ಬುಗಿಲೆದ್ದ ಜನಾಕ್ರೋಶಕ್ಕೆ 9 ಬಲಿ

7

ಬುಗಿಲೆದ್ದ ಜನಾಕ್ರೋಶಕ್ಕೆ 9 ಬಲಿ

Published:
Updated:
ಬುಗಿಲೆದ್ದ ಜನಾಕ್ರೋಶಕ್ಕೆ 9 ಬಲಿ

ಚಿಂತಾಮಣಿ: ಜನರು ಆಡಳಿತದ ಮೇಲೆ ನಂಬಿಕೆ ಕಳೆದುಕೊಂಡು ರೊಚ್ಚಿಗೆದ್ದರೆ ಏನಾಗುತ್ತದೆ ಎಂಬುದಕ್ಕೆ ತಾಲ್ಲೂಕಿನ ಬಾರ‌್ಲಹಳ್ಳಿ ಮತ್ತು ಯರ‌್ರಕೋಟೆ ಗ್ರಾಮದಲ್ಲಿ ಮಂಗಳವಾರ ನಡೆದ  9 ಜನರ ಕಗ್ಗೊಲೆ ನಿದರ್ಶನ. ಕಲ್ಲು, ಬಡಿಗೆ, ಕೈಯಲ್ಲಿ ಸಿಕ್ಕ ವಸ್ತುಗಳಿಂದ 9 ಜನರನ್ನು ಚಚ್ಚಿ, ಚಚ್ಚಿ ಕೊಲೆ ಮಾಡಿದ ಇತಿಹಾಸ ಜಿಲ್ಲೆಯಲ್ಲಿ ಈ ಹಿಂದೆಂದೂ ನಡೆದಿಲ್ಲ.  ದುಷ್ಕರ್ಮಿಗಳು ಗಡಿ ಆಚೆಯಿಂದ ನುಗ್ಗಿ ಈ ಗ್ರಾಮಗಳ ಜನರಲ್ಲಿ ಪ್ರತಿದಿನ ಮೂಡಿಸುತ್ತಿದ್ದ ಭಯ, ಆತಂಕ ಅವರಲ್ಲಿ ಆಕ್ರೋಶ, ಅಸಾಯಕತೆಯ ಮಡುವನ್ನೇ  ಸಷ್ಟಿಸಿತ್ತು. ಅಸಾಯಕತೆ, ಆಕ್ರೋಶ ಮಾನವೀಯತೆ ಕಣ್ಣಿಗೆ ಬಟ್ಟಿ ಕಟ್ಟಿ 9 ಪ್ರಾಣಗಳನ್ನು ತೆಗೆದುಕೊಂಡಿದೆ ಎಂಬ ವಾದ ಕೇಳಿಬರುತ್ತಿದೆ.ಮನುಷ್ಯನ ವಿರುದ್ಧ ಮನುಷ್ಯ ಇಷ್ಟೊಂದು ರೌದ್ರವತಾರ ತಾಳುವ ಹಿಂದಿನ ಕಥೆಗಳನ್ನು ಯಾರು ಮರೆಯುವಂತಿಲ್ಲ. ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಈಚೆಗೆ ಕಳ್ಳರ, ಡಕಾಯಿತರ ಹಾವಳಿ ವಿಪರೀತವಾಗಿತ್ತು. ಹಗಲು ವೇಳೆಯಲ್ಲೇ ರಾಜರೋಷವಾಗಿ ದ್ವಿಚಕ್ರ ವಾಹನಗಳಲ್ಲಿ ಬಂದು ಮಹಿಳೆಯರ ಸರ ಕೀಳುವುದು, ಅವರನ್ನು ಚುಡಾಯಿಸುವುದು, ಅವರ ಮೇಲೆ ಹಲ್ಲೆ ಮಾಡುವುದು ಈ ಭಾಗದಲ್ಲಿ ಸಾಮಾನ್ಯವಾಗಿತ್ತು. ಇಂಥ ಘಟನೆಗಳಿಂದ ರೋಸಿ ಹೋಗಿದ್ದ ಗ್ರಾಮಸ್ಥರು ತಮೆಲ್ಲ ಸಿಟ್ಟು, ಆಕ್ರೋಶವನ್ನು ಮಂಗಳವಾರ ತೀರಿಸಿಕೊಂಡರು.ಕಳ್ಳರ ಉಪಟಳ ಹೆಚ್ಚಿದ್ದ ಕಾರಣ ಮಹಿಳೆಯರು ಕೃಷಿ ಚಟುವಟಿಕೆಗಳಿಗಾಗಿ ಹೊಲಗದ್ದೆಗಳಿಗೆ ಹೋಗಲು ಭಯಪಡುತ್ತಿದ್ದರು. ಪ್ರತಿಯೊಂದು ಗ್ರಾಮದಲ್ಲೂ ಗ್ರಾಮಸ್ಥರು ಕಾವಲು ಪಡೆಗಳನ್ನು ರಚಿಸಿಕೊಂಡಿದ್ದರು. ಗ್ರಾಮಗಳಿಗೆ ಪ್ರವೇಶಿಸುತ್ತಿದ್ದ ಪ್ರತಿಯೊಬ್ಬರ ಮೇಲೆ ನಿಗಾ ವಹಿಸುತ್ತಿದ್ದರು. ಅಪರಿಚಿತರು ಕಂಡರೆ ಸಾಕು, ಅವರ ವಿಚಾರಣೆಗೆ ಮುಂದಾಗುತ್ತಿದ್ದ ದೃಶ್ಯ ಈ ಭಾಗದಲ್ಲಿ ಕಂಡು ಬರುತ್ತಿತ್ತು.ತಾಲ್ಲೂಕಿನ ಹಿರೇಪಾಳ್ಯ ಗ್ರಾಮದಲ್ಲಿ ಈಚೆಗೆ ಕಳ್ಳನೆಂದು ಭಾವಿಸಿ ಒಬ್ಬನನ್ನು ಕೊಂದು ಹಾಕಿದ್ದರು. ಆಗಲೇ ಪೊಲೀಸರು ಹೆಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಕೋಲಾರ ಜಿಲ್ಲೆ ವ್ಯಾಪ್ತಿಗೆ ಸೇರಿದ ಪಾಡಿಗಾನಹಳ್ಳಿಯಲ್ಲಿ ಕಳ್ಳನನ್ನು ಜನರು ಹಿಡಿದುಕೊಟ್ಟರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ.

