು ಖರೀದಿಸಿ ಬೀಸುವ ಕಲ್ಲುಗಳನ್ನು ಕೆತ್ತನೆ ಮಾಡುತ್ತಾರೆ. ಒಬ್ಬ ವ್ಯಕ್ತಿ ಎರಡು ದಿನ ಕೆಲಸ ನಿರ್ವಹಿಸಿದರೆ ಮಾತ್ರ ಒಂದು ಜೋಡಿ ಬೀಸುವ ಕಲ್ಲು ತಯಾರಾಗುತ್ತವೆ. ಜೊತೆಗೆ ಬೀಸುವ ಕಲ್ಲಿನ ಮೇಲೆ ಅಂದವಾಗಿ ವಿವಿಧ ಚಿತ್ತಾರಗಳನ್ನು ಚಿತ್ರಿಸಿರುತ್ತಾರೆ. ಈ ರೀತಿ ಸಿದ್ಧಗೊಳಿಸಿದ ಕಲ್ಲುಗಳಿಗೆ ರೂ 500ರಿಂದ ರೂ 700ವರೆಗೆ ಮಾರಾಟವಾಗುತ್ತವೆ. ಹೆಣ್ಣುಮಕ್ಕಳು ಕಲ್ಲುಗಳನ್ನು ಕೆತ್ತನೆ ಮಾಡಿದರೆ ಪುರುಷರು ತಾವೇ ಹೊಂದಿರುವ ಸ್ವಂತ ವಾಹನದಲ್ಲಿ ಕೊಪ್ಪಳ ಜಿಲ್ಲೆ ಸೇರಿದಂತೆ ಧಾರವಾಡ, ರಾಯಚೂರು, ಗದಗ, ಕಾರವಾರ, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ಅಲೆಮಾರಿಯಾಗಿ ಮಾರಾಟ ಮಾಡುತ್ತಾರೆ.  ಎಲ್ಲ ಖರ್ಚು ವೆಚ್ಚ ತೆಗೆದರೆ ಒಂದು ಜೋಡಿ ಬೀಸುವ ಕಲ್ಲುಗಳಿಗೆ ರೂ 300 ಉಳಿಯುತ್ತದೆ ಎಂದು ಹೇಳುತ್ತಾರೆ.ಹೊಲ, ಮನೆ ಇಲ್ಲದೆ ಅಲೆಮಾರಿಯಾಗಿದ್ದ ಈ ಕುಟುಂಬಕ್ಕೆ ಈ ಕಲ್ಲುಗಳೇ ಆಸರೆ ಒದಗಿಸಿವೆ. ಆದಾರೂ ತಮ್ಮ ಮಕ್ಕಳು ತಮ್ಮಂತೆ ಆಗಬಾರದು ಎಂಬ ಉದ್ದೇಶದಿಂದ ಮಕ್ಕಳನ್ನೆಲ್ಲ ಮುದ್ದೇಬಿಹಾಳದಲ್ಲಿಯೇ ಇರಿಸಿ ಶಾಲೆಗೆ ಕಳುಹಿಸುತ್ತಿದ್ದಾರೆ.12 ವರ್ಷಗಳಿಂದ ಗ್ರಾಮದಲ್ಲಿ ನೆಲೆಸಿದ್ದೇವೆ. ಕೈತುಂಬ ಕೆಲಸವಿದೆ. ಆದರೆ ಬಿಸಿಲು, ಮಳೆಗೆ ಮೈಯೊಡ್ಡಿ ಕೆಲಸ ಮಾಡುವುದು ಅನಿವಾರ್ಯ.

ಮಹಾದೇವಿ ವಡ್ಡರ,
ಬೀಳಗಿಮುಖ್ಯಾಂಶಗಳು

* ಅಲೆಮಾರಿಗಳಾಗಿಯೇ ಕುಟುಂಬದ ಬದುಕು

* ಮಕ್ಕಳು ಒಂದು ಕಡೆ, ಕುಟುಂಬ ಮತ್ತೊಂದೆಡೆ

* ಗಾಳಿ, ಮಳೆಯಲ್ಲಿ ನಡೆಯುವ ನಿತ್ಯದ ಕಸುಬು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.