ಬೆಂಕಿ:ಮಿನಿ ಲಾರಿ ಭಸ್ಮ

7

ಬೆಂಕಿ:ಮಿನಿ ಲಾರಿ ಭಸ್ಮ

Published:
Updated:

ಚಿತ್ತಾಪುರ:  ಗುರುಮಠಕಲ್‌ನಿಂದ ಪೇಪರ್ ಕಾಟನ್ ಬಾಕ್ಸ್‌ಗಳನ್ನು ತುಂಬಿಕೊಂಡು ಗುಲ್ಬರ್ಗಕ್ಕೆ ತೆರಳುತ್ತಿದ್ದ 407 ಐಶರ್ ಮಿನಿ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಇಡೀ ವಾಹನ ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಗಳಿ ಕ್ರಾಸ್ ಹತ್ತಿರ ಭಾನುವಾರ ಸಂಭವಿಸಿದೆ.ಗುರುಮಠಕಲ್‌ನ ಅಸ್ಲಂ ಎನ್ನುವವರಿಗೆ ಸೇರಿದ್ದ ಕೆ.ಎ.32-ಎ 6783 ಸಂಖ್ಯೆಯ ಮಿನಿ ಲಾರಿ ಪೇಪರ್ ಕಾಟನ್ ಬಾಕ್ಸ್ ತುಂಬಿಕೊಂಡು ದಂಡೋತಿ ಮಾರ್ಗವಾಗಿ ತೆಂಗಳಿ ಕ್ರಾಸ್ ಮೂಲಕ ಸಂಚರಿಸುವಾಗ ಈ ದುರ್ಘಟನೆ ನಡೆದಿದೆ. ಬೆಂಕಿ ಹತ್ತಿ ದಟ್ಟವಾಗಿ ಹೊಗೆಯಾಡುತ್ತಿದ್ದ ಲಾರಿ ಕ್ರಾಸ್‌ಗೆ ಬರುತ್ತಿದ್ದಂತೆ ಅಲ್ಲಿದ್ದ ಜನರು ನೋಡಿ ಬೆಂಕಿ ಬೆಂಕಿ ಎಂದು ಚೀರಾಡಿದ್ದಾರೆ. ತಕ್ಷಣ ಚಾಲಕ ರಸೀದ್ ಮಹ್ಮದ್ ದಾವೂದ್ ವಾಹನ ನಿಲ್ಲಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರೂ ಅದು ಹತೋಟಿಗೆ ಬಂದಿಲ್ಲ.ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಮಾಡಬೂಳ ಪೊಲೀಸರು ಚಿತ್ತಾಪುರ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ಧಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕಾಗಮಿಸಿ ಲಾರಿಗೆ ಹತ್ತಿಕೊಂಡಿದ್ದ ಬೆಂಕಿ, ಉರಿಯ ಜ್ವಾಲೆ ನಂದಿಸಿದರು. ಪೇಪರ್ ಕಾಟನ್ ಬಾಕ್ಸ್‌ಗೆ ಬೆಂಕಿ ಹತ್ತಿದ್ದ ಪರಿಣಾಮ ಬೇಗನೆ ಹತೋಟಿಗೆ ಬರದ ಕಾರಣ ಸೇಡಂ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ಕರೆಸಿ ಬೆಂಕಿ ನಂದಿಸುವ ಕೆಲಸ ಬಿರುಸಿನಿಂದ ನಡೆಯಿತು.ಲಾರಿಯ ಡೀಸೆಲ್ ಟ್ಯಾಂಕ್ ಒಡೆದು ಅದರಿಂದ ರಭಸವಾಗಿ ಹೊರಬಂದ ಡೀಸೆಲ್ ಪಕ್ಕದಲ್ಲೆ ಇದ್ದ ಟಿನ್‌ಶೆಡ್ಡಿನ ಮನೆ ಮತ್ತು ಹೋಟೆಲ್ ಹಿಂಭಾಗದಲ್ಲಿ ಹಾಕಿದ್ದ ಕಟ್ಟಿಗೆ ಮೇಲೆ ಸಿಡಿದಿದೆ. ಬೆಂಕಿ ಹತ್ತಿ ಇಡೀ ಕಟ್ಟಿಗೆ ಸುಟ್ಟು ಹೋಟೆಲ್‌ಗೆ ಬೆಂಕಿ ಹತ್ತುವಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಆಗಬಹುದಾದ ಭಾರಿ ದುರಂತವೊಂದನ್ನು ತಪ್ಪಿಸಿದರು.ಮಳಖೇಡ ಸೇತುವೆ ಹತ್ತಿರ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪರಿಣಾಮ ಸೇಡಂದಿಂದ ಗುಲ್ಬರ್ಗಕ್ಕೆ ಮತ್ತು ಗುಲ್ಬರ್ಗದಿಂದ ಸೇಡಂಗೆ ಸಂಚರಿಸುವ ವಾಹನಗಳ ಸಂಚಾರವನ್ನು ತೆಂಗಳಿ ಕ್ರಾಸ್‌ದಿಂದ ದಂಡೋತಿ ಮಾರ್ಗವಾಗಿ ಬದಲಾಯಿಸಲಾಗಿತ್ತು. ದಂಡೋತಿ ಮಾರ್ಗದ ರಸ್ತೆಯಲ್ಲೆ ಲಾರಿಗೆ ಬೆಂಕಿ ಹತ್ತಿದ್ದರಿಂದ ಎರಡು ಗಂಟೆಗಳ ಕಾಲ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ತೀವ್ರ ಪರದಾಡಿದರು. ರಸ್ತೆಯುದ್ದಕ್ಕೂ ಒಂದು ಕಿ.ಮಿ. ವರೆಗೆ ಲಾರಿ, ಟ್ಯಾಂಕರ್, ಕಾರು, ಜೀಪು, ಬಸ್‌ಗಳು ಸಾಲಾಗಿ ನಿಂತಿದ್ದವು.ಚಿತ್ತಾಪುರ ಅಗ್ನಿಶಾಮಕ ಠಾಣೆಯ ಶಾಂತಮೂರ್ತಿ, ದಶರಥ ಕುಂಬಾರ, ನರಸಪ್ಪ, ಹಣಮಂತ, ಶ್ರೀಕಾಂತ, ರಿಯಾಜ್ ಹಾಗೂ ಸೇಡಂ ಅಗ್ನಿಶಾಮಕ ಠಾಣೆಯ ಮಾಣಿಕ್ ಗುಪ್ತಾ, ಚಂದ್ರಶೇಖರ ಕಡ್ಡಿ, ಅಕ್ಬರ್‌ಮಿಯ್ಯಾ, ರಾಹುಲ್ ಕಿಳ್ಳಿ, ಸಂತೋಷ ಬೆಂಕಿ ನಂದಿಸಿದರು.ಘಟನಾ ಸ್ಥಳಕ್ಕೆ ಕಾಳಗಿ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಎಚ್. ಭೀಮಕ್ಕನವರ್, ಮಾಡಬೂಳ ಠಾಣಾಧಿಕಾರಿ ಎಂ.ಎಚ್. ದೊರೆ ಅವರು ಎಎಸ್‌ಐ ಸಿದ್ರಾಮಪ್ಪ ಸಿಂಗೆ, ಪೇದೆಗಳಾದ ಸಂತೋಷ, ಚಂದ್ರಾಮ, ರಾಮಚಂದ್ರ, ವಿಠಲ್ ಜಮಾದಾರ, ಲತೀಫ್ ಜಮಾದಾರ ಅವರೊಂದಿಗೆ ಆಗಮಿಸಿ ಬೆಂಕಿ ನಂದಿಸುವ ಮತ್ತು ಸಂಚಾರ ನಿಯಂತ್ರಣ ಕಾರ್ಯಕೈಗೊಂಡರು. ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry