ಬೂದಿಹಳ್ಳಿ: ಸಂಧಾನಕ್ಕೆ ಕಸರತ್ತು

7

ಬೂದಿಹಳ್ಳಿ: ಸಂಧಾನಕ್ಕೆ ಕಸರತ್ತು

Published:
Updated:

ಚಳ್ಳಕೆರೆ: ತಾಲ್ಲೂಕಿನ ಬೂದಿಹಳ್ಳಿ ಕಳೆದ ವರ್ಷ ಗಮನ ಸೆಳೆದ ಗ್ರಾಮವಾಗಿತ್ತು. ದಲಿತರ ಮತ್ತು ಸವರ್ಣೀಯರ ನಡುವೆ ಸಂಭವಿಸಿದ ಗಲಭೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.ಅಂದಿನಿಂದ ಗ್ರಾಮ ತೊರೆದು ಚಳ್ಳಕೆರೆ ಹತ್ತಿರದ ವೆಂಕಟೇಶ್ವರ ಬಡಾವಣೆಯಲ್ಲಿ ನೆಲೆ ಕಂಡುಕೊಂಡ ದಲಿತ ಕುಟುಂಬಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಲೇ ಬಂದವು.ಸಾಮಾಜಿಕ ಬಹಿಷ್ಕಾರದ ಸೊಂಕು ತಗುಲಿದ ದಲಿತರಿಗೆ ಸಾಂತ್ವನ ಹೇಳಲು ಶಾಸಕ, ಮಂತ್ರಿಗಳು, ವಿವಿಧ ರಾಜಕೀಯ ಮುಖಂಡರ ದಂಡೇ ವೆಂಕಟೇಶ್ವರ ನಗರದ ಕಡೆಗೆ ಬಂದು ಹೋಗಿತ್ತು.ಇದಲ್ಲದೇ ಮಾಧ್ಯಮಗಳಲ್ಲಿ ಬಿತ್ತರಗೊಂಡ ಈ ಪ್ರಕರಣ ಇಡೀ ರಾಜ್ಯದೆಲ್ಲೆಡೆ ಗಮನಸೆಳೆದಿತ್ತು. ಎರಡು ದಿನಗಳ ಹಿಂದೆ ಚಳ್ಳಕೆರೆ ತಹಶೀಲ್ಧಾರ್ ಕಚೇರಿಯಲ್ಲಿ ಶಾಸಕರ ನೇತೃತ್ವದಲ್ಲಿ ನೊಂದ ದಲಿತ ಕುಟುಂಬಗಳಿಗೆ ಸರ್ಕಾರ ಮಂಜೂರು ಮಾಡಿರುವ ಭೂಮಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ.ಬುಧವಾರ ಆಗಮಿಸಿದ್ದ ಕೇಂದ್ರ ತನಿಖಾ ತಂಡ ದಲಿತರ ಅಹವಾಲು ಸ್ವೀಕರಿಸಿ, ಬೂದಿಹಳ್ಳಿಗೆ ತೆರಳಿ, ಸಂಜೆ ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿ ದಲಿತರ ಹಾಗೂ ಸವರ್ಣೀಯರ ಮಧ್ಯೆ ಬಾಂಧವ್ಯ ಬೆಸೆಯುವ ಕಾರ್ಯಕ್ಕೆ ಶಾಸಕ ಎನ್.ವೈ. ಗೋಪಾಲಕೃಷ್ಣ ಹಾಗೂ ಜಿಲ್ಲಾಧಿಕಾರಿ ಬಿಸ್ವಾಸ್ ಕಸರತ್ತು ನಡೆಸಿದ್ದು ಕಂಡುಬಂತು.

ಬೂದಿಹಳ್ಳಿಯಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ಗಲಭೆ ನಡೆದ ನಂತರದ ದಿನಗಳಲ್ಲಿ ಯಾವ ಜನಪ್ರತಿನಿಧಿಗಳೂ ಈ ಪ್ರಕರಣ ಬಗೆಹರಿಸುವ ಗೋಜಿಗೆ ಹೋಗಿರಲಿಲ್ಲ.ಈಗ ಕೇಂದ್ರ ತನಿಖಾ ತಂಡ ಆಗಮಿಸಿದ ಸಂದರ್ಭದಲ್ಲಿ ವೈಮನಸ್ಸಿನಿಂದ ಇರುವ ಸಮುದಾಯಗಳನ್ನು ಬೆಸೆಯುವ ಕಾರ್ಯ ನಡೆದಿರುವುದು ಶ್ಲಾಘನೀಯ ಎಂದು ನಾಗರಿಕರು ಅಭಿಪ್ರಾಯಪಡುತ್ತಾರೆ. ಜ. 26ರ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಸಮುದಾಯದ ಮುಖಂಡರ ಸಭೆಯಲ್ಲಿ ಈ ಕುರಿತು ನಿರ್ಣಯಕ್ಕೆ ಕೈಗೊಳ್ಳುವ ನಿರೀಕ್ಷೆ ಇದೆ.ಗ್ರಾಮ ತೊರೆದು ಬೇರೆಡೆ ನೆಲೆ ಕಂಡುಕೊಳ್ಳುತ್ತಿರುವ ದಲಿತ ಕುಟುಂಬಗಳಿಗೆ  ಇನ್ನಾದರೂ ಸ್ವಾಭಿಮಾನದಿಂದ ಬದುಕಲು ಅವಕಾಶ ಸಿಗುವುದೇ? ಇದೆಲ್ಲವನ್ನೂ 26ರ ನಂತರವೇ ಕಾದುನೋಡಬೇಕಾಗಿದೆ.ಒಡೆದ ಮನಸ್ಸುಗಳ ನಡುವೆ ಪ್ರೀತಿ ಬೆಸೆಯುವ ಕಾರ್ಯ ಸಫಲವಾದರೆ ಇದಕ್ಕಿಂತ ಸಂತೋಷ ಬೇರೆ ಯಾವುದೂ ಇಲ್ಲ. ಸಾಮರಸ್ಯದ ಜೀವನಕ್ಕೆ ಮತ್ತೆ ಬೂದಿಹಳ್ಳಿಯ ಜನತೆ ಸಜ್ಜಾಗುವುದೇ ಎಂಬುದಷ್ಟೇ ಸದ್ಯಕ್ಕಿರುವ ಕುತೂಹಲ 

                

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry