ಬುದ್ಧ ಧರ್ಮದ ಬೆಳಕಿನಲ್ಲಿ...

7

ಬುದ್ಧ ಧರ್ಮದ ಬೆಳಕಿನಲ್ಲಿ...

Published:
Updated:

ಭಾರತವು ಎಲ್ಲ ಬಗೆಯ ಅಸಮಾನತೆ, ಹಿಂಸೆ ಮತ್ತು ಕ್ರೌರ್ಯಗಳಿಂದ ಮುಕ್ತವಾಗಬೇಕಾದರೆ ಅದು ಬೌದ್ದ ಭಾರತವಾಗಬೇಕು. ಇದು ಮಹಾಬೋಧಿಸತ್ವ ಬಾಬಾಸಾಹೇಬರ ಜೀವಮಾನದ ಅನ್ವೇಷಣೆಯ ಫಲವಾಗಿ ಮುೂಡಿಬಂದ ಸಂದೇಶವಾಗಿತ್ತು.ಏಕೆಂದರೆ ಭಾರತದ ದರ್ಶನಶಾಖೆಗಳಲ್ಲಿಯೇ ಬೌದ್ಧ ಧರ್ಮವು ಪ್ರಖರ ವಿಚಾರವಾದವನ್ನು ಎತ್ತಿ ಹಿಡಿಯುತ್ತದೆ. ಶುದ್ಧ ವಿಚಾರವಾದದ ತಳಹದಿಯ ಮೇಲೆ ತಾತ್ವಿಕ, ತಾರ್ಕಿಕ ನಿಖರತೆಯೊಂದಿಗೆ ಕಟ್ಟಿಬೆಳಸಲಾದ ಬೌದ್ಧ ಸಿದ್ಧಾಂತವು  ಜಗತ್ತಿನ ದುಃಖ, ದುಮ್ಮೋನಗಳಿಗೆ ಕಾರಣವಾದ ಅಂಶಗಳನ್ನು ನಿಷ್ಕರ್ಷಿಸಲು ಆಸಕ್ತಿ ತಳೆಯುತ್ತದೆ. ವೈದಿಕಶಾಹಿಯು ಇಹಲೋಕದ ಕಷ್ಟ ಕಾರ್ಪಣ್ಯಗಳಿಗೆ ಕರ್ಮಸಿದ್ಧಾಂತವೆ ಕಾರಣವೆಂದು ನಂಬಿಸಿತ್ತು.ಈ ನಂಬಿಕೆಯು ಆಧಾರರಹಿತವೂ ಮತ್ತು ಭ್ರಾಮಕವಾದುದೆಂದು ಬುದ್ಧನು ಪ್ರತ್ಯಕ್ಷ ಪ್ರಮಾಣದೊಂದಿಗೆ ಬಯಲಿಗೆಳೆದನು. ಇದು ಭಾರತದ ಸನಾತನಿಗಳ ಮೇಲೆ ನಡೆದ ಬಹುಮುಖ್ಯ  ಬೌದ್ಧಿಕ ದಾಳಿಗಳಲ್ಲೊಂದಾಗಿತ್ತು.ಕಲ್ಪಿತ ವಾಸ್ತವವಾದ ದೈವವಾದವನ್ನು ಅದರ ನಿಗೂಢತೆಯನ್ನು ಅಲ್ಲಗಳೆಯವ ಬುದ್ಧನು ಶುದ್ಧ ಪ್ರಜ್ಞೆಯೇ ಜಗತ್ತಿನ ಕೇಂದ್ರವೆಂದು ಸಾರಿದನು. ಜೀವ ಜಗತ್ತಿನ ಶೋಷಣೆಗೆ ಕಾರಣವಾದದ್ದು ಅಸಮಾನ ವ್ಯವಸ್ಥೆ.ಈ ಅಸಮಾನ ವ್ಯವಸ್ಥೆಯನ್ನು ಪೋಷಿಸಲೆಂದೇ ವೈದಿಕರು ದೇವರು,ಧರ್ಮ,ಪಾಪ ಪುಣ್ಯ ಸ್ವರ್ಗ ನರಕ ಇತ್ಯಾದಿ ಪೊಳ್ಳು ಕಲ್ಪನೆಯನ್ನು ಹುಟ್ಟು ಹಾಕಿದರು.ಪುರೋಹಿತರು ತಮ್ಮ ಹೊಟ್ಟೆ ಹೊರೆದುಕೊಳ್ಳಲೆಂದು ಪೂಜೆ, ಆರಾಧನೆ, ಹೋಮ ಹವನ ಇತ್ಯಾದಿ ಕಂದಾಚಾರಗಳನ್ನು ಹುಟ್ಟು ಹಾಕಿ ಜನರು ಅವುಗಳ ಕಪಿಮುಷ್ಟಿಯಲ್ಲಿರುವಂತೆ ನೋಡಿಕೊಂಡರು. ಸಾವು, ಮುಪ್ಪು, ರೋಗ-ರುಜಿನ ಬಡತನ ಇತ್ಯಾದಿಗಳ ಬಗೆಗಿನ ಭಯ ಮತ್ತು ಮಾನವ ಸಹಜ ಅಸಹಾಯಕತೆಗಳನ್ನು ಬಂಡವಾಳ ಮಾಡಿಕೊಂಡಿದ್ದ ವೈದಿಕಶಾಹಿಯ ಕುತಂತ್ರವನ್ನು ಬುದ್ಧ ಮತ್ತು ಅವನ ಅನುಯಾಯಿಗಳು ವಿಚಾರವಾದದಿಂದಲೇ ಹೊಡೆದು ಹಾಕಿದರು.ಅಂಧಾನುಕರಣೆಗಳಲ್ಲಿ ಬಂಧಿಯಾಗಿದ್ದ ಜನರನ್ನು ಅವರು ಪ್ರಾಯೋಗಿಕ ತತ್ವಗಳ ಬೆಳಕಿನಲ್ಲಿ ಮುಕ್ತಗೊಳಿಸಿದರು. ನಿರ್ಭಯವಾಗಿ ಬದುಕುವ ಛಾತಿಯನ್ನು ಧಮ್ಮ ಅವರಲ್ಲಿ ಮೂಡಿಸಿತು. ಅತ್ಯಂತ ಸರಳ ಮತ್ತು ಪಾರದರ್ಶಕವಾಗಿದ್ದ ಈ ತತ್ವಗಳು ಬಹುಸಂಖ್ಯಾತರನ್ನು ಸೂರೆಗೊಂಡವು. ಇನ್ನೇನು ಭಾರತವು ಬೌದ್ಧಮಯವಾಗುತ್ತಿದೆ ಎಂದಾಗ ವೈದಿಕರಿಗೆ ನಡುಕ ಹುಟ್ಟಿತು.ತಮ್ಮ ದೇವರಂಗಡಿಗಳಿಗೆ ಶಾಶ್ವತವಾಗಿ ಗಿರಾಕಿಗಳು ಇಲ್ಲವಾಗುತ್ತಿದ್ದಾರೆ ಎನಿಸಿದೊಡನೆ ವೈದಿಕರು ಜಾಗೃತರಾದರು. ಬೌದ್ದ ತತ್ವ ಸಿದ್ಧಾಂತಗಳನ್ನು ಅದರ ಸಾಹಿತ್ಯದೊಂದಿಗೆ ಭಾರತದಿಂದಲೇ ಓಡಿಸಿದರು. ಈ ಚಾರಿತ್ರಿಕ ದುರಂತ ಅರಿಯದೇನಲ್ಲ. ಇದೇ ಸಂದರ್ಭದಲ್ಲಿ  ಮೊನ್ನೆ ಗುಲ್ಬರ್ಗಾದ ಸಭೆಯೊಂದರಲ್ಲಿ ಬಾಬಾಸಾಹೇಬ ಮತ್ತು ಬುದ್ಧ ಧಮ್ಮ ಕುರಿತು ಮಾತನಾಡಿದ ಔರಂಗಾಬಾದ್‌ನ ಖ್ಯಾತ ವಿಚಾರವಾದಿ ಪ್ರೊ. ಪ್ರಕಾಶ ಸಿರಸ್ಯಾಟ ಅವರು ಗಂಭೀರ ವಿಚಾರವೊಂದನ್ನು ಮಂಡಿಸಿದರು. ಅದನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತವೆನಿಸುತ್ತದೆ.ಅವರು ಬೌದ್ಧ ಧರ್ಮವನ್ನು  ಭಾರತದಿಂದ ದೂರ ಮಾಡುವಲ್ಲಿ ವೈದಿಕರು ಕಾರಣವಾದಷ್ಟೆ ಬುದ್ಧನ ನಂತರದ ಅವನ ಅನುಯಾಯಿಗಳು ಅಷ್ಟೇ ಕಾರಣರಾಗಿದ್ದಾರೆ ಎಂದು ಹೇಳಿದರು. ಹೌದು. ಬುದ್ಧನ ತರುವಾಯ ಮಾಹಾಯಾನ, ವಜ್ರಾಯಾನ ಮುಂತಾದ ಕವಲುಗಳು ಕಾಣಿಸಿಕೊಂಡದ್ದಲ್ಲದೆ ಅವೆಲ್ಲವು ಬುದ್ಧನ ಮೂಲತತ್ವಗಳಿಂದಲೂ ದೂರ ಸರಿದಿದ್ದವು. ಈ ಪಂಥಗಳ ನಡುವೆ ಪರಸ್ಪರ ಹಲವು ವೈರುಧ್ಯಗಳು ಕಾಣಿಸಿಕೊಂಡವು.ಎಲ್ಲ ಬಗೆಯ ಧಾರ್ಮಿಕ ಕಂದಾಚಾರ, ಮೌಢ್ಯ, ಸಂಪ್ರದಾಯಗಳನ್ನು ಅಲ್ಲಗಳೆದ ಬುದ್ಧನನ್ನೆ ಅವನ ಅನುಯಾಯಿಗಳು ವೈಭವೋಪೇತ ಪೂಜೆ ಪುನಸ್ಕಾರಗಳಲ್ಲಿ ಹುಗಿದು ಹಾಕಿದರು. ಬುದ್ಧವಿಹಾರಗಳು ಭಿಕ್ಕುಗಳ ವೈಭೋಗದ ಆಗರವಾಗಿ ದಿಕ್ಕು ತಪ್ಪಿದ್ದು ಉಂಟು. ಈ ಎಲ್ಲ ಆಭಾಸಗಳ ನಡುವೆಯೂ ಬೌದ್ಧ ಧರ್ಮದ ಮೂಲ ತತ್ವಗಳನ್ನು ಕಾಪಿಟ್ಟುಕೊಂಡು ಬಂದಿರುವ ಪರಂಪರೆಯೂ ಇದೆ.ಆಧುನಿಕ ಸಂದರ್ಭದಲ್ಲಿ ರಾಹುಲ ಸಾಂಕೃತ್ತಾಯನ, ಬಾಬಾಸಾಹೇಬರಂಥವರು ಆ ಮೂಲ ಬುದ್ಧ ಧಮ್ಮವನ್ನು ಪುನರ್ ಅಸ್ತಿತ್ವಗೊಳಿಸುವ ಮಹಾ ಮಣಿಹವನ್ನು ಮಾಡಿದ್ದಾರೆ. ಆದಾಗ್ಯೂ ಮೂಲ ಸಿದ್ಧಾಂತವನ್ನು ಮಸುಕುಗೊಳಿಸುವ ಚಟುವಟಿಕೆಗಳು ನಡೆಯುತ್ತಲೆ ಇರುವುದು ವಿಪರ‌್ಯಾಸದ ಸಂಗತಿ.ಭಾರತದಲ್ಲಿ  ಕಾಣಿಸಿಕೊಂಡಿರುವ ಎಲ್ಲ ಪ್ರಖರ ವಿಚಾರವಾದಿಗಳನ್ನು ಅಪಮೌಲ್ಯಗೊಳಿಸುವ ಪ್ರಯತ್ನಗಳು ಕಾಲಕಾಲಕ್ಕೆ ನಡೆದುಕೊಂಡು ಬರುತ್ತಲೆ ಇವೆ. ಈ ಪ್ರಯತ್ನಗಳ ಹಿಂದೆ ವೈದಿಕರ ಸೂಕ್ಷ್ಮ ಸಾಂಸ್ಕೃತಿಕ ರಾಜಕಾರಣವೂ ಕೆಲಸ ಮಾಡಿದಂತಿದೆ. ದೇವರು, ದೇವಾಲಯ ಮುಂತಾದ ಕರ್ ಕಾಂಡಗಳನ್ನು ಉಗ್ರವಾಗಿ ಖಂಡಿಸಿದ  ಬಸವಣ್ಣನನ್ನು ಅವರ ಅನುಯಾಯಿಗಳು ಎಲ್ಲ ಬಗೆಯ ಕಂದಾಚಾರಗಳಲ್ಲಿ ಹೂತು ಹಾಕಿಲ್ಲವೆ? ಉಸಿರಿನ ಪರಿಮಳವಿರಲು ಕುಸುಮದ ಹಂಗೇಕಯ್ಯೊ? ಶಮೆ,ದಮೆ ಶಾಂತಿ, ಸೈರಣೆ ಇರುತಿರಲು ಗಂಧಾಕ್ಷತೆಯ ಹಂಗೇಕಯ್ಯೊ?  ಎಂದು ಸಾರಿದ ಶರಣರನ್ನು,

 ಜ್ಙಾನಪೂರ್ಣಂ ಜಗಜ್ಯೋತಿ ನಿರ್ಲವಾದ ಮನವೆ ಕರ್ಪೂರದಾರತಿ  ಎಂದು ಘೋಷಿಸಿದ ತತ್ವಪದಕಾರರನ್ನುಅಲ್ಹಾ ಅಲ್ಹಾ ಕಿಂವೂ ಪುಕಾರತೆ ಹೋ

ಅಲ್ಹಾ ಕ್ಯಾ ಬಹರೇ ಹೈ

ಚಿಂಮಟಿ ಕೇ ಪಾಂವೋ ಮೇ ಘುಂಘರು ಬಾಂಧೆ ತೋ

ಅಲ್ಹಾ ಸುನ್ ಸಕತಾ ಹೈ.ಎಂದು ಹಾಡಿದ ಸಂತರನ್ನು ಅವರ ಅನುಯಾಯಿಗಳು ಗತಾನುಗತಿಕ ಪೂಜೆ, ಆರಾಧನೆಗಳಲ್ಲಿ ಕಟ್ಟಿಹಾಕಿದ್ದಾರೆ. ಮತಧರ್ಮಗಳಾಚೆ ಶುದ್ಧ ಮಾನವೀಯತೆಯನ್ನು ಮೆರೆದಿದ್ದ ಬುದ್ಧ, ಬಸವ, ಕಬೀರ, ಮುಂತಾದ ಶರಣ ಸೂಫಿ ಸಂತರನ್ನು ನಾವು ಧಾರ್ಮಿಕ ಲಾಂಛನಗಳಲ್ಲಿ ಬಂಧಿಸಿ ಕುಬ್ಜಗೊಳಿಸಿದ್ದೇವೆ.ಎಲ್ಲಕ್ಕಿಂತ ಹೆಚ್ಚಾಗಿ ಅವರ ಜೀವಪರ ತಾತ್ವಿಕ ಮೌಲ್ಯಗಳನ್ನು ಮೂಲೆಗುಂಪು ಮಾಡ್ದ್ದಿದೇವೆ. ಬುದ್ಧನ ಜೀವಕಾರುಣ್ಯ ತತ್ವಗಳು, ಶರಣರ ವಚನಗಳ ಅನುಸಂಧಾನದ ಬದಲು ಅವರನ್ನು ಲಕ್ಷ ದೀಪೊತ್ಸವ, ಕೋಟಿ ಬಿರ್ಲ್ವಾಚನೆ, ಸಹಸ್ರಕುಂರ್ಭಾಚನೆಗಳಲ್ಲಿ ಹುಡುಕ ಹೊರಟಿದ್ದೇವೆ. `ಆಪದೀವೋಭವ ` ಎಂದು ಸಾರಿದ ತಥಾಗತ ಬುದ್ಧನಂತೂ ಅಂತರಂಗದಲ್ಲಿ ಬೆಳಕು ಹೊತ್ತಿಸುವ ಮೂಲಕವೆ ಬಹಿರಂಗದ ಕತ್ತಲೆ ಹೊಡೆದೋಡಿಸಬಲ್ಲೆವು ಎಂಬುದನ್ನು ಸಾಧಿಸಿ ತೋರಿಸಿದ್ದನು.

 

ಬಾಬಾಸಾಹೇಬರು ತಮ್ಮ  ಬುದ್ಧ ಮತ್ತು ಆತನ ದಮ್ಮ  ಎಂಬ ಪುಸ್ತಕದಲ್ಲಿ ಧಮ್ಮದಲ್ಲಿ ಪೂಜೆಗೆ, ಯಾತ್ರಾರ್ಥಿಗಳಿಗೆ, ಕೈಂಕರ್ಯಗಳಿಗೆ, ಸಮಾರಂಭಗಳಿಗೆ ಅಥವಾ ಬಲಿದಾನಗಳಿಗೆ ಯಾವ ಸ್ಥಾನವೂ ಇಲ್ಲ. ಪರಿಗಣನೆಯೇ ಇಲ್ಲ. ಎಂದು ಬರೆದಿದ್ದಾರೆ.ಹೀಗಿರುವಾಗಲೂ ಅಂತಹ ಮಹಾನ್ ದಾರ್ಶನಿಕನ ಹೆಸರಿನಲ್ಲಿ ಬಾಬಾಸಾಹೇಬರ ಧಮ್ಮ ಪರಿವರ್ತನಾ ಸಂದರ್ಭದ ನೆನಪಿಗಾಗಿ ಗುಲಬರ್ಗಾದ ಪ್ರಮುಖ ಬುದ್ಧ ವಿಹಾರದಲ್ಲಿ ವಿಜಯದಶಮಿಯಂದು ಲಕ್ಷ ದೀಪೋತ್ಸವ ಕಾರ್ಯಕ್ರಮ ಮಾಡ ಹೊರಟಿರುವದು ದುರಂತವಲ್ಲವೆ? ಬಾಬಾಸಾಹೇಬರು ಧಮ್ಮ ಪರಿವರ್ತನೆಗಾಗಿ ವಿಜಯದಶಮಿ ದಿನ ಆರಿಸಿಕೊಂಡದ್ದು ಧಾರ್ಮಿಕ ಕಾರಣಕ್ಕಾಗಿ ಅಲ್ಲ. ಅದು ಸೀಮೋಲ್ಲಂಘನ ದಿನವೂ ಹೌದು.ಅಸ್ಪೃಶ್ಯತೆಯ ಕಟ್ಟುಪಾಡುಗಳನ್ನು ಉಲ್ಲಂಘಿಸಿದ ಸಂಕೇತವಾಗಿ ಆ ದಿನವನ್ನು ಆರಿಸಿಕೊಂಡಿದ್ದರೇ ಹೊರತು ವೈದಿಕರ ಅಂಧಾನುಕರಣೆ ಪಾಲಿಸಲು ಅಲ್ಲ. ಆದ್ದರಿಂದ ಲಕ್ಷ ಲಕ್ಷ ಮೇಣದ ಬತ್ತಿಗಳನ್ನು ಹೊತ್ತಿಸಿ ಸಾಕಷ್ಟು ಹಣ ಮತ್ತು ಮಾನವ ಶ್ರಮ ಖರ್ಚು ಮಾಡಿ ಪರಿಸರ ಹಾಳು ಮಾಡುವ ಬದಲು ಗಿಡ ನೆಟ್ಟು ಲಕ್ಷ ವೃಕ್ಷೋತ್ಸವ ಅಥವಾ ಪುಸ್ತಕ ಹಂಚಿ ಲಕ್ಷ ಪುಸ್ತಕೋತ್ಸವ ಮಾಡುವುದು ಹೆಚ್ಚು ಅರ್ಥಪೂರ್ಣವಾದೀತು.

 

ಬಹಿರಂಗದ ಧೂಪ, ದೀಪ, ಮಂತ್ರಘೋಷಗಳು ವೈದಿಕರ ಕರ್ಮಕಾಂಡವೆ ಹೊರತು ಬುದ್ಧಧಮ್ಮದ ಉಪಕ್ರಮಗಳಲ್ಲ ಎಂಬ ಸಂಗತಿಯನ್ನು ಮನವರಿಕೆ  ಮಾಡಿಕೊಳ್ಳಬೇಕಾದ ಜರೂರಿ ಎಂದಿಗಿಂತ ಇಂದು ಹೆಚ್ಚಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry