ಬುದ್ಧನ ವಿರಾಟ್‌ರೂಪ

7

ಬುದ್ಧನ ವಿರಾಟ್‌ರೂಪ

Published:
Updated:

ಬುದ್ಧನ ತತ್ವಗಳು ಸಾರ್ವತ್ರಿಕವಾದವು. ಮನುಷ್ಯ ತನ್ನೊಳಗಿನ ರಾಗ ದ್ವೇಷಗಳನ್ನು ಬಿಟ್ಟು ಮಾನವ ಸಹಜ ಪ್ರೀತಿಗೆ ತೆರೆದುಕೊಂಡಾಗ ಮಾತ್ರ ಮೋಕ್ಷವನ್ನು ಕಾಣಲು ಸಾಧ್ಯ ಎಂಬುದು ಬುದ್ಧನ ಸಾರ.

 

`ಸಾಲ ಮಾಡಿಯಾದ್ರು ತುಪ್ಪ ತಿನ್ನು~ ಎಂದರು ಚಾರ್ವಾಕರು. ಆದರೆ, `ಆಸೆಯೇ ದುಃಖಕ್ಕೆ ಮೂಲ~ ಎಂದ ಬುದ್ಧ. ಚಾರ್ವಾಕರಲ್ಲಿ ಜೀವನ ಪ್ರೀತಿಯಿದ್ದರೆ; ಬುದ್ಧನ ಸಂದೇಶದಲ್ಲಿ ಮೋಕ್ಷದ ದಾರಿಯಿದೆ.ಮನುಷ್ಯ ತನ್ನೊಳಗಿರುವ `ಅಹಂ~ ಬಿಟ್ಟು ಅದರಾಚೆಗೆ ತೆರೆದುಕೊಂಡಾಗ ಮಾತ್ರ ಅವನೊಳಗಿರುವ ಆತ್ಮ , ಪರಮಾತ್ಮನನ್ನು ಸಂಧಿಸಲು ಸಾಧ್ಯ. ಮನುಷ್ಯನ ವ್ಯಕ್ತಿತ್ವದಲ್ಲಿ ಶರಣಾಗತಿ ಮತ್ತು ಪ್ರಾಮಾಣಿಕತೆ ಮಿಳಿತಗೊಂಡಾಗ ದೇಹದೊಳಗಿನ ಆತ್ಮವು ಪರಮಾತ್ಮನನ್ನು ಸೇರಲು ಕೀಲಿ ಕೈಯಂತೆ ಕಾರ್ಯನಿರ್ವಹಿಸುತ್ತದೆ.

 

ಇದು ಅಧ್ಯಾತ್ಮದ ಕಲ್ಪನೆ. ಬುದ್ಧ ಹೇಳಿದ್ದು ಕೂಡ ಇದನ್ನೆ. ವ್ಯಕ್ತಿ ಪ್ರಶಾಂತ ವಾತಾವರಣದಲ್ಲಿ ಕುಳಿತು ಮನಸ್ಸನ್ನು ಧ್ಯಾನದಲ್ಲಿ ಕೇಂದ್ರೀಕರಿಸಿ ಆತ್ಮನ ಮೂಲಕ ಪರಮಾತ್ಮನನ್ನು ಕಾಣಬಹುದು. ಮನುಷ್ಯನ ಬದುಕಿನಲ್ಲಿ ಎರಡು ಆಯ್ಕೆಗಳಿವೆ.ಒಂದು ಕೆಟ್ಟ ಮಾರ್ಗ. ಈ ಹಾದಿಯಲ್ಲಿ ಸಾಗುವವನು ತನ್ನ ಪಾಪದ ಕೊಡ ತುಂಬಿದಾಗ ನೇರವಾಗಿ ಪತನದ ಪ್ರಪಾತದೊಳಕ್ಕೆ ಬಿದ್ದು ಹೋಗುತ್ತಾನೆ. ಮತ್ತೊಂದು ಅಧ್ಯಾತ್ಮದ ಹಾದಿ. ಈ ಹಾದಿಯಲ್ಲಿ ನಡೆಯುವವರು ಪರಮಾತ್ಮನನ್ನು ನೇರವಾಗಿ ತಲುಪುತ್ತಾರೆ. ಇದು ವಾಸ್ತವ ಬದುಕಿಗೂ ಹತ್ತಿರವಾದುದು.ಕಲಾವಿದ ವಿಜಿತ್ ಪಿಳ್ಳೈ ಬುದ್ಧನ ಸಂದೇಶ ಹಾಗೂ ವಿರಾಟ್ ರೂಪವನ್ನು ಪ್ರದರ್ಶಿಸುವ ಸರಣಿ ಕಲಾಕೃತಿಗಳನ್ನು ರಚಿಸಿದ್ದಾರೆ. ಈಚೆಗೆ ತಾಜ್‌ವೆಸ್ಟೆಂಡ್‌ನಲ್ಲಿರುವ ಆರ್ಟ್ ಕಾರಿಡಾರ್‌ನಲ್ಲಿ ಇವರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.ಬ್ಲೂಸ್ ಫಾರ್ ಬುದ್ಧ ಸರಣಿ ಹೈದರ್‌ಬಾದ್‌ನಲ್ಲಿ ಪ್ರದರ್ಶನಗೊಂಡು ಬೆಂಗಳೂರಿಗೆ ಕಾಲಿರಿಸಿದ್ದವು.ವಿಜಿತ್ ಪಿಳ್ಳೈ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕುಂಚವನ್ನು ಹಿಡಿದವರು. ಮೂರು ವರ್ಷದವರಿದ್ದಾಗಲೇ ಮಗ ಬಣ್ಣಗಳೊಂದಿಗೆ ಆಟವಾಡುವ ಉತ್ಸಾಹ ತೋರಿಸಿದಾಗ ತಾಯಿ ಮಗನ ಕಲಾಪ್ರೀತಿ ಬಗ್ಗೆ ಬೇಸರಿಸಿಕೊಳ್ಳದೆ ಪ್ರೋತ್ಸಾಹಿಸಿದರು.ಆಕೆ ಕೂಡ ಖ್ಯಾತ ಕಲಾವಿದೆ. ಹಾಗಾಗಿ ಕಲಾಪ್ರೀತಿ ಅವರ ರಕ್ತದಲ್ಲೇ ಹರಿದು ಬಂದಿತ್ತು. ಇವರಿಗೆ ಕಲಾಗುರುವಾಗಿ ಚಿತ್ರಕಲೆಯ ಪಟ್ಟುಗಳನ್ನು ಹೇಳಿಕೊಟ್ಟದ್ದು ರೈತನ್ ಮಿತ್ರಾ.ಇವರು ಕಲಾಕೃತಿಗಳಲ್ಲಿ ತೋರುತ್ತಿದ್ದ ಪ್ರಾಯೋಗಿಕತೆ ಇವರನ್ನು ಇತರೆ ಕಲಾವಿದರಿಂದ ಭಿನ್ನವಾಗಿ ನಿಲ್ಲಿಸಿತು. ಇವರು ಸಾಂಪ್ರದಾಯಿಕ ಹಾಗೂ ಸಮಕಾಲೀನ ಚಿತ್ರಕಲಾಕಾರರ ಸಾಲಿನಲ್ಲಿ ಅತಿ ಮುಖ್ಯರೆನಿಸಿಕೊಂಡಿದ್ದಾರೆ.ಇವರ ಸೃಜನಶೀಲತೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಖ್ಯಾತ ಕಲಾವಿದರಾದ ಜಹಾಂಗೀರ್ ಸಾಂಬಶಿವ, ಕೃಷ್ಣನ್ ಖನ್ನಾ ಮೊದಲಾದವರು ಮೆಚ್ಚಿ ಬೆನ್ನುತಟ್ಟಿದ್ದಾರೆ. ಇವರು ಚಿತ್ರಜಗತ್ತಿನ ಅನೇಕ ಘಟಾನುಘಟಿಗಳಿಂದ, ಮುಖ್ಯವಾಗಿ ವಿನ್ಸೆಂಟ್ ವ್ಯಾನ್ ಅವರಿಂದ ಪ್ರೇರಣೆಗೊಂಡಿದ್ದಾರೆ.ಇವರ ಬುದ್ಧನ ಸರಣಿ ಕಲಾಕೃತಿಗಳು `ನ್ಯೂ ಮೀಡಿಯಾ ಆರ್ಟ್~ನಲ್ಲಿ ರಚಿತಗೊಂಡವು. ನ್ಯೂ ಮೀಡಿಯಾ ಆರ್ಟ್ ಎಂದರೆ ಹೊಸ ತಂತ್ರಜ್ಞಾನ. ಕಂಪ್ಯೂಟರ್ ಗ್ರಾಫಿಕ್ಸ್, ಅನಿಮೇಷನ್, ಇಂಟರ್ನೆಟ್ ಆರ್ಟ್, ವರ್ಚ್ಯುಯಲ್ ಆರ್ಟ್ ಇಂಟರಾಕ್ಟಿವ್ ಆರ್ಟ್ ಬಳಕೆ ಮಾಡಿಕೊಂಡು ಚಿತ್ರಕಲಾಕೃತಿ ರಚಿಸುವ ಒಂದು ವಿಶಿಷ್ಟ ಪ್ರಕಾರ ಇದು.

 

ಸಾಮಾಜಿಕ ವಿಷಯಗಳು ಹಾಗೂ ಮನಸ್ಸಿನ ಭಾವನೆಗಳನ್ನು ಈ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಬಹುದು. ಇದು ಸಾಂಪ್ರದಾಯಿಕ ಚಿತ್ರಕಲೆಗಿಂತ ಭಿನ್ನವಾದುದು. ಈ ಪ್ರಕಾರದಲ್ಲಿ ರಚನೆಯಾದ ಕಲಾಕೃತಿಗಳು ಕಲಾವಿದ, ಕಲಾಕೃತಿ ಹಾಗೂ ವೀಕ್ಷಕರ ನಡುವೆ ಒಂದು ಸಂಭಾಷಣೆಯನ್ನು ಏರ್ಪಡಿಸುತ್ತದೆ.ಇತ್ತೀಚಿನ ದಿನಗಳಲ್ಲಿ ನ್ಯೂ ಮೀಡಿಯಾ ಆರ್ಟ್ ಅತ್ಯಂತ ಜನಪ್ರಿಯಗೊಳ್ಳುತ್ತಿದೆ. ಕಲಾಪ್ರೇಮಿಗಳು ಈ ಮಾದರಿಯಲ್ಲಿ ತಯಾರಾದ ಕಲಾಕೃತಿಗಳನ್ನು ಸಂಗ್ರಹಿಸಲು, ಕೊಳ್ಳಲು ಅತಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.`ನ್ಯೂ ಮೀಡಿಯಾ ಆರ್ಟ್‌ನಲ್ಲಿ ಕಲಾವಿದ ತನ್ನ ಕಲ್ಪನೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಲು ನೆರವು ನೀಡುತ್ತದೆ. ನಾನು ಕಲಾಕೃತಿಯ ಪ್ರತಿಯೊಂದು ಭಾಗವನ್ನು ತುಂಬ ಶ್ರದ್ಧೆಯಿಂದ ಪರೀಕ್ಷಿಸುತ್ತೇನೆ.

 

ಜೀವನದ ಸಂಗತಿಗಳನ್ನು ನಾನು ಇದರಲ್ಲಿ ಅಡಕಗೊಳಿಸುವ ಪ್ರಯತ್ನ ಮಾಡುತ್ತೇನೆ. ಜೀವನ ಪರಿಪೂರ್ಣವಲ್ಲ. ಹಾಗೆಯೇ ಜನರೂ ಕೂಡ. ನನ್ನ ಕಲಾಕೃತಿಗಳು ಜೀವನದ ವಿಶ್ಲೇಷಣೆ ಮಾಡುವಂತಿವೆ~ ಎನ್ನುತ್ತಾರೆ ವಿಜಿತ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry