ಬುದ್ಧ ರಕ್ಖಿತ ಮಹಾತೇರ ನಿಧನ

7

ಬುದ್ಧ ರಕ್ಖಿತ ಮಹಾತೇರ ನಿಧನ

Published:
Updated:

ಬೆಂಗಳೂರು: ಮಹಾಬೋಧಿ ಸೊಸೈಟಿಯ ಸಂಸ್ಥಾಪಕರಾದ ಬುದ್ಧ ರಕ್ಖಿತ ಮಹಾತೇರ (91) ಅವರು ಇಲ್ಲಿನ ಗಾಂಧಿನಗರದ ಬುದ್ಧ ವಿಹಾರದಲ್ಲಿ ಸೋಮವಾರ ಬೆಳಿಗ್ಗೆ 3.48ಕ್ಕೆ ಕೊನೆಯುಸಿರೆಳೆದರು.ಬುದ್ಧ ವಿಹಾರದಲ್ಲಿ 57 ವರ್ಷಗಳ ಸೇವೆ ಸಲ್ಲಿಸಿದ್ದ ಬುದ್ಧ ರಕ್ಖಿತ ಮಹಾತೇರರು,  ಮೃತರ ಅಂತ್ಯಕ್ರಿಯೆಯು ಬೆಂಗಳೂರಿನ ದಾಸನಪುರ ಹೋಬ ಳಿಯ ನರಸೀಪುರ ಗ್ರಾಮದಲ್ಲಿರುವ ಮಹಾಭೋದಿ ಧಮ್ಮದೂತ ವಿಹಾರದಲ್ಲಿ ಶುಕ್ರವಾರ (ಸೆ. 27) ನಡೆಯಲಿದೆ (ಸಂಪರ್ಕಕ್ಕೆ: 09343158020).ಬೌದ್ಧ ಧರ್ಮಕ್ಕೆ ಅಪಾರ ಕೊಡುಗೆ: ಮಣಿಪುರದ ಇಂಫಾಲದಲ್ಲಿ 1922ರ ಮಾರ್ಚ್‌ 12ರಂದು ಜನಿಸಿದ ಬುದ್ಧ ರಕ್ಖಿತ ಮಹಾತೇರ ಅವರು ಕೋಲ್ಕತ್ತಾದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದರು. ಕೆಲ ಕಾಲ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಡಾ.ಬಿ.ಆರ್‌ ಅಂಬೇಡ್ಕರ್‌ ಅವರಿಗೆ ದೀಕ್ಷೆ ನೀಡಿದ್ದ ಕುಶಿನಗರದ ಚೆಂದಮಣಿ ಮಹತೇರ ಅವರಿಂದ  1949ರಲ್ಲಿ ಬೌದ್ಧ ಬಿಕ್ಕುವಾಗಿ ದೀಕ್ಷೆ ಪಡೆದರು. ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನಲ್ಲಿ ಆರು ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿ ಬೌದ್ಧ ಧರ್ಮದ ತತ್ವಗಳನ್ನು ಕಲಿತರು. ಇದೇ ಸಮಯದಲ್ಲಿ 1952 ರಿಂದ 1954ರವರೆಗೆ ರಂಗೂನ್‌ನಲ್ಲಿ ನಡೆದ ಬುದ್ಧ ಶಾಸನ ಮಹಾಸಮ್ಮೇಳನದಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.ದೇಶಕ್ಕೆ ಹಿಂದಿರುಗಿದ ಬಳಿಕ ನಳಂದ ಸ್ನಾತಕೋತ್ತರ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1956ರಲ್ಲಿ ಬೆಂಗಳೂರಿಗೆ ಬಂದ ಅವರು, ಧಮ್ಮಪಾಲ ಕುಟುಂಬದವರ ಅಧೀನದಲ್ಲಿದ್ದ ಬೌದ್ಧ ಮಹಾಬೋಧಿ ಸಂಸ್ಥೆಯ ನೇತೃತ್ವ ವಹಿಸಿಕೊಂಡರು. ಕೆಲ ಕಾಲ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮದ ಪ್ರಾಧ್ಯಾಪಕರಾಗಿದ್ದರು. ಅಲ್ಲದೇ, ತೈವಾನ್‌ ದೇಶದ ಫೂ ಕ್ವಾಂಗ್‌ ಶಾನ್‌ ವಿಶ್ವವಿದ್ಯಾನಿಲಯದಲ್ಲೂ ಬೌದ್ಧ ಧರ್ಮದ ಬೋಧಕರಾಗಿ ಸೇವೆ ಸಲ್ಲಿಸಿದ್ದರು.1972ರಿಂದ ‘ಧಮ್ಮ’ ಎಂಬ ಮಾಸಿಕ ನಿಯತಕಾಲಿಕೆಯನ್ನು ಹೊರಡಿಸಿದ ಅವರು, ಬೌದ್ಧ ಧರ್ಮಕ್ಕೆ ಸಂಬಂಧಿಸಿದ 152 ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೇ, ಇಂಗ್ಲೆಂಡ್‌ನ ಕೆಂಬ್ರಿಜ್‌ ವಿಶ್ವವಿದ್ಯಾನಿಲಯ, ಅಮೆರಿಕಾ, ಜಪಾನ್‌, ಸಿಂಗಾಪುರ, ಶ್ರೀಲಂಕಾ ಮತ್ತು ಬರ್ಮಾದಲ್ಲಿ ಬೌದ್ಧ ಧರ್ಮದ ಪ್ರವಚನ ನೀಡಿದರು. ಹೀಗೆ ತಮ್ಮ ಜೀವನವನ್ನು ಧರ್ಮ ಪ್ರಚಾರಕ್ಕಾಗಿ ಮುಡಿಪಾಗಿಟ್ಟ ಅವರು, ಜತೆ ಜತೆಗೆ ಶೈಕ್ಷಣಿಕ ಮತ್ತು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು.ಮೈಸೂರಿನಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ಪಾಲಿ ಸ್ಟಡೀಸ್‌ ಅಂಡ್ ಬುದ್ಧಾಲಜಿ, ಮಹಾಬೋಧಿ ಶಾಲೆ ಮತ್ತು ಕಾರ್ಲಾ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದಾರೆ, ಅಂತೆಯೇ  ಬೆಂಗಳೂರಿನಲ್ಲಿ ಮಹಾಬೋಧಿ ವಸತಿ ಶಾಲೆ ನಿರ್ಮಿಸಿದ್ದಾರೆ. ಅರುಣಾಚಲ ಪ್ರದೇಶದಲ್ಲೂ ಬೌದ್ಧ ಧರ್ಮದ ಶಿಕ್ಷಣ ನೀಡಲು ಮೂರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಬನ್ನೇರುಘಟ್ಟ ಸಮೀಪದ ಸಕಲವಾರ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಿಸಿರುವುದರ ಜತೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಹಾಬೋಧಿ ಸುಟ್ಟ ಗಾಯ ಕೇಂದ್ರವನ್ನು ಸ್ಥಾಪಿಸಿದ್ದಾರೆ.ಬೌದ್ಧ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಮ್ಯಾನ್ಮಾರ್‌ ಸರ್ಕಾರ ಅವರಿಗೆ ‘ಅಭಿಧಜ ಅಗ್ಗಮಹಾ ಸದ್ದಮ್ಮ ಜೋತಿಕಾ’ ಎಂಬ ಅತ್ಯುಚ್ಛ ಪುರಸ್ಕಾರ ನೀಡಿತ್ತು. ಜತೆಗೆ ಥೈಲ್ಯಾಂಡ್‌ನ ಮಹಾಚೂಲಲಾಂಗಕ ರಾಜ ವಿಶ್ವವಿದ್ಯಾನಿಲಯ ಹಾಗೂ ರಾಜ್ಯದ ತುಮಕೂರು ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry