ಬೂದು ಬಣ್ಣದ ಹಕ್ಕಿ...

7

ಬೂದು ಬಣ್ಣದ ಹಕ್ಕಿ...

Published:
Updated:
ಬೂದು ಬಣ್ಣದ ಹಕ್ಕಿ...

ಚಿತ್ರರೂಪಕ

ಎಂ.ಎಫ್. ಹುಸೇನ್, ರಝಾ, ಸೌಝಾ ಅವರ ಸಾಲಿಗೆ ಸೇರುವ ಮತ್ತೊಂದು ಹೆಸರು ಅಕ್ಬರ್ ಪದಮ್‌ಸೀ. ಭಾರತೀಯ ಆಧುನಿಕ ಕಲೆಯನ್ನು ಕಟೆದ ಪ್ರಮುಖ ಕಲಾವಿದರು ಅವರು. ತೈಲವರ್ಣ, ಜಲವರ್ಣ, ಶಿಲ್ಪಕಲೆ, ಗ್ರಾಫಿಕ್ಸ್, ಛಾಯಾಗ್ರಹಣ ಹೀಗೆ ಅವರ ಕಾರ್ಯಕ್ಷೇತ್ರ ಹಲವು. ಸಿನಿಮಾದಲ್ಲೂ ಪ್ರಯೋಗ ನಡೆಸಿದ ಹೆಚ್ಚುಗಾರಿಕೆ ಅವರದು.ಅವರ ಕಲಾಕೃತಿ `ರಿಕ್ಲೈನಿಂಗ್ ನ್ಯೂಡ್~ ಸುಮಾರು 15 ಲಕ್ಷ ಡಾಲರ್‌ಗೆ ಹರಾಜಾಗಿ ದಾಖಲೆ ನಿರ್ಮಿಸಿತ್ತು. ಯುವ ಆಧುನಿಕ ಕಲಾವಿದರ ಪಾಲಿಗೆ ಪದಮ್‌ಸೀ ಆರಾಧ್ಯ ದೈವ, ಅವರ ಕಲಾಕೃತಿಗಳು ಪಠ್ಯವೇ ಸರಿ. ಪದಮ್‌ಸೀ ಹುಟ್ಟಿದ್ದು ಮುಂಬೈನಲ್ಲಿ 1928ರಲ್ಲಿ. ಪೂರ್ವಿಕರು ಗುಜರಾತ್ ಮೂಲದವರು. ಅದು 1947ರ ಸಮಯ. ಭಾರತೀಯ ಕಲಾಭಿತ್ತಿಯಲ್ಲಿ ಪ್ರಗತಿಪರ ಕಲಾವಿದರ ಸಮೂಹ ಹೊಸ ರಂಗು ಮೂಡಿಸುತ್ತಿದ್ದ ಹೊತ್ತಿನಲ್ಲಿ ಅಕ್ಬರ್ ಇನ್ನೂ ಜೆಜೆ ಕಲಾಶಾಲೆಯ ವಿದ್ಯಾರ್ಥಿಯಾಗಿದ್ದರು.

ಭಾರತೀಯ ಕಲೆಗೆ ಹೊಸ ಸ್ಪರ್ಶ ನೀಡಿದ ಈ ಸಮೂಹದ ಪ್ರಭಾವಲಯಕ್ಕೆ ಒಳಗಾದವರಲ್ಲಿ ಅಕ್ಬರ್ ಕೂಡ ಒಬ್ಬರು. ಮುಂಬೈನಲ್ಲಿ ಕಲಾ ಶಿಕ್ಷಣ ಪಡೆದ ನಂತರ 1951ರಲ್ಲಿ ಫ್ರಾನ್ಸ್‌ಗೆ ಪಯಣ. ಅಲ್ಲಿಯೇ ವಾಸ.ನಂತರ `ಸರ‌್ರಿಯಲಿಸಂ ಕಲಾಪಂಥದ ಪೋಪ್~ ಎಂದೇ ಖ್ಯಾತರಾಗಿದ್ದ ಆಂಡ್ರೆ ಬ್ರೆಟನ್ ಕಣ್ಣಿಗೆ ಬಿದ್ದರು. ಅವರ ಮೊದಲ ಏಕವ್ಯಕ್ತಿ ಪ್ರದರ್ಶನ ನಡೆದದ್ದು 1954ರಲ್ಲಿ, ಮುಂಬೈನಲ್ಲಿ. ಆಧುನಿಕ ಕಲಾವಿದ ಎಂದು ಹೆಚ್ಚು ಜನಪ್ರಿಯರಾದರೂ ಅವರನ್ನು ಒಂದೇ ಪಂಥದಲ್ಲಿ ಹಿಡಿದಿಡುವುದು ಕಠಿಣ ಕೆಲಸ.

ಅಷ್ಟರ ಮಟ್ಟಿಗೆ ಇಡೀ ಆರು ದಶಕಗಳ ಅವರ ಕಲಾ ದುಡಿಮೆ ಸ್ವೋಪಜ್ಞವೂ ಪ್ರಯೋಗಶೀಲವೂ ಆಗಿತ್ತು.  ಯುವ ಕಲಾವಿದನಾಗಿದ್ದಾಗಲೇ ಲಲಿತಕಲಾ ಅಕಾಡೆಮಿಯಿಂದ ಚಿನ್ನದ ಪದಕ, ಜೆ.ಡಿ. ರಾಕ್‌ಫೆಲ್ಲರ್ ಫೆಲೋಶಿಪ್ ಸಂದಿದ್ದವು.

ಪ್ರತಿಷ್ಠಿತ ಜವಾಹರ್‌ಲಾಲ್ ನೆಹರು ಫೆಲೋಶಿಪ್ ದೊರೆತದ್ದು ಮಧ್ಯವಯಸ್ಸಿನಲ್ಲಿ. ಮೊದಮೊದಲು ಪ್ರಖರ ಬಣ್ಣಗಳಲ್ಲಿ ಚಿತ್ರ ಬಿಡಿಸುತ್ತಿದ್ದ ಅವರು 1959-60ರಲ್ಲಿ ಬೂದು ಬಣ್ಣಕ್ಕೆ ಮನಸೋತರು. `ಬೂದು ಬಣ್ಣ ಪೂರ್ವಗ್ರಹಗಳಿಂದ ಮುಕ್ತ. ವಸ್ತು ಹಾಗೂ ಅವಕಾಶದ ನಡುವೆ ಅದು ಗೆರೆ ಎಳೆಯುವುದಿಲ್ಲ~ ಎಂದೇ ನಂಬಿದ್ದರು. ಬೂದು ಬಣ್ಣದ ಅವರ ಕಲಾಕೃತಿಗಳು ಸಮೃದ್ಧ ಹಾಗೂ ಕಾವ್ಯಾತ್ಮಕವಾದವು ಎಂಬ ಮೆಚ್ಚುಗೆ ಗಳಿಸಿವೆ.ಎಪ್ಪತ್ತರ ದಶಕದವರೆಗೆ ಮೆಟಾಸ್ಕೇಪ್‌ಗಳಲ್ಲೇ ಮುಳುಗಿದ್ದ ಅವರು ನಂತರ ಮನುಷ್ಯ ಛಾಯೆಯನ್ನು ಕಲಾಕೃತಿಗಳಲ್ಲಿ ಮೂಡಿಸಿ ಅಚ್ಚರಿ ಮೂಡಿಸಿದರು. ಸಂಸ್ಕೃತ ಕಾವ್ಯಗಳ ಬಗ್ಗೆ ಪದಮ್‌ಸೀ ಅವರಿಗೆ ಅಪಾರ ಆಸಕ್ತಿ.

ಅವರ ಅನೇಕ ಮೆಟಾಫಿಸಿಕಲ್ ಕಲಾಕೃತಿಗಳಿಗೆ (ವಾಸ್ತವದೊಂದಿಗೆ ಅವಾಸ್ತವವನ್ನು ಬೆರೆಸಿದ ಕಲಾಕೃತಿ) ಕಾವ್ಯಾತ್ಮಕ ಸ್ಪರ್ಶವಿದೆ. ವೆನಿಸ್, ಸಾವೊ ಪೌಲೊ, ಟೋಕಿಯೊ, ಪ್ಯಾರಿಸ್ ಮುಂತಾದೆಡೆ ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗವಹಿಸಿದ ಕೀರ್ತಿ ಅವರದು.

ಮಧ್ಯಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ಕಾಳಿದಾಸ ಸಮ್ಮಾನ್ ಪ್ರಶಸ್ತಿ, ಕೇಂದ್ರದ ಪದ್ಮಭೂಷಣ ಬಿರುದು ಅವರಿಗೆ ಸಂದ ಮೇರು ಗೌರವಗಳು. `ಸಿಜಿಗಿ~ ಹಾಗೂ `ಇವೆಂಟ್ಸ್ ಇನ್ ಕ್ಲೌಡ್ ಛೇಂಬರ್~ ಅವರ ಪ್ರಯೋಗಾತ್ಮಕ ಚಿತ್ರಗಳು. ಪ್ರಸ್ತುತ ಮುಂಬೈನಲ್ಲಿ ವಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry