ಗುರುವಾರ , ನವೆಂಬರ್ 21, 2019
20 °C

ಬೆಂಕಿ ಉಂಡೆಯಲ್ಲಿ ಕರಕಲಾದವರು...

Published:
Updated:
ಬೆಂಕಿ ಉಂಡೆಯಲ್ಲಿ ಕರಕಲಾದವರು...

ಉಪ್ಪಿನಂಗಡಿ: ಹೆದ್ದಾರಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್ ಈ ರೀತಿ 8 ಜೀವಗಳನ್ನು ಕ್ಷಣಮಾತ್ರದಲ್ಲಿ ಕರಕಲಾಗಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ.ಯಮನಂತೆ ಬಂದೆರಗಿದ ಬುಲೆಟ್ ಟ್ಯಾಂಕರ್ ಕ್ಷಣಾರ್ಧದಲ್ಲಿ ಬೆಂಕಿ ಉಂಡೆಯಾಯಿತು. ದುರಂತದಲ್ಲಿ ನೊಂದವರ ಕುಟುಂಬದ ರೋದನ ಹೃದಯ ಕಲಕುವಂತಿತ್ತು.ಮೃತಪಟ್ಟವರ ಪೈಕಿ ವನಿತಾ ಮತ್ತು ಅವರ 5 ವರ್ಷದ ಪುತ್ರ ಚಿತ್ರೇಶ್ ಶವಗಳು ಪರಸ್ಪರ ಅಪ್ಪಿಕೊಂಡ ರೀತಿಯಲ್ಲಿತ್ತು. ಬೆಂಕಿ ಹೊತ್ತಿ ಉರಿಯುತ್ತಲೇ ಇವರಿಬ್ಬರೂ ಪರಸ್ಪರ ರಕ್ಷಣೆ ಕೋರಿ ತಬ್ಬಿಕೊಂಡಿರುವ ಸಾಧ್ಯತೆಯನ್ನು ಮನಮಿಡಿಯುವ ಆ ದೃಶ್ಯ ಸಾರಿ ಹೇಳುವಂತಿತ್ತು. ಟ್ಯಾಂಕರ್ ಚಾಲಕ ಚೆಲುವರಸನ್ ಮೃತ ದೇಹ ಕ್ಯಾಬಿನ್ ಒಳಗಡೆ ಸಂಪೂರ್ಣ ಸುಟ್ಟು ಕರಕಲಾಗಿ ಮಾಂಸದ ಮುದ್ದೆಯಾಗಿ ಎಂಜಿನ್ ನಡುವೆ ಸಿಲುಕಿಕೊಂಡಿತ್ತು.ಮೃತರ ಪೈಕಿ ಗುರುವಪ್ಪ ಟೈಲರಿಂಗ್ ಕೆಲಸ ನಡೆಸುತ್ತಿದ್ದರು. ಇಸ್ಮಾಯಿಲ್ ಅವರ ಅಂಗಡಿಯ ಹೊರಗಡೆ ಮಷಿನ್ ಇಟ್ಟುಕೊಂಡು ಹೊಲಿಗೆ ಕೆಲಸದಲ್ಲಿ ತೊಡಗಿದ್ದರು. ಶೋಭಾ ಅವರು ಮನೆಯೊಳಗೆ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡವರು. ಎಲ್ಲರೂ ಧುತ್ತೆಂದು ವ್ಯಾಪಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿ ಹೋಗಿದ್ದರು.ಬೆಂಕಿಯ ಭೀಕರತೆಗೆ ಮನೆಯ ಮುಂಭಾಗದ ಐದು ತೆಂಗಿನ ಮರಗಳು ಸಂಪೂರ್ಣ ಸುಟ್ಟುಹೋಗಿವೆ. ರಸ್ತೆಯ ಇನ್ನೊಂದು ಮಗ್ಗುಲಲ್ಲಿದ್ದ ಸುಮಾರು 3 ಎಕರೆ  ಅಡಿಕೆ ತೋಟವೂ ಬೆಂಕಿಗಾಹುತಿಯಾಗಿದೆ. ಈ ಪರಿಸರದ ಎರಡು ಅಂಗಡಿಯಲ್ಲಿದ್ದ ಸಾಮಗ್ರಿಗಳು ಸುಟ್ಟು ಭಸ್ಮವಾಗಿದ್ದವು. ಅಲ್ಲಿನ ವಸ್ತು ಅನಿಲಮಿಶ್ರಿತ ನೀರಿನಲ್ಲಿ ತೇಲಿ ಚರಂಡಿ ಸೇರುತ್ತಿದ್ದವು.

ಏರ್‌ಪೋರ್ಟ್‌ಗೆ ಹೋಗಿ ಬದುಕುಳಿದ!

ಮೃತಪಟ್ಟವರ ಬಗ್ಗೆ ಸುದ್ದಿ ಹಬ್ಬುತ್ತಿರುವಂತೆ ಮೃತ ಖತೀಜಮ್ಮ ಅವರ ಪುತ್ರ 13 ವರ್ಷದ ಸಲೀಂ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿತ್ತು. ದಿನ ಪೂರ್ತಿ ಅಂಗಡಿ ಬಳಿ ಇರುತ್ತಿದ್ದ ಸಲೀಂ ಅಪಘಾತ ನಡೆದ ಸಮಯದಿಂದ ನಾಪತ್ತೆಯಾಗಿದ್ದ. ಹೀಗಾಗಿ ಕರಟಿದ ಮೃತ ದೇಹವೊಂದು ಸಲೀಂನದ್ದು ಎಂದು ಶಂಕಿಸಲಾಗಿತ್ತು. ಆದರೆ ಸಂಜೆಯ ಹೊತ್ತಿಗೆ ಸಲೀಂ ಪ್ರತ್ಯಕ್ಷವಾಗಿದ್ದ!ಘಟನೆ ಸಂಭವಿಸುವುದಕ್ಕೆ 10 ನಿಮಿಷ ಮುನ್ನ ಖತೀಜಮ್ಮ ಅವರ ಸಂಬಂಧಿ ಸೌದಿ ಅರೇಬಿಯಾದಿಂದ ಬರುವ ಕಾರಣ ಏರ್‌ಪೋರ್ಟ್‌ಗೆ ಹೋಗುವ ಕಾರು ಏರಿ  ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

 

ಪ್ರತಿಕ್ರಿಯಿಸಿ (+)