ಬುಧವಾರ ಮೋದಿ ಪ್ರಮಾಣ

7

ಬುಧವಾರ ಮೋದಿ ಪ್ರಮಾಣ

Published:
Updated:

ಅಹಮದಾಬಾದ್ (ಪಿಟಿಐ): ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿರುವ ನರೇಂದ್ರ ಮೋದಿ ಡಿಸೆಂಬರ್ 26ರಂದು ಬುಧವಾರ ನಾಲ್ಕನೆಯ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.2001ರ ಅಕ್ಟೋಬರ್ 1ರಂದು ಮೋದಿ ಮೊದಲ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆಗ ಬಿಜೆಪಿ ವರಿಷ್ಠರು ಕೇಶುಭಾಯ್ ಪಟೇಲ್ ಅವರನ್ನು ಕೆಳಗಿಳಿಸಿ ಮೋದಿ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ್ದರು.2002ರ ಫೆಬ್ರುವರಿ-ಮಾರ್ಚ್‌ನಲ್ಲಿ ಗೋಧ್ರಾ ನಂತರ ವ್ಯಾಪಕ ಕೋಮು ಹಿಂಸಾಚಾರ ನಡೆದರೂ ಆ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮೋದಿ ಮತ್ತೆ ಮುಖ್ಯಮಂತ್ರಿಯಾಗಿದ್ದರು. 2007ರಲ್ಲಿ ಮೂರನೇ ಬಾರಿ ಮುಖ್ಯಮಂತ್ರಿಯಾದರು.ಗುರುವಾರದ ಭಾರಿ ಜಯದ ನಂತರ ಶುಕ್ರವಾರ ಬೆಳಿಗ್ಗೆ ರಾಜಭವನಕ್ಕೆ ತೆರಳಿದ ನರೇಂದ್ರ ಮೋದಿ ತಾವು ಮತ್ತು ತಮ್ಮ ಸಂಪುಟ ಸಚಿವರ ರಾಜೀನಾಮೆಯನ್ನು ರಾಜ್ಯಪಾಲರಾದ  ಕಮ್ಲಾ ಬೆನಿವಾಲ್ ಅವರಿಗೆ ಸಲ್ಲಿಸಿದರು. ಡಿಸೆಂಬರ್ 25ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮೋದಿ ಅವರನ್ನು ಔಪಚಾರಿಕವಾಗಿ ಆಯ್ಕೆ ಮಾಡಲಾಗುವುದು. ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿ ವೀಕ್ಷಕರಾಗಿ ಆಗಮಿಸುವರು.

ಅಹಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ನೂತನ ಶಾಸಕಿ ಸವಿತಾಬೆನ್ ನಿಧನ

ವಡೋದರಾ (ಪಿಟಿಐ): ಗುಜರಾತ್ ನೂತನ ಶಾಸಕಿ ಕಾಂಗ್ರೆಸ್‌ನ ಸವಿತಾಬೆನ್ ಕಾಂತ್ (52) ಮಿದುಳು ರಕ್ತಸ್ರಾವದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.ಪಂಚಮಹಲ್ ಜಿಲ್ಲೆಯ ಮೊರ್ವಾ ಹದಫ್ ವಿಧಾನಸಭಾ ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದರು.ಗುರುವಾರ ಮತ ಎಣಿಕೆ ಕೇಂದ್ರದಲ್ಲಿ ಕುಳಿತಿರುವಾಗಲೇ ತಲೆಸುತ್ತು ಬಂದು ಕುರ್ಚಿಯಿಂದ ಕುಸಿದು ಬಿದ್ದಿದ್ದರು. ಪಂಚಮಹಲ್ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಗೋಧ್ರಾಗೆ ಅವರನ್ನು ಕೂಡಲೇ ಕರೆದೊಯ್ಯಲಾಗಿತ್ತು.

ಅವರ ದೇಹಸ್ಥಿತಿ ಬಿಗಡಾಯಿಸಿದ ನಂತರ ಗೋಧ್ರಾದಿಂದ 100 ಕಿ.ಮೀ. ದೂರದ ವಡೋದರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಜೀವರಕ್ಷಕ ಯಂತ್ರದ ನೆರವು ನೀಡಲಾಗಿತ್ತು. ಆದರೆ, ಮಿದುಳಿನ ರಕ್ತಸ್ರಾವದಿಂದಾಗಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ವಿರ್ಮಿಯಾ ಗ್ರಾಮಕ್ಕೆ ಸೇರಿದ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿಜಲ್‌ಭಾಯ್ ದಾಮೋರ್ ಅವರನ್ನು 11,289 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ, ತಮ್ಮ ಗೆಲುವಿನ ಸುದ್ದಿ ತಿಳಿಯುವ ಮುನ್ನವೇ ಅವರು ಪ್ರಜ್ಞಾಹೀನರಾದರು. ಸವಿತಾಬೆನ್ ಅವರ ನಿಧನದಿಂದ ವಿರೋಧ ಪಕ್ಷ ಕಾಂಗ್ರೆಸ್‌ನ ಬಲ 60ಕ್ಕೆ ಇಳಿದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry