ಬುಂದೇಲ್‌ಖಂಡದಲ್ಲಿ ಎಲ್ಲವೂ ಬಡವರ ಹೆಸರಲ್ಲಿ

7

ಬುಂದೇಲ್‌ಖಂಡದಲ್ಲಿ ಎಲ್ಲವೂ ಬಡವರ ಹೆಸರಲ್ಲಿ

Published:
Updated:

ಝಾನ್ಸಿ: ಚುನಾವಣೆಯನ್ನು ಯುದ್ದ ಎನ್ನುವುದಾದರೆ ಉತ್ತರಪ್ರದೇಶ ಚುನಾವಣೆಯ ನಿಜವಾದ ಯುದ್ದಭೂಮಿಯ ಹೆಸರು ಬುಂದೇಲ್‌ಖಂಡ. ಬಿಎಸ್‌ಪಿ, ಕಾಂಗ್ರೆಸ್,ಬಿಜೆಪಿ ಮತ್ತು ಎಸ್‌ಪಿ ಸೇರಿದಂತೆ ನಾಲ್ಕೂ ಪಕ್ಷಗಳ ನಾಯಕರು ತಮ್ಮ ಪ್ರತಿಷ್ಠೆಯನ್ನು ಇಲ್ಲಿ ಪಣಕ್ಕಿಟ್ಟು ಹೋರಾಟಕ್ಕಿಳಿದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ  ಬುಂದೇಲಖಂಡ ಅದರ ಕೋಟೆಯಾಗಿತ್ತು. ಕಳೆದ ಚುನಾವಣೆಯಲ್ಲಿ ಇಲ್ಲಿನ 21 ಸ್ಥಾನಗಳಲ್ಲಿ ಹದಿನಾರು ಸ್ಥಾನಗಳನ್ನು ಬಿಎಸ್‌ಪಿ ಗೆದ್ದಿತ್ತು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾಯಕಲ್ಪ ಮಾಡಬೇಕೆಂದು ಹೊರಟ ರಾಹುಲ್‌ಗಾಂಧಿ ಮುಖ್ಯಮಂತ್ರಿ ಮಾಯಾವತಿ ವಿರುದ್ದ  ಯುದ್ಧ ಘೋಷಣೆ ಮಾಡಿದ್ದು ಇಲ್ಲಿಂದಲೇ. 

ಕಳೆದ ಚುನಾವಣೆಯಲ್ಲಿ ಖಾತೆಯನ್ನೇ ತೆರೆಯಲಾಗದ ಬಿಜೆಪಿ ಉಮಾಭಾರತಿಯವರನ್ನು ಕರೆತಂದು ಕಳೆದುಕೊಂಡಿರುವ ನೆಲೆಯನ್ನು ಮರಳಿ ಗಳಿಸುವ ಪ್ರಯತ್ನದಲ್ಲಿದೆ.  ಉಮಾಭಾರತಿ ಇದೇ ಪ್ರದೇಶಕ್ಕೆ ಸೇರಿರುವ ಚರ್ಖಾರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ತಾವು ನಂಬಿರುವ ಜಾತಿಗಳ ಬೆಂಬಲ ಇಲ್ಲದ ಈ ಪ್ರದೇಶ ಮುಲಾಯಂಸಿಂಗ್ ಅವರಿಗೂ ಒಂದು ಸವಾಲು.