 

ಈ ಎರಡು ಘಟನೆಗಳು ಜನರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. `ಪೊಲೀಸರು ಕಳ್ಳರನ್ನು ಹಿಡಿಯುವುದಿಲ್ಲ. ನಾವೇ ಹಿಡಿದುಕೊಟ್ಟರೂ ಸೂಕ್ತ ಕ್ರಮಕೈಗೊಳ್ಳುವುದಿಲ್ಲ~ ಎಂದು ಗ್ರಾಮಸ್ಥರು ರೋಸಿ ಹೇಳುತ್ತಿದ್ದರು.ಈ ಭಾಗದ ಮಹಿಳೆಯರು ಸಾಮಾನ್ಯವಾಗಿ ಎಲ್ಲರು ಚಿನ್ನದ ಮಾಂಗಲ್ಯ ಸರ ಧರಿಸುತ್ತಾರೆ. ಚಿನ್ನದ ಬೆಲೆ ಗಗನ ಮುಟ್ಟಿದ್ದು ಕೂಡ ಕಳ್ಳತನಗಳು ಹೆಚ್ಚಾಗಲು ಕಾರಣವಾಗಿದೆ. ಇಲ್ಲಿಂದ ಚಿನ್ನಾಭರಣ ದೋಚಿ ಪಕ್ಕದ ಆಂಧ್ರಪ್ರದೇಶಕ್ಕೆ ಸೇರಿರುವ ಚೇಳೂರು, ಚೆದಮು, ಮದನಪಲ್ಲಿ, ಬಿಲ್ಲಾನಹಳ್ಳಿಗಳಿಗೆ ಸುಲಭವಾಗಿ ಹೋಗಿಬಿಡಬಹುದು. ಒಮ್ಮೆ ಗಡಿದಾಟಿದರೆ ಪೊಲೀಸರು ಬೆನ್ನಟ್ಟಲಾರರು ಎಂಬ ನಂಬಿಕೆಯಿಂದಲೇ ಗಡಿನಾಡಿನ ಆಚೆಯಿಂದ ಬಂದು ಕಳ್ಳತನ ಮಾಡುವುದು ಹೆಚ್ಚಾಗ ತೊಡಗಿತು ಎಂಬ ವಾದವು ಕೇಳಿಬಂದಿದೆ.ಕಳ್ಳರನ್ನು ಹಿಡಿದು ಗ್ರಾಮಸ್ಥರಲ್ಲಿ ವಿಶ್ವಾಸ ಮೂಡಿಸಬೇಕಾಗಿದ್ದ ಪೊಲೀಸರ  ನಿಷ್ಕ್ರಿಯತೆ, ಉದಾಸೀನವು ಘಟನೆಗೆ ಪರೋಕ್ಷ ಕಾರಣವಾಗಿದೆ. ಜಾಗೃತಿ ಮೂಡಿಸುವ ಕೆಲಸ ಮಾಡಿದ ಪೊಲೀಸರು ಅಲ್ಲಲ್ಲಿ ಕಾವಲು ತಂಡ ಕಟ್ಟಿಕೊಳ್ಳಲು ಪ್ರೇರೇಪಿಸಿದರು.

 

ಜನರನ್ನು ಮಾಹಿತಿದಾರನ್ನಾಗಿ ಬಳಸಿಕೊಂಡು ದುಷ್ಕರ್ಮಿಗಳ ತಂಡವನ್ನು ಮಟ್ಟಹಾಕುವ  ಸುಲಭ ಮಾರ್ಗವನ್ನು ಪೊಲೀಸರು ಅನುಸರಿಸ ಬಹುದಿತ್ತು ಎಂಬ ಪ್ರಶ್ನೆಯೂ ಮೂಡುತ್ತಿದೆ. ಕಳ್ಳತನ ಮಾತ್ರವಲ್ಲ  ಮಾಂತ್ರಿಕ ಹಿತ್ತಾಳೆ ಚೆಂಬು ಮಾರಾಟದ ಮೂಲಕವು ಇಲ್ಲಿನ ಜನರಿಗೆ ವಂಚನೆ ಮಾಡಿರುವ ನೂರಾರು ಪ್ರಕರಣಗಳು ನಡೆದಿವೆ. ಪ್ರತಿ ಘಟನೆಯನ್ನು ಕೆದಕಿ ನೋಡಿದಾಗಲೂ ಪೊಲೀಸರು ಇನ್ನಷ್ಟು ದಕ್ಷತೆ ತೋರಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry