ಭಾನುವಾರ, ಅಕ್ಟೋಬರ್ 20, 2019
22 °C

ಬುಲ್ಡೋಜರ್ಸ್ ಮೊದಲ ಎದುರಾಳಿ ಟೈಗರ್ಸ್

Published:
Updated:

ಬೆಂಗಳೂರು: `ರೀಲ್~ ಹೀರೊಗಳ `ರಿಯಲ್~ ಕ್ರಿಕೆಟ್ ಮತ್ತೆ ಶುರುವಾಗುತ್ತಿದೆ. ಸುದೀಪ್ ಸಾರಥ್ಯದ ಕರ್ನಾಟಕ ಬುಲ್ಡೋಜರ್ಸ್ ತಂಡದವರು ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟ್ವೆಂಟಿ-20 ಟೂರ್ನಿಯ ತಮ್ಮ  ಮೊದಲ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಎದುರಿಸಲಿದ್ದಾರೆ.ಈ ಪಂದ್ಯ ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಂಜೆ ಐದು ಗಂಟೆಗೆ ಆರಂಭವಾಗಲಿದೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬುಲ್‌ಡೋಜರ್ಸ್ ತಂಡದ ಆಟಗಾರರ ಹೆಸರು ಹಾಗೂ ಸಮವಸ್ತ್ರವನ್ನು ಅನಾವರಣಗೊಳಿಸಲಾಯಿತು.ಈ ಬಾರಿ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ವಿಶೇಷವೆಂದರೆ ಈ ಬಾರಿ ದರ್ಶನ್ ಕಣಕ್ಕಿಳಿಯುತ್ತಿರುವುದು ಪ್ರಮುಖ ಆಕರ್ಷಣೆ ಆಗಿದೆ. ಹಾಗೇ, ತರುಣ್, ಧ್ರುವ, ಚಿರಂಜೀವಿ ಸರ್ಜಾ, ತರುಣ್ ಸುಧೀರ್, ಭಾಸ್ಕರ್ ಈ ತಂಡದ ಪ್ರಮುಖ ಆಟಗಾರರು.ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬುಲ್‌ಡೋಜರ್ಸ್ ತಂಡದ ಮುಖ್ಯ ಆಯ್ಕೆದಾರ ಜಿ.ಆರ್.ವಿಶ್ವನಾಥ್ 50ಕ್ಕೂ ಹೆಚ್ಚು ಆಟಗಾರರ ಅಭ್ಯಾಸ ವೀಕ್ಷಿಸಿ 16 ಮಂದಿಯನ್ನು ಆಯ್ಕೆ ಮಾಡಿದ್ದಾರೆ.ಕಾರ್ಯಕ್ರಮದಲ್ಲಿ ಬುಲ್ಡೋಜರ್ಸ್ ತಂಡದ ಮಾಲೀಕ ಅಶೋಕ್ ಖೇಣಿ, ಹಿರಿಯ ನಟ ಹಾಗೂ ತಂಡದ ರಾಯಭಾರಿ ಅಂಬರೀಶ್, ಹಿರಿಯ ನಟಿ ಬಿ.ಸರೋಜಾ ದೇವಿ, ತಾರಾ, ತಂಡದ ರಾಯಭಾರಿಗಳಾದ ಐಂದ್ರಿತಾ ರೇ, ಮಾಧುರಿ ಭಟ್ಟಾಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು.`ಹೆಚ್ಚಿನವರು ಪ್ರತಿಭಾವಂತ ಆಟಗಾರರು. ಎಲ್ಲರೂ ಈ ಟೂರ್ನಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರತಿದಿನ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಈ ನಟರ ಕ್ರಿಕೆಟ್ ಪ್ರತಿಭೆ ಅನಾವರಣ ಮಾಡಲು ಸಿಸಿಎಲ್ ಒಂದು ವೇದಿಕೆ. ಇದು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ~ ಎಂದು ಜಿಆರ್‌ವಿ ತಿಳಿಸಿದರು.ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಅಲ್ಲದೇ, ಬೆಂಗಾಲ್ ಟೈಗರ್ಸ್, ತೆಲುಗು ವಾರಿಯರ್ಸ್, ಚೆನ್ನೈ ರಿನ್ಹೋಸ್, ಮುಂಬೈ ಹೀರೋಸ್ ಹಾಗೂ ಕೇರಳ ಸ್ಟ್ರೈಕರ್ಸ್ ತಂಡಗಳು ಪಾಲ್ಗೊಳ್ಳಲಿವೆ. ಬೆಂಗಳೂರಿನಲ್ಲಿ ಈ ಬಾರಿ ಎರಡು ಪಂದ್ಯ ನಡೆಯಲಿವೆ. ಸುದೀಪ್ ಬಳಗ ಇನ್ನೊಂದು ಪಂದ್ಯವನ್ನು ಜ.29ರಂದು ಮುಂಬೈ ಹೀರೋಸ್ ಎದುರು ಆಡಲಿದೆ. ಮೊದಲ ಸಿಸಿಎಲ್ ಅವತರಣಿಕೆಯಲ್ಲಿ ಚೆನ್ನೈ ರಿನ್ಹೋಸ್ ಚಾಂಪಿಯನ್ ಆಗಿತ್ತು. ಹೈದರಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಈ ತಂಡದವರು ಕರ್ನಾಟಕ ಬುಲ್ಡೋಜರ್ಸ್ ಎದುರು ಗೆದ್ದಿದ್ದರು.

Post Comments (+)