ಶನಿವಾರ, ಜನವರಿ 18, 2020
21 °C

ಬೃಹತ್ ಯಂತ್ರಗಳ ಅಂತರರಾಷ್ಟ್ರೀಯ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂವತ್ತಾರು ಎಕರೆಯ ವಿಶಾಲವಾದ ಪ್ರದೇಶ. 40 ಸಾವಿರ ಚದುರ ಅಡಿಯ ಹವಾನಿಯಂತ್ರಿತ ಕೊಠಡಿಯಲ್ಲಿ ವಿಶ್ವದ 24 ರಾಷ್ಟ್ರಗಳ ಟೂಲ್ಸ್ ಮತ್ತು ಮೆಷಿನ್ ತಯಾರಕ ದಿಗ್ಗಜರ ಸಮಾಗಮ..

ಇದು ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಗುರುವಾರ ಆರಂಭವಾದ `ಐಎಂಟಿಇಎಕ್ಸ್ ಫಾರ್ಮಿಂಗ್ ವಸ್ತುಪ್ರದರ್ಶನ-2012~ರಲ್ಲಿ ಕಂಡ ದೃಶ್ಯ.

ಈ ಪ್ರದರ್ಶನವನ್ನು ಭಾರತೀಯ ಯಂತ್ರಗಳ ಉಪಕರಣ ತಯಾರಕರ ಸಂಘದವರು ಆಯೋಜಿಸಿರುವ 43ನೇ ಇಂಟೆಕ್ಸ್ ವಸ್ತುಪ್ರದರ್ಶನ. ಇದನ್ನು ದಕ್ಷಿಣ  ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಅತಿ ದೊಡ್ಡ ತಾಂತ್ರಿಕ ವಸ್ತುಪ್ರದರ್ಶನ ಎಂದೇ ಬಿಂಬಿಸಲಾಗುತ್ತಿದೆ.

ಆರು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ಹೊಸ ತಂತ್ರಜ್ಞಾನಗಳ 600 ಯಂತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಬೃಹದಾಕಾರದ ಜೆಸಿಬಿಗಳು, ಇಟಾಚಿಗಳು, ಅವುಗಳಿಗೆ ಬೇಕಾದ ಬಿಡಿಭಾಗಗಳನ್ನು ಪ್ರದರ್ಶನಕ್ಕಿಡಲಾಗಿದೆ. ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಕೆಲಸ ಮಾಡುವಂತಹ ಹೊಸ ವಿನ್ಯಾಸದ ಉಪಕರಣಗಳೂ ಲಭ್ಯ. ಒಟ್ಟು 500 ಪ್ರದರ್ಶಕರು ಪಾಲ್ಗೊಂಡಿದ್ದಾರೆ.

ವಸ್ತು ಪ್ರದರ್ಶನದಲ್ಲಿ ಭಾರತ ಸೇರಿದಂತೆ, ಬೃಹತ್ ಪ್ರಮಾಣದಲ್ಲಿ ಯಂತ್ರೋಪಕರಣಗಳನ್ನು ಉತ್ಪಾದಿಸುವ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ಭಾಗವಹಿಸಿವೆ. ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಚೀನಾ, ಫಿನ್‌ಲೆಂಡ್, ಜರ್ಮನಿ, ಗ್ರೀಸ್, ಹಾಲೆಂಡ್, ಇಟಲಿ, ಕೊರಿಯಾ, ಮಲೇಷ್ಯಾ, ಪೋರ್ಚುಗಲ್, ಸಿಂಗಪೂರ್, ಸ್ಪೇನ್, ಸ್ವೀಡನ್, ಸ್ವಿಟ್ಜರ್‌ಲೆಂಡ್, ಥೈವಾನ್, ಟರ್ಕಿ, ಯುಕೆ ಮತ್ತು ಅಮೆರಿಕ ರಾಷ್ಟ್ರಗಳ ಯಂತ್ರೋಪಕರಣಗಳು ವಸ್ತು ಪ್ರದರ್ಶನದಲ್ಲಿವೆ. ಚೀನಾ, ತೈವಾನ್ ಮತ್ತು ಜರ್ಮನಿ ರಾಷ್ಟ್ರಗಳ ಕೆಲವು ಕಂಪೆನಿಗಳು  ಗುಂಪುಗಳ ಮೂಲಕ ಪಾಲ್ಗೊಂಡಿವೆ.

ಚೀನಾದ ಮೆಷಿನ್ ಟೂಲ್ ಮತ್ತು ಟೂಲ್ ಬಿಲ್ಡರ್ ಸಂಘಗಳು, ಇಸ್ರೋ, ಎಸಿಂಎ (ಆಟೊಮೊಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್‌), ಬೆಂಗಳೂರಿನ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯವರು ಈ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.

ವಿಶ್ವ ಖ್ಯಾತಿಯ ಎಎಂಡಿಎ, ಟ್ರಂಫ್, ಬ್ಲೂಸ್ಟಾರ್, ಕಾರ‌್ಲ ಜೆಸಿಸ್, ಬೀಜಿಂಗ್ ಇಎಸ್‌ಎಸ್, ಗೋದ್ರೇಜ್ ಮತ್ತು ಬೊಯ್ಸಿ, ಜಿಡಬ್ಲುಒ ಲಿಂಗ್ ಮೆಷಿನರಿ ಕೊ. ಲಿಮಿಟೆಡ್, ಹಿಂದೂಸ್ತಾನ್ ಹೈಡ್ರಾಲಿಸಿಸ್, ಕವಾಸಕಿ ಭಾರಿ ಕೈಗಾರಿಕೆಗಳು, ಯಮಾಜಕಿ ಮಜಾಕ್ ಇಂಡಿಯಾ ಪ್ರವೈವೇಟ್ ಲಿಮಿಟೆಡ್ ಸೇರಿದಂತೆ ಅನೇಕ ಬೃಹತ್ ಕಂಪೆನಿಗಳು ಭಾಗವಹಿಸಿವೆ. 

ಪ್ರತಿಕ್ರಿಯಿಸಿ (+)