ಬುದ್ಧಿಮಾತು ಕೇಳಿ ಪತಿಗಾಗಿ ಓಡಿ ಬಂದಳು

7

ಬುದ್ಧಿಮಾತು ಕೇಳಿ ಪತಿಗಾಗಿ ಓಡಿ ಬಂದಳು

Published:
Updated:

ಬೆಂಗಳೂರು: `ಪತಿಯಿಂದಾದರೂ ದೂರ ಇರುವೆ, ಪೋಷಕರಿಂದ ದೂರವಿರಲು ಸಾಧ್ಯವೇ ಇಲ್ಲ~ ಎಂದಿದ್ದ ಅಪ್ಪ-ಅಮ್ಮಂದಿರ ಏಕಮೇವ ಮುದ್ದಿನ ಪುತ್ರಿಯೊಬ್ಬಳು, ಪತಿಯೇ ಸರ್ವಸ್ವ ಎಂದು ಓಡೋಡಿ ಬಂದ ಕುತೂಹಲದ ಪ್ರಕರಣವೊಂದು ಹೈಕೋರ್ಟ್‌ನಲ್ಲಿ ನಡೆದಿದೆ.ವರ್ಷದ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ವಿವಾಹವಾದ ಎರಡು ವರ್ಷಗಳಲ್ಲಿಯೇ ತವರು ಮನೆ ಸೇರಿದ್ದ ಈ ಯುವತಿಗೆ `ಜ್ಞಾನೋದಯ~ವಾದದ್ದು ಪತಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದಾಗ!2009ರ ಏಪ್ರಿಲ್‌ನಲ್ಲಿ ವಿವಾಹವಾದ ಬೆಂಗಳೂರಿನ ಶ್ರೀನಿವಾಸ್ ಹಾಗೂ ಸುಮಾ (ಇಬ್ಬರ ಹೆಸರೂ ಬದಲಾಯಿಸಲಾಗಿದೆ) ದಂಪತಿ ಪ್ರಕರಣ ಇದು.ಅಳಿಯನೂ ಇರಲಿ: ಅಪ್ಪ-ಅಮ್ಮಂದಿರಿಗೆ ಸುಮಾ ಒಬ್ಬಳೇ ಪುತ್ರಿ. ಆದ್ದರಿಂದ ಅಳಿಯನೂ ತಮ್ಮ ಜೊತೆಯೇ ಇರಬೇಕು ಎನ್ನುವುದು ಅವರ ಹಂಬಲ. ಮನೆ ಅಳಿಯನಾಗಿ ಇರುವುದು ಶ್ರೀನಿವಾಸ್ ಅವರಿಗೆ ಸಹಿಸಲಾರದ ಮಾತು. `ಪತಿಯನ್ನಾದರೂ ಬಿಟ್ಟೇನು, ಪೋಷಕರನ್ನು ಬಿಡಲಾರೆ~ ಎನ್ನುವುದು ಸುಮಾ ಹಟ. `ನೀನು ಇಲ್ಲಿಯೇ ಇದ್ದರೆ ನಿನ್ನ ಗಂಡ ಅದ್ಹೇಗೆ ಇಲ್ಲಿಗೆ ಬರುವುದಿಲ್ಲವೋ ನಾವೂ ನೋಡುತ್ತೇವೆ~ ಎನ್ನುವುದು ಪೋಷಕರ ಕುಮ್ಮಕ್ಕು.ವಾಪಸಾಗದ ಪತ್ನಿ: ಈ ಮಧ್ಯೆ, 2010ರ ಜನವರಿಯಲ್ಲಿ ಸುಮಾ ಅವರಿಗೆ ಹೆಣ್ಣು ಮಗು ಹುಟ್ಟಿತು. `ಹೆರಿಗೆಗೆ ತವರಿಗೆ ಹೋಗಿದ್ದ ಸುಮಾ ಪುನಃ ವಾಪಸು ಬರಲಿಲ್ಲ. ವಾಪಸು ಬರುವಂತೆ ನಾನು ಬಹಳ ಕೋರಿಕೊಂಡೆ. ಅವರು ಅದಕ್ಕೆ ಸ್ಪಂದಿಸಲಿಲ್ಲ. ಪತ್ನಿ ಹಾಗೂ ಮಗುವನ್ನು ನೋಡಲು ಮನೆಗೆ ಹೋದರೂ ಅವರೆಲ್ಲ ನನ್ನನ್ನು ಸರಿಯಾಗಿ ಕಾಣಲಿಲ್ಲ. ಬದಲಿಗೆ ಅತ್ತೆ-ಮಾವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ನನ್ನ ವಿರುದ್ಧ ದೂರು ದಾಖಲು ಮಾಡಿದರು. ಇನ್ನು ಆಕೆಯ ಜೊತೆ ಬಾಳಿ ಪ್ರಯೋಜನ ಇಲ್ಲ~ ಎಂದ ಶ್ರೀನಿವಾಸ್ ಅವರು, ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೊರೆ ಹೋದರು.ಸುಮಾ ಅವರಿಗೆ ನೋಟಿಸ್ ಜಾರಿ ಮಾಡಿದರೂ ಅವರು ಕೋರ್ಟ್‌ಗೆ ಬರಲಿಲ್ಲ. ಶ್ರೀನಿವಾಸ್ ಅವರ ವಾದವನ್ನಷ್ಟೇ ಕೋರ್ಟ್ ಆಲಿಸಿತು. ತಮ್ಮ ವಾದವನ್ನು ಪುಷ್ಟೀಕರಿಸಲು ಅವರು ಸಾಕಷ್ಟು ದಾಖಲೆ ಒದಗಿಸಿಲ್ಲ ಎಂದ ಕೋರ್ಟ್ ವಿಚ್ಛೇದನ ಅರ್ಜಿ ವಜಾ ಮಾಡಿತು.ಹೈಕೋರ್ಟ್‌ಗೆ ಮೇಲ್ಮನವಿ: ಈ ಆದೇಶವನ್ನು ಶ್ರೀನಿವಾಸ್ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್‌ನಿಂದ ನೋಟಿಸ್ ಜಾರಿಯಾದ ತಕ್ಷಣ ಸುಮಾ ವಕೀಲರ ಜೊತೆ ಧಾವಿಸಿ ಬಂದರು.ಪತ್ನಿಯ ಜೊತೆ ಬಾಳಲು ಸಾಧ್ಯವೇ ಇಲ್ಲ ಎಂದು ಶ್ರೀನಿವಾಸ್ ಅವರು ಪಟ್ಟು ಹಿಡಿದರು. ಇದನ್ನು ಕೇಳುತ್ತಲೇ ದಂಗಾದ ಸುಮಾ, `ನನಗೆ ಪೋಷಕರು ಬೇಡ, ಪತಿಯೇ ಬೇಕು. ಪೋಷಕರ ಮನೆ ಬಿಡಲು ತಯಾರಿದ್ದೇನೆ~ ಎಂದರು.ಹಾಗಿದ್ದರೆ ಪತಿಯ ವಿರುದ್ಧ ದೂರು ದಾಖಲು ಮಾಡಿದ್ದು ಏಕೆ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ, `ನನ್ನ ಪತಿಯ ವಿರುದ್ಧ ಪೋಷಕರು ಸುಮ್ಮನೇ ದೂರು ದಾಖಲು ಮಾಡಲು ಹೋಗಿದ್ದರು. ಆದರೆ ಪೊಲೀಸರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲು ಮಾಡಿಕೊಂಡರು. ಅದರಲ್ಲಿ ನನ್ನ ತಪ್ಪು ಏನೂ ಇಲ್ಲ~ ಎಂದು ಸುಮಾ ಅಲವತ್ತುಕೊಂಡರು.ನ್ಯಾಯಮೂರ್ತಿಗಳಿಂದ ಬುದ್ಧಿಮಾತು: ನ್ಯಾಯಮೂರ್ತಿಗಳಾದ ಎನ್.ಕುಮಾರ್ ಹಾಗೂ ಎಚ್.ಎಸ್. ಕೆಂಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸುಮಾ ಹಾಗೂ ಆಕೆಯ ಪೋಷಕರಿಗೆ ಬುದ್ಧಿಮಾತು ಹೇಳಿತು. `ವಿವಾಹವಾಗಿ ಸರಿಯಾಗಿ ಎರಡು ವರ್ಷ ಕೂಡ ಆಗಿಲ್ಲ. ಈ ದಂಪತಿಗೆ ಬುದ್ಧಿಮಾತು ಹೇಳುವ ಬದಲು, ದಾಂಪತ್ಯ ಜೀವನದ ಆರಂಭಕ್ಕೆ ಮುನ್ನವೇ ಅವರನ್ನು ಪ್ರತ್ಯೇಕ ಮಾಡುತ್ತಿರುವುದು ಸರಿಯಲ್ಲ. ತಾವೇ ಸರಿ, ಇನ್ನೊಬ್ಬರದ್ದು ತಪ್ಪು ಎಂದು ತೋರಿಸುವ ಧಾವಂತದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಇದರಿಂದ ಸಂಸಾರ ಒಡೆಯುತ್ತದೆ~ ಎಂದರು. ಇದನ್ನು ಸುಮಾ ಒಪ್ಪಿಕೊಂಡರು.ಪತಿಯ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ವಾಪಸು ಪಡೆದುಕೊಳ್ಳಲು ಅವರು ಸಿದ್ಧರಾದರು. ದಂಪತಿ ಮಧ್ಯೆ ಆಕೆಯ ಪೋಷಕರು ಪ್ರವೇಶ ಮಾಡದಂತೆ ಹೇಳಿದ ನ್ಯಾಯಮೂರ್ತಿಗಳು, ವಿಚ್ಛೇದನ ಕೋರಿ ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry