ಬೆಂಕಿ ಆಕಸ್ಮಿಕ: 8 ಗುಡಿಸಲು ಭಸ್ಮ

7

ಬೆಂಕಿ ಆಕಸ್ಮಿಕ: 8 ಗುಡಿಸಲು ಭಸ್ಮ

Published:
Updated:

ಬಳ್ಳಾರಿ: ತಾಲ್ಲೂಕಿನ ಎತ್ತಿನಬೂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಯ್ಯನ ಕ್ಯಾಂಪ್‌ನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 8 ಗುಡಿಸಲುಗಳು ಭಸ್ಮವಾಗಿವೆ.ನೆರೆಯ ಆಂಧ್ರಪ್ರದೇಶದಿಂದ ವಲಸೆ ಬಂದು, ಕೃಷಿ ಮಾಡುತ್ತಿದ್ದ ಕುಟುಂಬಗಳೇ ವಾಸವಿರುವ ಮಂಗಯ್ಯನ ಕ್ಯಾಂಪ್‌ನಲ್ಲಿನ ಪರಮಿ ಶ್ರೀನಿವಾಸರಾವ್ ಅವರ ಗುಡಿಸಲಿನಲ್ಲಿ ಮಧ್ಯಾಹ್ನ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿತು. ಕ್ಷಣಾರ್ಧದಲ್ಲೇ ಸಮೀಪದ ಗುಡಿಸಲುಗಳಿಗೂ ಬೆಂಕಿ ವ್ಯಾಪಿಸಿ, ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ ಹತ್ತಿ ಮತ್ತಿತರ ಗೃಹೋಪಯೋಗಿ ವಸ್ತುಗಳು  ಸುಟ್ಟು ಕರಕಲಾಗಿವೆ.ಇಲ್ಲಿನ ನಿವಾಸಿಗಳು ಬೆಳಿಗ್ಗೆ ಕೃಷಿ ಕೆಲಸಕ್ಕೆ ಹೊಲಗಳಿಗೆ ಹೋದ ಸಂದರ್ಭದಲ್ಲಿ ಈ  ಅವಘಡ ಸಂಭವಿಸಿದ್ದು, ಗುಡಿಸಲುಗಳಲ್ಲಿ ಇರಿಸಲಾಗಿದ್ದ ಹತ್ತಿ, ಅಕ್ಕಿ, ಚಿನ್ನಾಭರಣ, ನಗದು, ಪಾತ್ರೆ-ಪಗಡ ಮತ್ತಿತರ ವಸ್ತುಗಳು ಸುಟ್ಟಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು. ಆದರೆ ಅಷ್ಟರಲ್ಲೇ ಅಪಾರ ಪ್ರಮಾಣದ ಸ್ವತ್ತು ಬೆಂಕಿಗೆ ಆಹುತಿಯಾಗಿತ್ತು.ಸೀತಾರಾಮಯ್ಯ, ರಾಮಾಂಜನೇಯ, ವೆಂಕಟಪ್ಪಯ್ಯ, ಭಂಡಾರಿ ಪೂರ್ಣಯ್ಯ, ದುಡ್ಡು ರಾಮರಾವ್, ವಿಶ್ವೇಶ್ವರರಾವ್ ಎಂಬುವವರ ಗುಡಿಸಲುಗಳೂ ಸಂಪೂರ್ಣ ಸುಟ್ಟಿವೆ. ಬರಗಾಲ ಹಾಗೂ ಹತ್ತಿಯ ದರ ಕುಸಿತದ ಪರಿಣಾಮ ನಷ್ಟಕ್ಕೆ ಒಳಗಾಗಿರುವ ರೈತರು, ಬೆಂಕಿ ಅನಾಹುತದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ.ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆಯೇ ಹೊಲಗಳಿಂದ ಧಾವಿಸಿದ ನಿವಾಸಿಗಳ ಆರ್ತನಾದ ಮುಗಿಲುಮುಟ್ಟಿತ್ತು. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry