ಬುಧವಾರ, ಜೂನ್ 16, 2021
21 °C

ಬೆಂಕಿಗೆ ಬೆಚ್ಚದ ಮಾದರಿ ಮಾವಿನ ತೋಟ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ವರ್ಷದಿಂದ ವರ್ಷಕ್ಕೆ ಮಾವಿನ ಬೆಳೆ ವಿಸ್ತೀರ್ಣ ಹೆಚ್ಚುತ್ತಲೇ ಇದೆ. ಆದರೆ ಪ್ರತಿ ವರ್ಷ ಬೇಸಿಗೆಯಲ್ಲಿ ನೂರಾರು ಎಕರೆ ಮಾವಿನ ತೋಟ ಬೆಂಕಿಗೆ ಆಹುತಿಯಾಗುತ್ತಿದೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ. ವಿಶಾಲವಾದ ಮಾವಿನ ತೋಟಗಳಿಗೆ ಹಸಿರು ಬೇಲಿ ಹಾಕುವುದು ಸಾಮಾನ್ಯ. ಈ ಬೇಲಿಯಲ್ಲಿ ಕತ್ತಾಳೆ ಜೊತೆಗೆ ಲಂಟಾನ, ಪರಿಕಿಲಿ, ಕಾರೆ ಮುಂತಾದ ಪೊದೆಗಳೊಂದಿಗೆ, ಹೊಂಗೆ, ಬೇವು ಮತ್ತಿತರ ಮರಗಳು, ಅವುಗಳ ಮೇಲೆ ಬೆಳೆದ ವಿವಿಧ ಜಾತಿಯ ಬಳ್ಳಿಗಳು ಇರುತ್ತವೆ.

 

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಈ ಗಿಡ ಮರ ಬಳ್ಳಿಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತವೆ. ಹೀಗೆ ಉದುರಿದ ತರಗೆಲೆ ಬೇಲಿಯಲ್ಲಿ ಉಳಿಯುತ್ತದೆ. ಅದಕ್ಕೆ ಬೆಂಕಿ ತಾಕಿದರೆ ಸಾಕು ಹೊತ್ತಿ ಉರಿಯುತ್ತದೆ.ಹೀಗೆ ಉರಿಯುವಾಗ ಬೇಲಿ ಅಂಚಿನ ಮಾವಿನ ಮರಗಳು ಬೆಂಕಿಗೆ ಆಹುತಿಯಾಗುತ್ತವೆ. ತೋಟ ಗಳಲ್ಲಿ ಒಣಹುಲ್ಲು, ಕಾಚಿ, ಗಿಡಗಿಂಟಿಗಳು ಇದ್ದಲ್ಲಿ ಬೇಲಿಗೆ ಬಿದ್ದ ಬೆಂಕಿ ಇಡೀ ತೋಟಕ್ಕೆ ಹರಡುತ್ತದೆ. ಈ ತೋಟಗಳು ಗ್ರಾಮಗಳಿಂದ ದೂರ ಇದ್ದಲ್ಲಿ ಹೆಚ್ಚಿನ ಹಾನಿ ಸಂಭವಿಸುತ್ತದೆ. ಪಕ್ಕದ ತೋಟಗಳಿಗೂ ಬೆಂಕಿಯ ಕೆನ್ನಾಲಗೆ ಚಾಚುವುದುಂಟು.ಇಂದು ಯಾವುದೇ ಬೇಲಿ ಬರಿ ಬೇಲಿಯಾಗಿ ಮಾತ್ರ ಉಳಿದಿಲ್ಲ. ಕಾಡುಗಳು ನಾಶವಾದ ಬಳಿಕ ಅಪರೂಪದ ಸಸ್ಯಗಳು ಹಾಗೂ ಜೀವಿಗಳು ಬೇಲಿಗಳಲ್ಲಿ ನೆಲೆ ಕಂಡುಕೊಂಡಿವೆ. ಬೇಲಿಗೆ ಬೆಂಕಿ ಬಿದ್ದರೆ ಗಿಡಮರಗಳೊಂದಿಗೆ ಅವುಗಳ ಬೀಜಗಳೂ ಸುಟ್ಟುಹೋಗುತ್ತವೆ. ಬೇಲಿಯಲ್ಲಿ ನೆಲೆಸಿರುವ ಹಲವಾರು ಪ್ರಾಣಿಗಳು ಸಾವನ್ನಪ್ಪು ತ್ತವೆ.ಇದು ಕಟ್ಟಿಕೊಳ್ಳಲು ಸಾಧ್ಯವಾಗದಂತಹ ನಷ್ಟ. ಬೇಸಿಗೆ ಕಾಲದಲ್ಲಿ ಮಾವಿನ ಮರಗಳು ಫಸಲಿಗೆ ಬಂದಿರುತ್ತವೆ. ಬೆಂಕಿ ಬಿದ್ದರೆ ಫಸಲು ಸಮೇತ ಸುಟ್ಟುಹೋಗುತ್ತವೆ. ಇದರಿಂದ ಮಾವು ಬೆಳೆಗಾರರಿಗೆ ನಷ್ಟ ಉಂಟಾಗುತ್ತದೆ. ವರ್ಷಾ ನುಗಟ್ಟಲೆ ಕಷ್ಟಪಟ್ಟು ಬೆಳೆಸಿದ ಮರಗಳು ಬೆಂಕಿಯಲ್ಲಿ ಬೆಂದುಹೋಗುತ್ತವೆ.ಮಾವಿನ ತೋಟಗಳನ್ನು ಬೆಂಕಿ ಹರಡಲು ಅವಕಾಶವಾಗದಂತೆ ರೂಪಿಸುವ ಮೂಲಕ ಬೆಂಕಿ ಅನಾಹುತವನ್ನು ತಪ್ಪಿಸಬಹುದಾಗಿದೆ. ತೋಟದ ಸುತ್ತಲೂ ಹಸಿರು ಬೇಲಿಗೆ ಬದಲಾಗಿ ತಂತಿ ಬೇಲಿಯನ್ನು ಹಾಕಬೇಕು. ಇದು ಸ್ವಲ್ಪ ವೆಚ್ಚದಾಯಕವಾದರೂ, ಬೆಂಕಿ ಅನಾಹುತದಿಂದ ಉಂಟಾಗುವ ನಷ್ಟವನ್ನು ಗಮನಿಸಿದರೆ ವೆಚ್ಚ ದೊಡ್ಡದೆನಿಸದು. ತೋಟಗಳಲ್ಲಿ ಹುಲ್ಲು, ಕಾಚಿ, ಗಿಡಗಿಂಟಿಗಳು ಬೆಳೆಯದಂತೆ ನೋಡಿಕೊಳ್ಳ ಬೇಕು.ತೋಟವನ್ನು ಮಳೆಗಾಲದಲ್ಲಿ ಪೂರ್ಣ ಪ್ರಮಾಣದಲ್ಲಿ ಉಳುಮೆ ಮಾಡಬೇಕು. ಮರಗಳ ಕೆಳಗಿನ ಒಣಗಿದ ಎಲೆಯನ್ನು ಭೂಮಿಗೆ ಸೇರಿಸಬೇಕು. ಇಷ್ಟು ಮಾಡಿದರೆ ತೋಟಕ್ಕೆ ಬೆಂಕಿ ಬೀಳಲು ಸಾಧ್ಯವಾಗುವುದಿಲ್ಲ.

 ತಾಲ್ಲೂಕಿನ ದಳಸನೂರು ಗ್ರಾಮದ ಸಮೀಪ ರೈತರೊಬ್ಬರು ಮಾದರಿಯಾಗಿ ಮಾವಿನ ತೋಟ ಬೆಳೆಸಿದ್ದಾರೆ.ಸುತ್ತಲೂ ತಂತಿ ಬೇಲಿ ಹಾಕಿದ್ದಾರೆ. ತೋಟವನ್ನು ಹದವಾಗಿ ಉಳುಮೆ ಮಾಡಿ ಸ್ವಚ್ಛವಾಗಿ ಇಟ್ಟಿದ್ದಾರೆ. ಇಂಥ ತೋಟಗಳಲ್ಲಿ ಬೆಂಕಿ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಮಾವು ಬೆಳೆಗಾರ ಶ್ರೀರಾಮರೆಡ್ಡಿ ಹೇಳುವಂತೆ ತಂತಿ ಬೇಲಿ ತುಸು ವೆಚ್ಚದಾಯಕವಾದರೂ ಬೆಂಕಿಯ ಭಯ ಇರುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.