ಬುದ್ಧಿಜೀವಿಗಳು ಭಯೋತ್ಪಾದಕರಿಗಿಂತ ಅಪಾಯಕಾರಿ

ಬೆಂಗಳೂರು: ‘ದೇಶದ ಬುದ್ಧಿಜೀವಿಗಳ ಒಂದು ವರ್ಗ ಭಯೋತ್ಪಾದಕ ಸಂಘಟನೆಗಳಿಗಿಂತ ಹೆಚ್ಚು ಅಪಾಯಕಾರಿ’ ಎಂದು ಇಂಡಿಯನ್ ಪಾಲಿಸಿ ಫೌಂಡೇಷನ್ನ ಗೌರವ ನಿರ್ದೇಶಕ ರಾಕೇಶ್ ಸಿನ್ಹಾ ಹೇಳಿದರು.
ಮಂಥನ ಸಂಸ್ಥೆ ನಗರದ ಮಿಥಿಕ್ ಸೊಸೈಟಿಯಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಭಯೋತ್ಪಾದನೆ ಮತ್ತು ಉಗ್ರಗಾಮಿತ್ವದ ಸವಾಲುಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
‘ಕೆಲ ಬುದ್ಧಿಜೀವಿಗಳು ದೊಡ್ಡ ಪದಪುಂಜಗಳನ್ನು ಬಳಸಿ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ಹಾಗೂ ಕಾರ್ಯಾಂಗವನ್ನು ಧೃತಿಗೆಡಿಸುತ್ತಿದ್ದಾರೆ. ಅವರ ಕುತಂತ್ರದಿಂದಾಗಿ ಭಾರತದ ಸಾಮಾನ್ಯ ಮುಸ್ಲಿಮರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಜತೆಗೆ ದೇಶ ಹಾಗೂ ಮುಸ್ಲಿಮರ ನಡುವೆ ದೊಡ್ಡ ಕಂದಕವನ್ನು ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.
‘ಮುಸ್ಲಿಂ ದೇಶಗಳಲ್ಲಿ ಏನಾಗುತ್ತಿದೆ ಎಂಬುದನ್ನು ದೇಶದ ಮುಸ್ಲಿಮರು ತಿಳಿದುಕೊಳ್ಳಬೇಕು. ಇಸ್ಲಾಂನ ಕೋಮುವಾದದಿಂದ ಪಾಕಿಸ್ತಾನ ಸೃಷ್ಟಿಯಾಯಿತೇ ಹೊರತು ಹಿಂದೂ ಕೋಮುವಾದದಿಂದ ಅಲ್ಲ. ಹಿಂದೂ ಧರ್ಮದಲ್ಲಿರುವಂತೆ ಇಸ್ಲಾಂ ಧರ್ಮದಲ್ಲೂ ವಸ್ತುನಿಷ್ಠವಾಗಿ ಪ್ರಶ್ನಿಸುವ ಮನೋಭಾವ ಬೆಳೆಯಬೇಕು’ ಎಂದು ಹೇಳಿದರು.
‘ಆಧುನಿಕ ಭಯೋತ್ಪಾದನೆಯು ಅಮೆರಿಕದ ಸೃಷ್ಟಿ. ತನಗೆ ಅನುಕೂಲವಾಗುವವರೆಗೆ ಅದನ್ನು ಬಳಸಿಕೊಂಡಿತು. ಆದರೆ, ವಿಶ್ವ ವ್ಯಾಪಾರ ಸಂಸ್ಥೆ ಮೇಲೆ ದಾಳಿ ನಡೆದ ಬಳಿಕ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳುತ್ತಿದೆ. ಭಯೋತ್ಪಾದನೆ ಕುರಿತ ಪಾಶ್ಚಿಮಾತ್ಯ ದೇಶಗಳ ಮನಸ್ಥಿತಿ ಸಂಕುಚಿತವಾಗಿದೆ’ ಎಂದರು.
‘ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ತೀವ್ರವಾದದ ಚಟುವಟಿಕೆಗಳು ಹೆಚ್ಚು ಕ್ರಿಯಾಶೀಲವಾಗಿವೆ. ಹೈದರಾಬಾದ್ ಭಯೋತ್ಪಾದನೆಯ ಕೇಂದ್ರ ಆಗುತ್ತಿರುವುದನ್ನು ಗಮನಿಸಬೇಕು. ಅಸಾದುದ್ದೀನ್ ಒವೈಸಿ ಅಂತಹ ಕೋಮುವಾದಿಗಳು ಐಸಿಸ್ಗಿಂತ ಹೆಚ್ಚು ಅಪಾಯಕಾರಿ’ ಎಂದರು.
‘ಯಾವುದೇ ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿ ಮದರಸಾಗಳನ್ನು ನಡೆಸಲು ಅವಕಾಶ ನೀಡಿಲ್ಲ. ಆದರೆ, ಭಾರತದಲ್ಲಿ ಮಾತ್ರ ಮದರಸಾಗಳನ್ನು ನಡೆಸಲು ಅವಕಾಶ ನೀಡಲಾಗಿದೆ’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.