ಮಧ್ಯಪ್ರದೇಶದ ಗಡಿಭಾಗದ ಏಳು ಜಿಲ್ಲೆಗಳನ್ನೊಳಗೊಂಡ ಬುಂದೇಲ್‌ಖಂಡ, ಬಂಜರು ಭೂಮಿಯ, ಬರಪೀಡಿತ, ಹಿಂದುಳಿದ ಪ್ರದೇಶ. ಮೂರು ಕಡೆ ಇದನ್ನು ಮಧ್ಯಪ್ರದೇಶ ಆವರಿಸಿಕೊಂಡಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಇಲ್ಲಿ ಸುಮಾರು ಒಂದು ಸಾವಿರ ಮಂದಿ ಒಂದೋ ಆತ್ಮಹತ್ಯೆ ಮಾಡಿಕೊಂಡು ಇಲ್ಲವೇ ಹಸಿವಿನಿಂದ ಸತ್ತಿದ್ದಾರೆ. ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಇದು 588. ಮಳೆಗಾಲದಲ್ಲಿಯೂ ಇಲ್ಲಿ ಮಳೆ ಬರುವುದು ಅಪರೂಪ. ಬೆಳೆಬೆಳೆದರೂ ಬರಡುಭೂಮಿಯಲ್ಲಿ ಇಳುವರಿ ಕಡಿಮೆ.  ಮನೆಮನೆಯಲ್ಲಿಯೂ ನಿರುದ್ಯೋಗಿಗಳಿದ್ದಾರೆ. ಕೈಕಾಲು ಗಟ್ಟಿಯಿದ್ದವರು, ದೆಹಲಿ, ಪಂಜಾಬ್, ಗುಜರಾತ್ ರಾಜ್ಯಗಳಿಗೆ ವಲಸೆ ಹೋಗುತ್ತಾರೆ, ಉಳಿದವರು ಇಲ್ಲಿಯೇ ನರಳಾಡುತ್ತಿದ್ದಾರೆ, ಅವರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ಹಸಿವಿನಿಂದ ಸಾಯುತ್ತಾರೆ.

`ನರೇಗಾ, ಬುಂದೇಲ್‌ಖಂಡ ಪ್ಯಾಕೇಜ್ ಮತ್ತು ಶಾಸಕರು ಹಾಗೂ ಸಂಸದರ ಅಭಿವೃದ್ದಿ ನಿಧಿಯಿಂದ ಸಾವಿರಾರು ಕೋಟಿ ರೂಪಾಯಿ ಇಲ್ಲಿಗೆ ತಂದು ಸುರಿಯಲಾಗಿದೆ. ಆದರೆ ಅದರಲ್ಲಿ ಸಾವಿರದ ಒಂದರಷ್ಟು ಕೂಡಾ ಜನರನ್ನು ತಲುಪಿಲ್ಲ. ಅವೆಲ್ಲವೂ ರಾಜಕಾರಣಿಗಳು ಮತ್ತು ಅಧಿಕಾರಿಗಳ ದುಷ್ಟಕೂಟ ತಿಂದುಹಾಕಿದೆ. ಅವರಲ್ಲಿ ರಾಹುಲ್ ಭಯ್ಯಾ, ಮಾಯಾವತಿ ಬೆಹೆನ್, ಉಮಾದೀದಿ ಹೀಗೆ ಎಲ್ಲರ ಹಿಂಬಾಲಕರಿದ್ದಾರೆ~ ಎನ್ನುತ್ತಾರೆ ಜಲೌನ್‌ನಲ್ಲಿ ಸ್ವಯಂಸೇವಾ ಸಂಸ್ಥೆಯನ್ನು ನಡೆಸುತ್ತಿರುವ ಪಂಕಜ್ ತೋಮರ್.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾಯಕಲ್ಪ ನೀಡುವ ಪ್ರಯತ್ನ ಪ್ರಾರಂಭಿಸಲು ಮತ್ತು ತಮ್ಮನ್ನು ಜನನಾಯಕನಾಗಿ ಬಿಂಬಿಸಿಕೊಳ್ಳಲು ಈ ಪ್ರದೇಶವೇ ಸರಿಯಾದ ಚಿಮ್ಮುಹಲಗೆ ಎಂದು ರಾಹುಲ್‌ಗಾಂಧಿ ಅವರಿಗೆ  ಅನಿಸಿರಬೇಕು.(ಇಲ್ಲವೇ ಯಾರಾದರೂ ಹೇಳಿ ಕೊಟ್ಟಿರಬಹುದು) ದಲಿತರೇ ಬಹುಸಂಖ್ಯೆಯಲ್ಲಿರುವ ಈ ಪ್ರದೇಶದ ದುಸ್ಥಿತಿಯನ್ನೇ ರಾಜಕೀಯ ಚರ್ಚೆಯ ಪ್ರಧಾನ ವಿಷಯವನ್ನಾಗಿ ಮಾಡಿ ಮಾಯಾವತಿಯವರಿಗೆ ಇರುವ ದಲಿತ ನಾಯಕಿಯ ಇಮೇಜನ್ನು ಭಂಗಗೊಳಿಸುವುದು ಅವರ ಕಾರ್ಯತಂತ್ರ ಆಗಿರಬಹುದು. ಕಳೆದೆರಡು ವರ್ಷಗಳಲ್ಲಿ ಬಹುಷಃ ತನ್ನ ಸ್ವಂತ ಕ್ಷೇತ್ರವಾದ ಅಮೇಠಿಗಿಂತ ಹೆಚ್ಚು ಅವರು ಇಲ್ಲಿ ಭೇಟಿ ನೀಡಿದ್ದಾರೆ. ಇಲ್ಲಿನ ದಲಿತರ ಮನೆಗಳಲ್ಲಿ ವಾಸ್ತವ್ಯಹೂಡಿದ್ದಾರೆ. ಪ್ರಧಾನಿಯವರನ್ನು ಎರಡು ಬಾರಿ ಇಲ್ಲಿಗೆ ಕರೆತಂದಿದ್ದಾರೆ. 7,366 ಕೋಟಿ ರೂಪಾಯಿಗಳ ಬುಂದೇಲ್‌ಖಂಡ ಪ್ಯಾಕೇಜ್  ಅನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಿದ್ದಾರೆ. ಈ ಹಣವನ್ನು ರಾಜ್ಯಸರ್ಕಾರ ದುರುಪಯೋಗ ಮಾಡಿದೆ ಎಂದು ಆರೋಪಿಸುತ್ತಾ ರಾಜಕೀಯವನ್ನೂ ಮಾಡಿದ್ದಾರೆ. ಇವೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಮತ ತಂದುಕೊಡಲಿದೆಯೇ? ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪ್ರಯಾಸ ಪಟ್ಟು ಗೆದ್ದದ್ದು ಮೂರು ಸ್ಥಾನಗಳನ್ನು ಮಾತ್ರ.

ಮಾಯಾವತಿ ಅವರ ಸಮಸ್ಯೆ ರಾಹುಲ್‌ಗಾಂಧಿ ಒಬ್ಬರೇ ಅಲ್ಲ, ಅವರು ಪಕ್ಷದಿಂದ ವಜಾಗೊಳಿಸಿದ ಮಾಜಿ ಸಚಿವ ಬಾಬುಸಿಂಗ್ ಕುಶವಾಹ ಕೂಡಾ ಬಿಎಸ್‌ಪಿ ವಿರುದ್ದ ಕತ್ತಿ ಹಿಡಿದು ನಿಂತಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಯಾದವರ ನಂತರದ ಸ್ಥಾನದಲ್ಲಿರುವ ಕುಶವಾಹಾ ಸಮುದಾಯ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 4.5ರಷ್ಟಿದೆ. ಬಿಎಸ್‌ಪಿಯ ಇನ್ನೊಬ್ಬ ನಾಯಕ ನಸೀಮುದ್ದೀನ್ ಸಿದ್ದಿಕಿ ಮತ್ತು ಕುಶವಾಹ ಅವರೇ ಕೂಡಿ ಬುಂದೇಲ್‌ಖಂಡದಲ್ಲಿ ಬಿಎಸ್‌ಪಿಯನ್ನು ಕಟ್ಟಿ ಬೆಳೆಸಿದವರು. ಈಗಾಗಲೇ ಹಲವರ ಪ್ರಾಣಬಲಿ ಪಡೆದಿರುವ ಸುಮಾರು ಎಂಟುವರೆ ಸಾವಿರ ಕೋಟಿ ರೂಪಾಯಿಗಳ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ ಹಗರಣದ ಪ್ರಮುಖ ಆರೋಪಿಯಾದ ಬಾಬುಸಿಂಗ್ ಕುಶವಾಹಾ ಅವರನ್ನು ಕೊನೆಗಳಿಗೆಯಲ್ಲಿ ಮಾಯಾವತಿ ಪಕ್ಷದಿಂದ ವಜಾಗೊಳಿಸಿದ್ದರು. ಕಳಂಕಿತ ಕುಶವಾಹ ಅವರನ್ನು ತಕ್ಷಣ ಬಿಜೆಪಿ ಅಪ್ಪಿಕೊಂಡಿತ್ತು. ಪಕ್ಷದೊಳಗೆಯೇ ವಿರೋಧ ವ್ಯಕ್ತವಾದ ನಂತರ ಅವರ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟಿದೆ. ಆದರೆ ಕುಶವಾಹ ರಾಜ್ಯದಾದ್ಯಂತ ಸಮ್ಮಳನಗಳನ್ನು ನಡೆಸಿ ಬಿಜೆಪಿ ಪರಪ್ರಚಾರ ನಡೆಸಿ ಮಾಯಾವತಿ ನಿದ್ದೆಗೆಡಿಸುತ್ತಿದ್ದಾರೆ.

ಈ ಪ್ರತಿಕೂಲ ಪರಿಸ್ಥಿತಿಯನ್ನು ನಿರೀಕ್ಷಿಸಿಯೋ ಏನೋ ಮಾಯಾವತಿ ಅವರು ಜನರ ಗಮನ ಬೇರೆ ಕಡೆ ಸೆಳೆಯಲು ಬುಂದೇಲ್‌ಖಂಡ ಎಂಬ ಪ್ರತ್ಯೇಕ ರಾಜ್ಯರಚನೆಯ  ಘೋಷಣೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ `ಬುಂದೇಲ್‌ಖಂಡ ಕಾಂಗ್ರೆಸ್~ ಎಂಬ ಸ್ಥಳೀಯ ಪಕ್ಷದ ಅಧ್ಯಕ್ಷ ಚಿತ್ರನಟ ರಾಜಾ ಬುಂದೇಲ್ ಅವರಂತಹ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಪ್ರತ್ಯೇಕ ರಾಜ್ಯದ ಬಗ್ಗೆ ಇಲ್ಲಿ ಮಾತನಾಡುವವರೇ ಇಲ್ಲ.

ಬಹಳಷ್ಟು ಕಡೆ ದಲಿತರು ಮತ್ತು ಯಾದವೇತರ ಹಿಂದುಳಿದ ಜಾತಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಬುಂದೇಲ್‌ಖಂಡದಲ್ಲಿ  ಸಮಾಜವಾದಿ ಪಕ್ಷಕ್ಕೆ ಬೆಂಬಲದ ಬಲ ಕಡಿಮೆ. ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ಲೋಧ್ ಮತ ಸೆಳೆಯುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಇಲ್ಲಿ ಪ್ರಚಾರ ನಡೆಸಿದರೂ ಮುಸ್ಲಿಮರು ಕೈಬಿಟ್ಟ ಕಾರಣದಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಿತ್ತು. ಬಿಎಸ್‌ಪಿಯನ್ನು ಹಿಂದಕ್ಕೆ ತಳ್ಳಿ ಮುಂದಕ್ಕೆ ಓಡಬೇಕಾದರೆ ಸಮಾಜವಾದಿ ಪಕ್ಷ ಈ ಬಾರಿ ಇಲ್ಲಿ ಒಂದಷ್ಟು ಸ್ಥಾನಗಳನ್ನು ಗಳಿಸಲೇಬೇಕು.

ಅನಿರೀಕ್ಷಿತವಾಗಿ ಒದಗಿಬಂದ ಇಬ್ಬರು ನಾಯಕರು ಈ ಪ್ರದೇಶದಲ್ಲಿ ಮತ್ತೆ ಎದ್ದು ನಿಲ್ಲುವ ಆಸೆಯನ್ನೇ ಬಿಟ್ಟುಬಿಟ್ಟಿದ್ದ ಬಿಜೆಪಿಯಲ್ಲಿ  ಭರವಸೆ ಹುಟ್ಟಿಸಿದ್ದಾರೆ.

ಹಲವರ ವಿರೋಧಗಳ ಹೊರತಾಗಿಯೂ ಉಮಾಭಾರತಿಯವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಖ್ಯ ಕಾರಣ ಅವರ ಲೋಧ್ ಜಾತಿ. ಮಧ್ಯಪ್ರದೇಶಕ್ಕೆ ಹೊಂದಿಕೊಂಡ ಬುಂದೇಲ್‌ಖಂಡ ಪ್ರದೇಶದಲ್ಲಿ ಲೋಧ್ ಜಾತಿ ಜನ ಗಣನೀಯ ಸಂಖ್ಯೆಯಲ್ಲಿದ್ದಾರೆ. ಲೋಧ್ ಜಾತಿಗೆ ಸೇರಿರುವ ಇನ್ನೊಬ್ಬನಾಯಕ ಕಲ್ಯಾಣ್‌ಸಿಂಗ್ ನಿರ್ಗಮನದಿಂದ ಆಗಿರವ ನಷ್ಟವನ್ನು ಉಮಾಭಾರತಿ ಮೂಲಕ ತುಂಬಿಕೊಳ್ಳುವ ಪ್ರಯತ್ನ ಬಿಜೆಪಿಯದ್ದು. ಆದರೆ ಮಧ್ಯಪ್ರದೇಶದಲ್ಲಿ ಉಮಾಭಾರತಿ ಚುನಾವಣಾ ಪ್ರಚಾರವನ್ನು ಕಂಡಿದ್ದವರಿಗೆ ಅವರ ಇಲ್ಲಿಯ ಪ್ರಚಾರ ಸಪ್ಪೆ ಎಂದು ಅನಿಸದೆ ಇರದು. ಮಧ್ಯಪ್ರದೇಶದಿಂದ ಸುಮಾರು 20 ಕಿ.ಮೀ.ದೂರದಲ್ಲಿರುವ ಚರ್ಖಾರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಉಮಾಭಾರತಿ ಮನಸ್ಸು ಈಗಲೂ ಹುಟ್ಟೂರಿನತ್ತಲೇ ಎಳೆಯುತ್ತಿರುವುದೂ ಇದಕ್ಕೆ ಕಾರಣ ಇರಬಹುದು. ಕಳಂಕಿತ ಬಾಬುಸಿಂಗ್ ಕುಶವಾಹಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತೀರ್ಮಾನದಿಂದಾಗಿ ಉತ್ತರಪ್ರದೇಶದಿಂದ ಹೊರಗೆ ಬಿಜೆಪಿ ತಲೆತಗ್ಗಿಸುವಂತಾಗಿರಬಹುದು. ಆದರೆ ರಾಜ್ಯದಲ್ಲಿ ಮುಖ್ಯವಾಗಿ ಬುಂದೇಲಖಂಡದಲ್ಲಿ `ತಲೆತಗ್ಗಿಸುವಂತಹ ಕೆಲಸ~ದಿಂದಾಗಿ ಬಿಜೆಪಿಗೆ ಲಾಭವೇ ಆಗಬಹುದು. ವಿಚಿತ್ರವೆಂದರೆ ರಾಜಕೀಯ ಪಕ್ಷಗಳ ಈ ಎಲ್ಲ ಪ್ರಹಸನಗಳು ನಡೆಯುತ್ತಿರುವುದು ಬಡವರ ಹೆಸರಲ್ಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry