ಬೃಹತ್ ಪ್ರತಿಭಟನಾ ರ್ಯಾಲಿ

7

ಬೃಹತ್ ಪ್ರತಿಭಟನಾ ರ್ಯಾಲಿ

Published:
Updated:

ಭಟ್ಕಳ: ಪಟ್ಟಣದಲ್ಲಿ ಹಾದುಹೋಗಿರುವ ರಾ.ಹೆ.ಯನ್ನೇ ಚತುಷ್ಪಥಗೊಳಿಸುವಂತೆ ಆಗ್ರಹಿಸಿ, ಬೈಪಾಸ್ ರಸ್ತೆಯನ್ನು ವಿರೋಧಿಸಿ ಇಲ್ಲಿನ ತಂಜೀಂ ಸಂಸ್ಥೆ ನೇತೃತ್ವದಲ್ಲಿ ಹಲವು ಸಂಘ-ಸಂಸ್ಥೆಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸೋಮವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಸಹಾಯಕ ಕಮೀಷನರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪಟ್ಟಣದ ಸುಲ್ತಾನ್‌ಪಳ್ಳಿಯಿಂದ ಹೊರಟ ಪ್ರತಿಭಟನಾ ರ್ಯಾಲಿ ಮಾರಿಕಟ್ಟೆ, ಮುಖ್ಯರಸ್ತೆ, ರಾ.ಹೆ. ಮೂಲಕ ಶಂಸುದ್ದೀನ್ ವೃತ್ತವನ್ನು ಹಾದು ಸಹಾಯಕ ಕಮೀಷನರ್ ಕಚೇರಿಗೆ ತೆರಳಿತು.ರ್ಯಾಲಿಯುದ್ದಕ್ಕೂ ಬೈಪಾಸ್ ರಸ್ತೆಗೆ ಧಿಕ್ಕಾರವನ್ನು ಕೂಗಲಾಯಿತು. ಈಗಿನ ಹೆದ್ದಾರಿಯನ್ನೇ ಅಗಲಗೊಳಿಸಬೇಕು ಎಂದು ಫಲಕಗಳನ್ನು ಪ್ರದರ್ಶಿಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿ.ಪಂ. ಅಧ್ಯಕ್ಷ ದಾಮೋದರ ಗರ್ಡೀಕರ್, ಅಭಿವೃದ್ಧಿ ಹೊಂದುತ್ತಿರುವ ಭಟ್ಕಳ ಮತ್ತಷ್ಟು ಅಭಿವೃದ್ಧಿ ಹೊಂದಬೇಕಾದರೆ, ಈಗಿರುವ ಹೆದ್ದಾರಿಯನ್ನೇ ಚತುಷ್ಟಥಗೊಳಿಸಬೇಕು. ಒಮ್ಮೆ ಬೈಪಾಸ್ ರಸ್ತೆ ನಿರ್ಮಿಸುವುದಕ್ಕೆ ಮುಂದಾದರೆ ತೀವ್ರವಾಗಿ ವಿರೋಧಿಸುವುದರೊಂದಿಗೆ ಅನಿರ್ಧಿಷ್ಟಾವಧಿ ಭಟ್ಕಳ ಬಂದ್‌ಗೆ ಕರೆ ನೀಡಬೇಕಾಗುತ್ತದೆ

ಎಂದು ಎಚ್ಚರಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಮತ್ತು ತಂಜೀಂನ ಕಾರ್ಯದರ್ಶಿ ಪರ್ವೇಜ್ ಕಾಶೀಂಜಿ, ಬೈಪಾಸ್ ರಸ್ತೆ ನಿರ್ಮಿಸಿದರೆ ಭಟ್ಕಳ ಕುಗ್ರಾಮವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಿರುವ ಹೆದ್ದಾರಿಯನ್ನು ಚತುಷ್ಟಥ ಮಾಡುವುದಕ್ಕೆ ಕೇವಲ 70 ಕೋಟಿ ರೂಪಾಯಿ ಸಾಕು. ಆದರೆ, ಬೈಪಾಸ್ ನಿರ್ಮಾಣಕ್ಕೆ 270 ಕೋಟಿ ರೂಪಾಯಿ ಅಗತ್ಯವಿದೆ ಎಂದು ವಿವರಿಸಿದರು. ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿ ಅಧ್ಯಕ್ಷ ರಾಮ ಮೊಗೇರ, ಬೈಪಾಸ್ ನಿರ್ಮಾಣದಿಂದ ಸಾವಿರಾರು ಎಕರೆ ಕೃಷಿಭೂಮಿಗಳು ನಾಶವಾಗಿ ನೂರಾರು ರೈತ ಕುಟುಂಬಗಳು ಬೀದಿಗೆ ಬರಲಿದೆ. 270 ಕೋಟಿ ರೂ.ವೆಚ್ಚದಲ್ಲಿ ಬೈಪಾಸ್ ನಿರ್ಮಿಸುವ ಬದಲು ಅದೇ ಹಣವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಿ ಎಂದು ಒತ್ತಾಯಿಸಿದರು.ಪುರಸಭೆ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಮತ್ತಿತರರು ಮಾತನಾಡಿದರು. ಮತ್ತೊಬ್ಬ ಕಾರ್ಯದರ್ಶಿ ಅಬ್ದುಲ್ ರಖೀಬ್ ಮನವಿ ಓದಿದರು. ತಂಜೀಂ ಅಧ್ಯಕ್ಷ ಡಾ. ಬದ್ರುಲ್ ಹಸನ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಜಂಟಿಯಾಗಿ ಸಹಾಯಕ ಕಮೀಷನರ್ ಡಾ.ಕೆ.ಎನ್ ಅನುರಾಧಾ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅವರು, ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. ಈ ಕುರಿತು ಹೆದ್ದಾರಿ ಇಲಾಖೆಯೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry