ಬುಡಕಟ್ಟು ಕೃಷಿಕ ಸಂಘದ ಪ್ರತಿಭಟನೆ

7
ಅರಣ್ಯ ಉತ್ಪನ್ನ ಹಕ್ಕು ನೀಡಲು ಒತ್ತಾಯ

ಬುಡಕಟ್ಟು ಕೃಷಿಕ ಸಂಘದ ಪ್ರತಿಭಟನೆ

Published:
Updated:

ಬಾಳೆಹೊನ್ನೂರು: ಅರಣ್ಯ ಉತ್ಪನ್ನಗಳ ಹಕ್ಕನ್ನು ಆದಿವಾಸಿ ಬುಡಕಟ್ಟು ಕೃಷಿಕ ಸಂಘಕ್ಕೆ(ಬಿಕೆಎಸ್) ನೀಡಬೇಕೆಂದು ಒತ್ತಾಯಿಸಿ ಸಂಘದ ಸದಸ್ಯರು ಗುರುವಾರ ಸಮೀಪದ ಹುಯಿಗೆರೆಯಲ್ಲಿ ಪ್ರತಿಭಟನೆ ನಡೆಸಿದರು.ಬಾಳೆಹೊನ್ನೂರು ವಲಯದ ಹುಯಿಗೆರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ದಾಲ್ಚಿನ್ನಿ ಎಲೆ ಸಂಗ್ರಹಿಸಲು ಕೊಪ್ಪದ ಲ್ಯಾಂಪ್ ಸೊಸೈಟಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ನೀಡಿದ್ದಾರೆ. ಕಿರು ಅರಣ್ಯ ಉತ್ಪನ್ನವನ್ನು ಸಂಗ್ರಹಿಸಲು ಅರಣ್ಯಹಕ್ಕು ಕಾಯ್ದೆ ಅನ್ವಯ ಆದಿವಾಸಿಗಳಿಗೆ ನೀಡಬೇಕು ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಒತ್ತಾಯಿಸಿದರು. ಕೇಂದ್ರ ಸರ್ಕಾರ 2005ರಲ್ಲೇ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ್ದರೂ ರಾಜ್ಯ ಸರ್ಕಾರ ಈವರೆಗೂ ಈ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದ ಅವರು, ಲ್ಯಾಂಪ್ ಸೊಸೈಟಿಯ ಅಧಿಕಾರಿಗಳು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು. ವಲಯಾರಣ್ಯಾಧಿಕಾರಿ ಸತೀಶ್ಚಂದ್ರ ಈ ಕುರಿತು ಪ್ರತಿಕ್ರಿಯಿಸಿ ಮಾತನಾಡಿ, ಆದಿವಾಸಿ ಬುಡಕಟ್ಟು ಕೃಷಿಕ ಸಂಘ ಈಗಾಗಲೇ ಅರ್ಜಿಯನ್ನು ನೀಡಿದ್ದು, ಅದನ್ನು ಪರಿಶೀಲಿಸಿ ಎಸಿಎಫ್ ಅವರ ಗಮನಕ್ಕೆ  ಕಳುಹಿಸಲಾಗುವುದು. ನಂತರ ವಿವಿಧ ಅಧಿಕಾರಿಗಳು  ಕುರಿತು ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವರು.

ಜಿಲ್ಲಾಧಿಕಾರಿ ಕಚೇೀರಿಯಲ್ಲಿ ಚರ್ಚೆ ನಡೆದ ನಂತರ ಸಮುದಾಯ ಹಕ್ಕನ್ನು ನೀಡಬಹುದು ಎಂದು ತಿಳಿಸಿದರು.  ಬಿಕೆಎಸ್‌ನ ಜಿಲ್ಲಾಧ್ಯಕ್ಷ ಕೆ.ಎನ್.ವಿಠಲ್, ನರಸಿಂಹರಾಜಪುರ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ರಾಷ್ಟ್ರೀಯ ಆದಿವಾಸಿ ಆಂದೋಲನದ ಸದಸ್ಯೆ ಜ್ಯೋತಿ, ಕೃಷ್ಣಪ್ಪ ಮತ್ತಿತರರು ಇದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry