ಬುದ್ಧಚಿಂತನೆಗಳಿಲ್ಲದೆ ಭಾರತ ಎದ್ದು ನಿಲ್ಲದು

7

ಬುದ್ಧಚಿಂತನೆಗಳಿಲ್ಲದೆ ಭಾರತ ಎದ್ದು ನಿಲ್ಲದು

Published:
Updated:

ಮೈಸೂರು: ‘ಬುದ್ಧನ ಚಿಂತನೆಗಳಿಲ್ಲದೆ ಭಾರತ ಜಗತ್ತಿನ ಜೊತೆ ಎದ್ದು ನಿಲ್ಲಲಾಗದು’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.ಕರ್ನಾಟಕ ಬುದ್ಧ ಧಮ್ಮ ಸಮಿತಿ ವತಿಯಿಂದ ನಗರದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿ  ಭಾನುವಾರ ನಡೆದ ‘ದಲಿತರ ಸಾಮಾಜಿಕ ಸಾಂಸ್ಕೃತಿಕ ಮೌಲ್ಯಗಳ ಚಿಂತನಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ನಮ್ಮಲ್ಲಿ ಮೌಲ್ಯಗಳನ್ನು ಇಟ್ಟುಕೊಳ್ಳದೆ ಕಾರ್ಯಕ್ರಮಗಳನ್ನು ಮಾಡುತ್ತಿರುವವರು ಇಂದು ಸುಳ್ಳುಗಳ  ಭಜನೆ ಮಾಡುತ್ತಿದ್ದಾರೆ. ಅದು ಸುಳ್ಳರ ಸಂತೆಯಾಗುತ್ತದೆಯೇ ಹೊರತು ಸಮಾಜಮುಖಿ ಆಗುವುದಿಲ್ಲ.  ಇಂದು ಎಂದಿಗಿಂದ ಅನಿವಾರ್ಯವಾಗಿ ಬುದ್ಧನ ತತ್ವಗಳು ಮಾನವೀಯ ಮೌಲ್ಯಗಳ ನಿರ್ಮಾಣಕ್ಕೆ ಬೇಕಾಗಿವೆ’ ಎಂದರು.‘ಒಂದು ಕಾಲಘಟ್ಟದಲ್ಲಿ ಕೆಲವು ಅಮಾನವೀಯ ಹಿತಾಸಕ್ತಿಗಳಿಂದ ಭಾರತದಿಂದ ಸರ್ವನಾಶವಾಗಿ  ಹೋಗಿದ್ದ ಬೌದ್ಧ ಧರ್ಮವು ಇಂದು ಭಾರತದ ಆದಿಯಾಗಿ ವಿಶ್ವದಾದ್ಯಂತ ಮಾನವೀಯತೆಯನ್ನು ಬೆಳೆಸಿ ಬೆಳೆ ಯುತ್ತಿದೆ. ಯಾಂತ್ರಿಕ ಬದುಕಿನಿಂದ ಹೊರಬಂದು ನೆಮ್ಮದಿಯನ್ನು ಪಡೆಯಲು ಎಲ್ಲರೂ ಇಂದು ಬುದ್ಧನನ್ನು  ಅಪ್ಪಿಕೊಳ್ಳುತ್ತಿದ್ದಾರೆ. ಆದ್ದರಿಂದ ಬೌದ್ಧಧರ್ಮ ಭವಿಷ್ಯದಲ್ಲಿ ಬೆಳಕಿನ ಧರ್ಮವಾಗಿ ಬೆಳೆಯುತ್ತದೆ’ ಎಂದು ತಿಳಿಸಿದರು.ದಲಿತರಲ್ಲಿ ಇನ್ನೂ ಅನೇಕರು ದೇವರುಗಳ ಭಯದಿಂದ ಬೌದ್ಧಧರ್ಮವನ್ನು ಸ್ವೀಕರಿಸುತ್ತಿಲ್ಲ. ಅವರು  ಹಿಂದೂ ಧರ್ಮವೆಂದರೆ ಜಾತಿತನದ ಅಮಾನವೀಯ ಧರ್ಮ ಎಂಬುದನ್ನು ಅರಿಯಬೇಕಾಗಿದೆ. ಬುದ್ಧನ ಬೆಳಕಿನ ಅರಿವನ್ನು ಮೂಡಿಸಿಕೊಂಡು ಸಮಾಜಮುಖಿಯಾಗಿ ಬದುಕಬೇಕಾಗಿದೆ. ಜ್ಞಾನವು ಕೇವಲ ಜ್ಞಾನವಾಗಿ ಉಳಿಯದೆ ವಿನಯವಾಗಿ ಸರ್ವವನ್ನೂ ಅರ್ಥೈಸಿಕೊಳ್ಳುವ ಹಾಗೂ ಸರ್ವರನ್ನೂ ಅಪ್ಪಿಕೊಳ್ಳುವ ಸಾಧನವಾಗಬೇಕಾಗಿದೆ. ಬುದ್ಧ, ಅಂಬೇಡ್ಕರ್ ಅವರಿಗೆ ಆ ವಿನಯ ಇದ್ದುದರಿಂದಲೇ ಅವರು ಮಹಾನ್ ಮಾನವತಾವಾದಿಗಳಾಗಿದ್ದು. ಆದ್ದರಿಂದ ಜ್ಞಾನದ ಅಹಂನಿಂದ ಮೌಲ್ಯಗಳನ್ನು ಮರೆತು ಬದುಕುತ್ತಿರುವ ಈ ಹೊತ್ತಿನಲ್ಲಿ ಬುದ್ಧನ ಬೆಳಕು ಎಲ್ಲರಿಗೂ ಬೇಕಾಗಿದೆ ಎಂದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ದಲಿತರಿಗೆ  ಹಲವಾರು ಕ್ಷಣಿಕ ಆಮಿಷಗಳನ್ನು ಒಡ್ಡಿ ಅವರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಲಿತರನ್ನು ಜಾಗೃತಿಗೊಳಿಸುವ ಸಂವಹನ ಸಾಧನವಾಗಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬುದ್ಧಪ್ರಕಾಶ ಬಂತೇಜಿ, ಭೋದಿ ದತ್ತ ಬಂತೇಜಿ, ಶಿವಮೊಗ್ಗ ಡಿವಿಎಸ್ ಸಂಜೆ  ಕಾಲೇಜಿನ ಪ್ರಾಂಶುಪಾಲ ರಾಚಪ್ಪ, ಸಮಿತಿಯ ಅಧ್ಯಕ್ಷ ಲಿಂಗರಾಜಪ್ಪ, ಸಮಿತಿಯ ಪದಾಧಿಕಾರಿಗಳಾದ ನಟರಾಜು, ಶಿವರಾಜು, ಪ್ರೊ.ನಂಜುಂಡಯ್ಯ, ಮುಖಂಡ ಹರಿಹರ ಆನಂದಸ್ವಾಮಿ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry