ಬೃಂದಾವನದ ಕೃಷ್ಣ ಸುಂದರಿ

7

ಬೃಂದಾವನದ ಕೃಷ್ಣ ಸುಂದರಿ

Published:
Updated:
ಬೃಂದಾವನದ ಕೃಷ್ಣ ಸುಂದರಿ

`ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ತೆಲುಗಿನ `ಜೋಶ್' ಚಿತ್ರದಲ್ಲಿ ನಟಿಸುವ ಅವಕಾಶ ಬಂತು. ಆ ಚಿತ್ರದಲ್ಲಿ ನನ್ನದು ಮಾತಿನಮಲ್ಲಿ ಪಾತ್ರ. ತೆಲುಗು ಭಾಷೆ ಬರುತ್ತಿರಲಿಲ್ಲ. ಆದರೂ ಪುಟಗಟ್ಟಲೆ ಸಂಭಾಷಣೆಯನ್ನು ಉರುಹೊಡೆದು ಒಪ್ಪಿಸುತ್ತಿದೆ.ಭರತನಾಟ್ಯ ಕಲಿತಿದ್ದೆ. ಆದರೆ ನಟನೆಗೆಂದು ನಾನು ಏನನ್ನೂ ಕಲಿತಿಲ್ಲ. ನಿರ್ದೇಶಕರ ಅಣತಿಯಂತೆ ನಡೆಯುವುದಷ್ಟೇ ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ'. ಇದು `ಬೃಂದಾವನ' ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿರುವ ಬಹುಭಾಷಾ ನಟಿ ಕಾರ್ತಿಕಾ ನಾಯರ್ ಅನಿಸಿಕೆ.ಕಾರ್ತಿಕಾ ಹುಟ್ಟಿ ಬೆಳೆದಿದ್ದು ಮುಂಬೈ ಮಹಾನಗರಿಯಲ್ಲಿ. ತಾಯಿ ರಾಧಾ ಹಾಗೂ ದೊಡ್ಡಮ್ಮ ಅಂಬಿಕಾ ಎಂಬ ನಟಿಮಣಿಯರ ಅಕ್ಕರೆಯಲ್ಲೇ ಬೆಳೆದ ಈ ಹುಡುಗಿ ಬಾಲ್ಯದಿಂದಲೂ ಓದಿನಲ್ಲಿ ಮುಂದಂತೆ. ತೆಳ್ಳಗೆ, ಉದ್ದಕ್ಕೆ ಬಳುಕುವ ಬಳ್ಳಿಯಂತಿರುವ ಕಾರ್ತಿಕಾ ಭರತನಾಟ್ಯ ಪ್ರವೀಣೆ ಕೂಡ. ಮಲಯಾಳಂ, ತಮಿಳು, ತೆಲುಗಿನಲ್ಲಿ ಬೇಡಿಕೆಯ ಹೊಂದಿರುವ, ಈಗ ಕನ್ನಡಕ್ಕೂ ಕಾಲಿಟ್ಟಿರುವ ಈ ಕೃಷ್ಣಸುಂದರಿ `ಸಿನಿಮಾ ರಂಜನೆ' ಜೊತೆ ನಟನೆಯ ಕುರಿತಾದ ತಮ್ಮ ಅನುಭವ - ಅನಿಸಿಕೆಗಳನ್ನು ಹಂಚಿಕೊಂಡರು.ನಟನೆಯತ್ತ ವಾಲಿದ್ದು ಹೇಗೆ?

ಬಾಲ್ಯದಿಂದಲೂ ನಾನು ಭರತನಾಟ್ಯ ಪ್ರವೀಣೆ. ಬಹುಶಃ ನೃತ್ಯ ನನಗೆ ರಕ್ತಗತವಾಗಿ ಬಂದಿರಬೇಕು. ಅಮ್ಮ ಹಾಗೂ ದೊಡ್ಡಮ್ಮರ ಚಿತ್ರಗಳನ್ನು ನೋಡುತ್ತಾ ಬೆಳೆದವಳು ನಾನು. ನಮ್ಮ ಮನೆಯಲ್ಲಿ ಸಿನಿಮಾ ಕುರಿತೇ ಮಾತುಗಳು ನಡೆಯುತ್ತಿದ್ದವು. ಹೀಗಾಗಿ ಚಿತ್ರರಂಗಕ್ಕೆ ಕಾಲಿಡುವುದು ತೊಡಕಾಗಲಿಲ್ಲ. ಜತೆಗೆ ಅಭಿನಯದಲ್ಲಿ ಎಲ್ಲಿಯೂ ಎಡವಿಲ್ಲ.ನಟನೆಯಲ್ಲಿ ನಿಮ್ಮ ಮೇಷ್ಟ್ರು ಯಾರು?

ನನ್ನ ನಿರ್ದೇಶಕರೇ ನನ್ನ ಗುರುಗಳು. ಅವರು ಹೇಳಿದಂತೆ ನಟಿಸುವುದಷ್ಟೇ ನನ್ನ ಕೆಲಸ. ನಟನಾ ವೃತ್ತಿಯನ್ನು ಅತ್ಯಂತ ಶ್ರದ್ಧೆಯಿಂದ ಸ್ವೀಕರಿಸಿರುವ ನಾನು ವರ್ಷಕ್ಕೆ ಒಂದೇ ಚಿತ್ರದಲ್ಲಿ ನಟಿಸಿದರೂ ಆ ಪಾತ್ರವನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳುವಂತೆ ನಿರ್ವಹಿಸಬೇಕೆನ್ನುವುದು ನನ್ನ ಹಂಬಲ. ಇದೇ ಮನಸ್ಥಿತಿಯಲ್ಲಿ ದುಡಿಯುತ್ತಿರುವ ನನಗೆ, ಮಲಯಾಳಂನ ಮೊದಲ ಸಿನಿಮಾದಲ್ಲೇ ದ್ವಿಪಾತ್ರದಲ್ಲಿ ನಟಿಸುವ ಅವಕಾಶ ದೊರೆಯಿತು. ಆ ಚಿತ್ರಕ್ಕೆ ನನಗೆ ರಾಜ್ಯ ಪ್ರಶಸ್ತಿಯೂ ಲಭಿಸಿತು.ಬಹುಭಾಷೆಯಲ್ಲಿ ನಟಿಸಿರುವ ನಿಮಗೆ ಭಾಷೆ ತೊಡಕಾಗಲಿಲ್ಲವೇ?

ನಾನು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಅಲ್ಲಿ ಹಿಂದಿ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಗಳ ಜತೆಗೆ ಮನೆಯಲ್ಲೇ ಮಾತಾಡುವ ಮಲಯಾಳಂ ಬರುತ್ತಿತ್ತು. ತೆಲುಗು ಚಿತ್ರದಲ್ಲಿ ಅವಕಾಶ ಲಭಿಸಿದ ನಂತರ ತೆಲುಗು ಕಲಿತೆ. ತಮಿಳಿಗೆ ಕಾಲಿಟ್ಟ ನಂತರ ತಮಿಳು ಕಲಿತೆ. ಭಾಷೆ ಕಲಿಯುವುದೆಂದರೆ ನಾನು ಪರೀಕ್ಷೆಗೆ ತಯಾರಾಗುವಂತೆ ಅಭ್ಯಾಸ ಮಾಡುತ್ತೇನೆ. `ಬೃಂದಾವನ' ಚಿತ್ರದ ಮೂಲಕ ಕನ್ನಡವನ್ನೂ ಕಲಿತು ಏಳು ಭಾಷೆಗಳ ಪ್ರವೀಣೆ ಎನ್ನಿಸಿಕೊಳ್ಳಬೇಕೆಂದಿದ್ದೇನೆ.ಬಾಲಿವುಡ್‌ನತ್ತ ಮುಖ ಮಾಡುತ್ತೀರಾ?

ದಕ್ಷಿಣ ಚಿತ್ರರಂಗ ನನ್ನ ಮನೆಯಿದ್ದಂತೆ. ನಾನು ಬಾಲಿವುಡ್‌ಗೆ ಹೋದರೂ ಅವರು ನನ್ನನ್ನು ಹೊಸಬಳಂತೆ ನೋಡುವುದು ಸಹಜ. ಆದರೆ ತೀರಾ ಪರಿಚಿತವಾಗಿರುವ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಇದ್ದು ಇಲ್ಲೇ ಏನನ್ನಾದರೂ ಸಾಧಿಸುವುದು ನನ್ನ ಗುರಿ. ಸದ್ಯಕ್ಕೆ ನನಗೆ ದಕ್ಷಿಣದಲ್ಲಿ ಸಾಕಷ್ಟು ಅವಕಾಶಗಳಿವೆ.ಬಾಲಿವುಡ್‌ನಿಂದ ಅವಕಾಶಗಳು ಬರುತ್ತಿವೆಯಾದರೂ ನನಗೆ ಸರಿ ಹೊಂದುವ ಚಿತ್ರವನ್ನು ನಿರೀಕ್ಷಿಸುತ್ತಿದ್ದೇನೆ. ಈಗಿನ ಯುಗದಲ್ಲಿ ಒಬ್ಬ ನಟಿ ದೀರ್ಘ ಕಾಲ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇರುವಷ್ಟು ಕಾಲ ಉತ್ತಮ ಚಿತ್ರಗಳಲ್ಲಿ ನಟಿಸುವುದು, ಪ್ರೇಕ್ಷಕರ ನೆನಪಿನಲ್ಲಿ ನನ್ನ ನಟನೆಯ ಪಾತ್ರಗಳು ಶಾಶ್ವತವಾಗುವಂತೆ ಮಾಡುವುದು ನನ್ನ ಉದ್ದೇಶ.ನಟನೆಗೆ ದೈಹಿಕವಾಗಿ ಫಿಟ್ ಇರುವುದು ಅಗತ್ಯ. ಹೀಗಾಗಿ ನಿಮ್ಮ ಆಹಾರ ವ್ಯಾಯಾಮ?

ನಾನು ತಿನ್ನುವುದನ್ನು ಬಹುವಾಗಿ ಇಷ್ಟಪಡುತ್ತೇನೆ. ಸಿಹಿ ಎಂದರೆ ಬಲು ಇಷ್ಟ. ಬಿಸಿಬೇಳೆಬಾತ್ ನನಗೆ ಅಚ್ಚುಮೆಚ್ಚು. ಫಿಟ್ ಇರಬೇಕೆಂದು ತಿನ್ನುವುದನ್ನೇ ಬಿಡುವುದನ್ನು ನಾನು ಒಪ್ಪುವುದಿಲ್ಲ. ತಿಂದರೂ ಅದನ್ನು ವ್ಯವಸ್ಥಿತ ರೀತಿಯಲ್ಲಿ ಕರಗಿಸುವ ಕಲೆ ತಿಳಿದಿರಬೇಕು. ಹೀಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುತ್ತೇನೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry