ಶನಿವಾರ, ಜನವರಿ 18, 2020
19 °C
ಆ್ಯಷಸ್‌ ಕ್ರಿಕೆಟ್‌: ಡೇವಿಡ್‌ ವಾರ್ನರ್‌ ಶತಕ

ಬೃಹತ್‌ ಮುನ್ನಡೆಯತ್ತ ಆಸ್ಟ್ರೇಲಿಯಾ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್‌ (ಎಎಫ್‌ಪಿ): ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ (112) ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಬೃಹತ್‌ ಮುನ್ನಡೆ ಗಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ.ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಾಂಗರೂ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್‌ನಲ್ಲಿ 70 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 235 ರನ್‌ ಗಳಿಸಿದೆ. ಈ ಮೂಲಕ ಒಟ್ಟು 369 ರನ್‌ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ ತಂಡದವರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 88 ಓವರ್‌ಗಳಲ್ಲಿ 251 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡರು. ಆಸ್ಟ್ರೇಲಿಯಾ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಆರಂಭ ಲಭಿಸಿತು. ಪ್ರವಾಸಿ ತಂಡದ ವೇಗಿ ಸ್ಟುವರ್ಟ್‌ ಬ್ರಾಡ್‌ ಗಾಯಗೊಂಡು ಹೊರಗುಳಿದಿದ್ದು ಮತ್ತಷ್ಟು ನೆರವು ನೀಡಿತು. ವಾರ್ನರ್‌ ಹಾಗೂ ಕ್ರಿಸ್‌ ರೋಜರ್ಸ್‌ (54) ಮೊದಲ ವಿಕೆಟ್‌ಗೆ 157 ರನ್‌ ಸೇರಿಸಿದರು. ವಾರ್ನರ್‌ ಬಿರುಸಿನ

ಇನಿಂಗ್ಸ್‌ ಕಟ್ಟಿದರು. 140 ಎಸೆತಗಳನ್ನು ಎದುರಿಸಿದ ಅವರು 17 ಬೌಂಡರಿ ಹಾಗೂ ಎರಡು ಸಿಕ್ಸರ್‌ ಬಾರಿಸಿದರು.ಇದಕ್ಕೂ ಮೊದಲು ಇಂಗ್ಲೆಂಡ್‌ ತಂಡದ ಕೆಳ ಕ್ರಮಾಂಕದ ಬ್ಯಾಟ್ಸ್‌ ಮನ್‌ಗಳನ್ನು ನಿಯಂತ್ರಿಸುವಲ್ಲಿ ಆಸ್ಟ್ರೇಲಿಯಾದ ವೇಗಿಗಳು ಯಶಸ್ವಿಯಾದರು. ಅಲಸ್ಟೇರ್‌ ಕುಕ್‌ ಹಾಗೂ ಮೈಕೆಲ್‌ ಕಾರ್ಬರಿ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆತಿಥೇಯ ತಂಡದ ರ್‍ಯಾನ್‌  ಹ್ಯಾರಿಸ್‌ (48ಕ್ಕೆ3) ಹಾಗೂ ಪೀಟರ್‌ ಸಿಡ್ಲ್‌ (36ಕ್ಕೆ3) ಪ್ರಭಾವಿ ಬೌಲಿಂಗ್‌ ಪ್ರದರ್ಶನ ನೀಡಿದರು.ಸ್ಕೋರ್‌ ವಿವರ:

ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 103.3 ಓವರ್‌ಗಳಲ್ಲಿ 385 ಹಾಗೂ 70 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 235 (ಕ್ರಿಸ್‌ ರೋಜರ್ಸ್‌ 54, ಡೇವಿಡ್‌ ವಾರ್ನರ್‌ 112; ಟಿಮ್‌ ಬ್ರೆಸ್ನನ್‌ 49ಕ್ಕೆ1);ಇಂಗ್ಲೆಂಡ್‌: ಮೊದಲ ಇನಿಂಗ್ಸ್‌ 88 ಓವರ್‌ಗಳಲ್ಲಿ 251 (ರ್‍ಯಾನ್‌  ಹ್ಯಾರಿಸ್‌ 48ಕ್ಕೆ3, ಮಿಷೆಲ್‌ ಜಾನ್ಸನ್‌ 62ಕ್ಕೆ2, ಪೀಟರ್‌ ಸಿಡ್ಲ್‌ 36ಕ್ಕೆ3).

ಪ್ರತಿಕ್ರಿಯಿಸಿ (+)