ಬೆಂಕಿಯಲ್ಲಿ ಅರಳಿದ ಹೂ

7

ಬೆಂಕಿಯಲ್ಲಿ ಅರಳಿದ ಹೂ

Published:
Updated:
ಬೆಂಕಿಯಲ್ಲಿ ಅರಳಿದ ಹೂ

ಎಸ್ಸೆಸ್ಸೆಲ್ಸಿವರೆಗೆ ಕನ್ನಡದಲ್ಲೇ ಓದು. ಗುಲ್ಬರ್ಗಾ ಸಮೀಪದ ಚಕ್ರಕಟ್ಟ ಎಂಬ ಹಳ್ಳಿಯ ಕೊಳೆಗೇರಿಯಲ್ಲಿ ಆಗ ವಾಸ. ಡಾಕ್ಟರ್‌ ಆಗುವ ಬಯಕೆ ಚಿಗುರೊಡೆದದ್ದು ಮಾದೇವಿ ಬಾಲಕಿಯರ ಹೈಸ್ಕೂಲಿನಲ್ಲಿ. ಎಸ್‌ವಿ ಕಾಲೇಜಿಗೆ ಸೇರುವಷ್ಟರಲ್ಲಿ ಅದು ಗಿಡವಾಗಿತ್ತು. ಮನೆಯಲ್ಲಿ ಕಿತ್ತುತಿನ್ನುವ ಬಡತನ. ಕಮ್ಯುನಿಸ್ಟ್‌ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟ ಅಪ್ಪ ಮನೆಗಿಂತ ಹೆಚ್ಚು ಹೊರಗೇ ಇರುತ್ತಿದ್ದರು. ತಂತಾವೇ ಅಕ್ಷರ ಕಲಿತ ಅಪರೂಪದ ವ್ಯಕ್ತಿ ಅವರು. ತಾವು ಏನಾಗಲಿಲ್ಲವೋ ಅದು ಮಕ್ಕಳಾದರೂ ಆಗಬೇಕು ಎಂದು ಕನಸು ಕಾಣುವವರ ಪೈಕಿ. ಅಮ್ಮ ರತ್ನಮ್ಮ ಗಟ್ಟಿಗಿತ್ತಿ. ತರಕಾರಿ ಅಂಗಡಿ ಇಟ್ಟುಕೊಂಡು ಎಂಟು ಮಕ್ಕಳನ್ನು ಮಡಿಲಿಗೆಳೆದುಕೊಂಡ ಮಹಾತಾಯಿ.ಹಾಗೆ ಅಪ್ಪ ಬಾಬುರಾವ್‌ ಪಟ್ಟೇದಾರ್‌ ಕಂಡ ಕನಸನ್ನು ಸಾಕಾರಗೊಳಿಸಿದ ದೊಡ್ಡ ಮಗಳೀಗ ಕಿದ್ವಾಯಿ ಗ್ರಂಥಿ ಸಂಸ್ಥೆಯಲ್ಲಿ ದೊಡ್ಡ ಹೆಸರು. ಅವರೇ ಡಾ.ವಿಜಯಲಕ್ಷ್ಮಿ     ದೇಶಮಾನೆ.ಸೆಕೆಂಡ್‌ ಪಿಯೂಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಫಲಿತಾಂಶದ ಪಟ್ಟಿ ನೋಡಲು ಇದ್ದ ನೂಕುನುಗ್ಗಲು ತೂರಿಕೊಂಡು ಹೋಗಿದ್ದು ಖುದ್ದು ಬಾಬುರಾವ್‌. ಪಾಸಾದ ಮಗಳ ಹೆಸರನ್ನು ಕಂಡು ಖುಷಿಯಾದ ತಂದೆಯ ಮೈಮೇಲೆ ಇದ್ದದ್ದು ಹರಕಲು ಅಂಗಿ. `ನೀನು ಡಾಕ್ಟರೇ ಆಗು~ ಅಂತ ಆ ಕಾಲದಲ್ಲಿ ಅವರು ಹೇಳಿದ್ದು ವಿಶೇಷವೇ ಸರಿ. ಯಾಕೆಂದರೆ, ಎಂಟು ಮಕ್ಕಳ ದೊಡ್ಡ ಕುಟುಂಬರ ಹೊರೆ ಅವರ ಮೇಲಿತ್ತು. ಆ ಎಂಟರಲ್ಲಿ ಒಂದೇ ಗಂಡುಮಗು.ಇಷ್ಟದ ವಿದ್ಯೆ ಕಲಿಯುವುದಷ್ಟೇ ವಿಜಯಲಕ್ಷ್ಮಿಯವರಿಗೆ ಕಾಯಕವಾಗಿರಲಿಲ್ಲ. ಆಗೀಗ ತರಕಾರಿ ಅಂಗಡಿ ಮೇಲೆ ಕೂರಬೇಕಿತ್ತು. ತಂಗಿಯರನ್ನು ನೋಡಿಕೊಳ್ಳುವ ಜರೂರೂ ಇತ್ತು. ಎಲ್ಲಾ ಉಸಾಬರಿಗಳ ನಡುವೆಯೂ ಅವರ ಕೈಲಿ ಪುಸ್ತಕ ಇರದೇ ಇರುತ್ತಿರಲಿಲ್ಲ. ಯಾವುದೋ ಹಸು ತರಕಾರಿಗೆ ಬಾಯಿ ಹಾಕಿದ್ದೂ ಗೊತ್ತಾಗದಷ್ಟು ಓದಿನಲ್ಲಿ ತನ್ಮಯಳಾಗಿರುತ್ತಿದ್ದ ಹುಡುಗಿಯನ್ನು ಸುತ್ತಮುತ್ತಲ ಜನ `ಅಕ್ಕಾ... ಅಲ್ಲಿ ನೋಡೆ~ ಅಂತ ಎಚ್ಚರಿಸುತ್ತ್ದ್ದಿದ ದಿನಗಳ ನೆನಪು ಅವರಿಗಿನ್ನೂ ಇದೆ.

ತಮ್ಮ ಬದುಕಿನ ಕನಸೆಂಬಂತೆ ತಂದೆ ಮಗಳನ್ನು ಎಂಬಿಬಿಎಗೆ ಸೇರಿಸಿದರು. ಶುಲ್ಕ ಕಟ್ಟಲು ಹಣವಿರಲಿಲ್ಲ. ಅಮ್ಮ ತಮ್ಮ ತಾಳಿಯನ್ನೇ ಅಡವಿಟ್ಟು ಮಗಳ ವಿದ್ಯಾಭ್ಯಾಸಕ್ಕಾಗಿ ಹಣ ಕೊಟ್ಟರು.

ಎಂಬಿಬಿಎಸ್‌ ಸೇರಿದ ಮೊದಲ ವರ್ಷ ಯಾರದ್ದೋ ಏಪ್ರನ್‌ ಹಾಕಿಕೊಂಡ್ದ್ದಿದ ವಿಜಯಲಕ್ಷ್ಮಿ ಗಾಬರಿಯ ಕ್ಷಣಗಳನ್ನು ಎದುರಿಸಿದರು. ಡಿಸೆಕ್ಷನ್‌ ಹಾಲ್‌ನಲ್ಲಿ ಪಟಪಟನೆ ಪ್ರಶ್ನೆ ಕೇಳಿ ಅಂಕ ನೀಡುವ ಪದ್ಧತಿ ಆಗ ಇತ್ತು. ಹಳ್ಳಿಯ ಹಿನ್ನೆಲೆಯವರಾದ ವಿಜಯಲಕ್ಷ್ಮಿ ಕುಂಭದ್ರೋಣ ಮಳೆಯಂಥ ಪ್ರಶ್ನೆಗಳಿಗೆ ಒದ್ದೆಮುದ್ದೆಯಾಗಿಹೋದರು. ಓದಿದ್ದನ್ನು ಥಟ್ಟನೆ ಹೇಳುವಷ್ಟು ಸಿದ್ಧತೆ ಇರಲಿಲ್ಲ. ಮೊದಲ ವರ್ಷ ಫೇಲಾದರು. ಡಾಕ್ಟರಾಗುವುದು ತಮ್ಮಿಂದ ಸಾಧ್ಯವೇ ಇಲ್ಲ ಅಂದುಕೊಂಡು ಮನೆಗೆ ಹೊರಟರು. ಆಗ ಧೈರ್ಯ ತುಂಬಿದ್ದು ತಂಗಿ. ಮನೆಯವರೆಲ್ಲಾ ತಮಗಾಗಿ ಏನೆಲ್ಲಾ ಮಾಡಿದ್ದಾರೆಂಬ ಅರಿವು ವಿಜಯಲಕ್ಷ್ಮಿಯವರಲ್ಲಿ ಮೂಡಿತು. ಅಮ್ಮ ಕೊಡಿಸಿದ್ದ ಟ್ರಂಕು ಹಿಡಿದು ಮತ್ತೆ ಕಾಲೇಜಿನತ್ತ ಮುಖ ಮಾಡಿದರು.

ವಿಜಯಲಕ್ಷ್ಮಿಯವರು ಓದುತ್ತಿದ್ದ ಬ್ಯಾಚ್‌ಗೆ ಮೊದಲ ಸಲ ಎಂಸಿಕ್ಯೂ (ಮಲ್ಟಿಪಲ್‌ ಛಾಯ್ಸ್‌ ಕ್ವೆಸ್ಚನ್ಸ್‌) ಪದ್ಧತಿಯಲ್ಲಿ ಪರೀಕ್ಷೆ ನಡೆಸಿದರು. ಅಲ್ಲಿಯವರೆಗೆ ಯಾರಿಗೂ ಅದರ ಗಂಧ-ಗಾಳಿ ಇರಲಿಲ್ಲ. ಆ ರೀತಿ ಪರೀಕ್ಷೆಗೆ ತಯಾರಾಗೋದು ಅವರಿಗೆ ಹವ್ಯಾಸವಾಗಿತ್ತು. ಹಾಗಾಗಿ ಒಂದೂ ತಪ್ಪಿಲ್ಲದೆ ಉತ್ತರ ಬರೆದರು. ಮಾಮೂಲಿ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಸ್ಕೋರ್‌ ಮಾಡ್ತಾ ಇದ್ದವರು ಕೂಡ ಆ ಪರೀಕ್ಷೆಯಲ್ಲಿ ಫೇಲಾಗಿದ್ದರು. ಆ ಪರೀಕ್ಷೆಯಿಂದ ಆತ್ಮವಿಶ್ವಾಸ ಮೂಡಿತು.

ಮಕ್ಕಳು ಹುಟ್ಟುವ ಮೊದಲೇ ಅವರಿಗೆ ಏನೇನು ಕಲಿಸಬೇಕು ಅಂತ ಅಲ್ಲಿಇಲ್ಲಿ ತಂದ ಪತ್ರಿಕೆಗಳಲ್ಲಿ ಅಪ್ಪ ಗುರುತು ಹಾಕಿ ಇಟ್ಟಿದ್ದರು. ಭವಿಷ್ಯದ ಕುರಿತು ಅವರಿಗೆ ಆ ಮಟ್ಟದ ದೂರದೃಷ್ಟಿ ಇತ್ತು. ಅಪ್ಪ ಏನೆಲ್ಲಾ ಬಯಸಿದರೋ ಅದನ್ನೆಲ್ಲಾ ವಿಜಯಲಕ್ಷ್ಮಿ ಓದಿದ್ದಿದೆ. ಇಳಿವಯಸ್ಸಿನ ತಂದೆಯೊಟ್ಟಿಗೆ ಚರ್ಚೆ ನಡೆಸಿಯೇ ಸಾಕಷ್ಟು ಸಂಗತಿಗಳನ್ನು ತಿಳಿದುಕೊಂಡಿರುವ ವಿಜಯಲಕ್ಷ್ಮಿ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೇರಿದರು. ಶರಣರ ವಚನಗಳಿಂದ ಹಿಡಿದು ವಿದೇಶಾಂಗ ವ್ಯವಹಾರಗಳ ಬಗ್ಗೆ ಎಲ್ಲಾ ವಿಷಯಗಳಿಗೂ ತಂದೆಯೇ ಮೇಷ್ಟ್ರು.

ವಿಜಯಲಕ್ಷ್ಮಿ ಅವರು ನಡೆದ ಹಾದಿಯಲ್ಲಿಯೇ ಅವರ ಸಹೋದರಿಯರೂ ನಡೆದರು. ತಂಗಿಯರಾದ ಸಮತಾ, ಜಾಗೃತಿ, ನಾಗರತ್ನ, ಜಯಶ್ರೀ ಎಲ್ಲರೂ ಪಿಎಚ್‌.ಡಿ. ಮಾಡಿದ್ದಾರೆಂಬುದೇ ಇದಕ್ಕೆ ಸಾಕ್ಷಿ.

`ನಾನು ದೇಶಕ್ಕಾಗಿ ಹುಟ್ಟಿದವಳು. ವಿವೇಕಾನಂದರ ತತ್ವಗಳನ್ನು ನಂಬಿದ್ದೇನೆ. ಸಂಸಾರ ಸಣ್ಣದೆನಿಸುತ್ತಿತ್ತು. ಅದರ ಸುಳಿ ಬೇಕಿರಲಿಲ್ಲ. ಅಪ್ಪನಿಗೆ ಹೇಳಿದೆ. ಅವರು ಅದಿಲ್ಲದೆ ಬದುಕುವುದು ಕಷ್ಟ ಅಂದರು. ಪ್ರಯೋಗಶೀಲ ಮನಸ್ಸು ನನ್ನದು. ಒಂಟಿಯಾಗೇ ಬದುಕಿ ತೋರಿಸೋಣ ಅಂದುಕೊಂಡೆ. ಅಪ್ಪ ಕೂಡ ಚಕಾರವೆತ್ತಲಿಲ್ಲ. ಆಸ್ಪತ್ರೆಗೆ ಕಲಿಯಲು ಬರುವ ಎಲ್ಲರೂ ನನ್ನ ಮಕ್ಕಳಂತೆ. ನಾನು ಓದುತ್ತಿದ್ದ ಕಾಲದಲ್ಲಿ ಅನನುಭವಿಗಳಿಗೆ ಸರ್ಜರಿ ಮಾಡಲು ಬಿಡುತ್ತಿರಲಿಲ್ಲ. ನಾನೀಗ ಯುವಕರಿಗೇ ಹೆಚ್ಚು ಬೆನ್ನುತಟ್ಟುತ್ತೇನೆ...~ ಎನ್ನುವ ವಿಜಯಲಕ್ಷ್ಮಿಯವರಲ್ಲಿ ಕಾಲವನ್ನು ಮರೆಸುವಷ್ಟು ಮಾತಾಡಬಲ್ಲ ಅನುಭವ, ಸರಕು ಇದೆ. ಪ್ರತಿ ಮಾತಿಗೂ ಭಾವುಕರಾಗುವ ಅವರು ಮಾನವೀಯ ಮೂರ್ತಿ. 

                       

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry