ಶನಿವಾರ, ಮೇ 21, 2022
28 °C

ಬೆಂಕಿ ಆಕಸ್ಮಿಕ: 2 ಹಡಗು, 1 ದೋಣಿ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದುರಸ್ತಿ ಸಲುವಾಗಿ ಇಲ್ಲಿನ ಕಸಬಾ ಬೆಂಗ್ರೆಯ ಗುರುಪುರ ನದಿ ದಡದಲ್ಲಿ ನಿಲ್ಲಿಸಿದ್ದ ಎರಡು ಸರಕು ಸಾಗಣೆ ಹಡಗು ಹಾಗೂ ಒಂದು ಮೀನುಗಾರಿಕಾ ದೋಣಿ ಬೆಂಕಿಗೆ ಆಹುತಿಯಾಗಿದೆ. ಇನ್ನೊಂದು ಪ್ರಯಾಣಿಕ ಹಡಗಿಗೆ ಭಾಗಶಃ ಹಾನಿಯಾಗಿದೆ. ಅವಘಡದಿಂದ ಸುಮಾರು ರೂ.1 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಅಕ್ಕಪಕ್ಕದ ದೋಣಿಗಳಿಗೆ  ಬೆಂಕಿ ವ್ಯಾಪಿಸದಂತೆ ತಡೆಯುವಲ್ಲಿ ಯಶಸ್ವಿಯಾದರು.ಅಗ್ನಿಶಾಮಕ ದಳದ 25ಕ್ಕೂ ಅಧಿಕ ಸಿಬ್ಬಂದಿ ಆರು ಅಗ್ನಿಶಾಮಕ ವಾಹನ ಬಳಸಿ ಎರಡೂವರೆ ತಾಸು ಕಾರ್ಯಾಚರಣೆ ಬಳಿಕ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು.ಲಕ್ಷದ್ವೀಪದ ಅಮಿನಿಯ ಅಲಿ ಕುಂಞಿ ಅವರಿಗೆ ಸೇರಿದ ‘ಎಂಎಸ್‌ವಿ ಮುಸ್ತಾಫಾ’ ಹಾಗೂ ಲಕ್ಷದ್ವೀಪ ಕವರತ್ತಿಯ ಅಹ್ಮದ್ ಅವರ ‘ಎಂಎಸ್‌ವಿ ಅಬ್ಬಾಸ್’ ಹಡಗು ಸಂಪೂರ್ಣ ಸುಟ್ಟುಹೋಗಿವೆ. ಅದರ ಎಂಜಿನ್, ಹಾಗೂ ಮರದ ಪರಿಕರಗಳು ಭಸ್ಮವಾಗಿ ತಲಾ 60 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಪಕ್ಕದಲ್ಲೇ ನಿಲ್ಲಿಸಿದ್ದ ಬೆಂಗ್ರೆಯ ಬಿಫಾತಿಮಾ ಅವರಿಗೆ ಸೇರಿದ ಮೀನುಗಾರಿಕಾ ದೋಣಿ ‘ಕರಾವಳಿ’ ಸಂಪೂರ್ಣ ಸುಟ್ಟುಹೋಗಿದ್ದು, ರೂ 10 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಗುಜರಾತ್ ಮೂಲದ ಅಗರವಾಲ್ ಎಂಬವರಿಗೆ ಸೇರಿದ ‘ಹಶ್ಮಿ ಮದದ್’ ಹಡಗಿನಲ್ಲಿದ್ದ ಬಹುತೇಕ ಪರಿಕರಗಳು ಸುಟ್ಟುಕರಕಲಾಗಿದ್ದು ಸುಮಾರು 30 ಲಕ್ಷ ನಷ್ಟ ಉಂಟಾಗಿದೆ. ಆ ಹಡಗಿಗೆ ಬೆಂಕಿ ಹಿಡಿದ ಸ್ವಲ್ಪ ಹೊತ್ತಿನಲ್ಲೇ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.‘ದೋಣಿ ದುರಸ್ತಿ ನಡೆಸುವ ಸ್ಥಳದಲ್ಲಿ ಸರಕು ಇಡಲು ನಿರ್ಮಿಸಲಾಗಿದ್ದ ತೆಂಗಿನ ಗರಿಯ ಚಪ್ಪರಕ್ಕೆ ತಗುಲಿದ ಬೆಂಕಿ ಮೊದಲು ಮೀನುಗಾರಿಕಾ ದೋಣಿಗೆ ವ್ಯಾಪಿಸಿತು. ಬಳಿಕ ಪಡುವಣದ ಗಾಳಿಯಿಂದಾಗಿ ಬೆಂಕಿ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಹಡಗಿಗೂ ಹತ್ತಿತು. ಬೆಂಕಿ ನಂದಿಸಲು ಯತ್ನಿಸಿದರಾದರು ಅಷ್ಟರಲ್ಲೇ ಬೆಂಕಿಯ ಜ್ವಾಲೆ ನಿಯಂತ್ರಣಕ್ಕೆ ಮೀರಿ ಹಬ್ಬಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.‘ಹಡಗುಗಳನ್ನು ವರ್ಷದ ಹಿಂದೆಯೇ ದುರಸ್ತಿ ಸಲುವಾಗಿ ಅಳಿವೆಯಿಂದ ಮೇಲಕ್ಕೆತ್ತಿ ದಡದಲ್ಲಿ ನಿಲ್ಲಿಸಲಾಗಿತ್ತು. ಅವುಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿತ್ತು. ಭಾನುವಾರ ಕೆಲಸಗಾರರಿಗೆ ರಜಾದಿನವಾಗಿದ್ದರಿಂದ ಸ್ಥಳದಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಪ್ರಾಣ ಹಾನಿ ಸಂಭವಿಸಿಲ್ಲ’ ಎಂದು ಸ್ಥಳೀಯರು ತಿಳಿಸಿದರು. ‘ಸಾಕಷ್ಟು ಅಂತರ ಬಿಡದೆ ನಿಲ್ಲಿಸಿದ್ದರಿಂದ ಅಕ್ಕಪಕ್ಕದ ಹಡಗುಗಳಿಗೂ ಬೆಂಕಿ ಹಬ್ಬಿತು. ಇನ್ನು ಮುಂದಾದರೂ ರಿಪೇರಿ ಸಲುವಾಗಿ ದಡದಲ್ಲಿ ನಿಲ್ಲಿಸುವ ಹಡಗುಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು ಎಂದು ಅಗ್ನಿಶಾಮಕ ದಳದ ಪ್ರಾದೇಶಿಕ ಅಧಿಕಾರಿ ಬಸವಣ್ಣ ತಿಳಿಸಿದರು.ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.