ಬುದ್ಧಿ ಮಾತಿಗೆ `ಆತ್ಮಹತ್ಯೆ' ನಿರ್ಧಾರ ದುಡುಕಿನದ್ದು

7
ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣ ಸ್ವಾಮಿ ಆತಂಕ

ಬುದ್ಧಿ ಮಾತಿಗೆ `ಆತ್ಮಹತ್ಯೆ' ನಿರ್ಧಾರ ದುಡುಕಿನದ್ದು

Published:
Updated:
ಬುದ್ಧಿ ಮಾತಿಗೆ `ಆತ್ಮಹತ್ಯೆ' ನಿರ್ಧಾರ ದುಡುಕಿನದ್ದು

ಬೆಂಗಳೂರು: ಮಕ್ಕಳು ಪೋಷಕರು ಹೇಳುವ ಬುದ್ಧಿಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು `ಆತ್ಮಹತ್ಯೆ'ಯಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣ ಸ್ವಾಮಿ ಆತಂಕ ವ್ಯಕ್ತಪಡಿಸಿದರು.ನಗರದ ಈಡಿಗ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರ್ಯ ಈಡಿಗ ಸಮಾಜದ ರಾಜ್ಯಮಟ್ಟದ ವಧುವರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಮಹಿಳೆಯರು ಪ್ರತಿ ವಿಭಾಗಗಳಲ್ಲೂ ಪುರುಷರಿಗೆ ಸರಿಸಮನಾಗಿ ಹೆಜ್ಜೆಹಾಕುತ್ತಿರುವುದು ಸಂತಸದ ವಿಚಾರ. ಆದರೆ ಕೊಲೆ, ಸುಲಿಗೆ, ಭಯೋತ್ಪಾದನಾ ಚಟುವಟಿಕೆಗಳಲ್ಲೂ ಮಹಿಳೆಯರ ಹೆಸರು ಕೇಳಿಬರುತ್ತಿರುವುದು ದುರಂತ ಎಂದು ವಿಷಾದಿಸಿದರು.ಪೋಷಕರು ಮಕ್ಕಳಿಗೆ ವಿನಾಕಾರಣ ಒತ್ತಡ ಹೇರದೆ, ಶಿಕ್ಷಿಸದೆ ಅವರಿಗೆ ಉತ್ತಮ ಸಂಸ್ಕಾರ ನೀಡಲು ಮುಂದಾಗಬೇಕು ಎಂದು ನಿದರ್ಶನಗಳೊಂದಿಗೆ ವಿವರಿಸಿದ ಅವರು ಹಣ, ಅಧಿಕಾರ, ಓದಿಗಿಂತ ಮುಖ್ಯವಾದುದು ಸಂಸ್ಕಾರ ಎಂದರು.ಯುವಕರು ವರದಕ್ಷಿಣೆ ಪಿಡುಗಿಗೆ ಮಣೆ ಹಾಕದೆ, ಆಡಂಬರದ ವಿವಾಹಗಳಿಗೆ ಆಸ್ಪದ ನೀಡದೆ ಸರಳ ವಿವಾಹಗಳಿಗೆ ಮುಂದಾಗಬೇಕು. ಇದರಿಂದ ಬಡ ಕನ್ಯಾಪಿತೃಗಳು ನೆಮ್ಮದಿಯಿಂದ ಬದುಕಲು ಸಹಕಾರಿಯಾಗುತ್ತದೆ ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಕಾಳೇಗೌಡ, ಉಪಾಧ್ಯಕ್ಷರಾದ ಎಂ.ತಿಮ್ಮೇಗೌಡ, ಜಿ.ಕೆ.ಓಬಯ್ಯ, ಕೆ.ಜಿ.ಹನುಮಂತರಾಜು, ದಾಸೇಗೌಡ, ಯುವಕ ಸಂಘದ ಅಧ್ಯಕ್ಷ ಧರ್ಮವೀರ್, ಮಹಿಳಾ ಸಂಘದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ, ಯಶೋದಮ್ಮ, ಸುಧಾಕೃಷ್ಣಸ್ವಾಮಿ, ಹೇಮಾಗಾಂಧಿ ಮತ್ತಿತರರು ಇದ್ದರು. ಸಮಾವೇಶಕ್ಕೂ ಮೊದಲು ಸಂಘದ ಸರ್ವ ಸದಸ್ಯರ ಸಭೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry