ಬೆಂಕಿ ರೋಗ: ರೈತರು ಕಂಗಾಲು

7

ಬೆಂಕಿ ರೋಗ: ರೈತರು ಕಂಗಾಲು

Published:
Updated:
ಬೆಂಕಿ ರೋಗ: ರೈತರು ಕಂಗಾಲು

ಹಾವೇರಿ: ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೆಂಕಿರೋಗ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಅರೆ ಮಲೆನಾಡು ಪ್ರದೇಶವಾದ ಜಿಲ್ಲೆಯ ಹಾನಗಲ್ ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ.  ಈ ವರ್ಷ 39,973 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ 29,816 ಹೆಕ್ಟೆರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು.ಉತ್ತಮ ಮಳೆಯಿಂದಾಗಿ ಈ ಬಾರಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಾನಗಲ್ ತಾಲ್ಲೂಕಿನಲ್ಲಿ 23,780 ಹೆಕ್ಟೇರ್, ಶಿಗ್ಗಾವಿ ತಾಲ್ಲೂಕಿನಲ್ಲಿ 7,323 ಹೆಕ್ಟೇರ್, ಇನ್ನುಳಿದ ಐದು ತಾಲ್ಲೂಕುಗಳಲ್ಲಿ 7,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ  ಬಿತ್ತನೆಯಾಗಿದೆ.ಎರಗಿದ ಬೆಂಕಿರೋಗ: ಭತ್ತದ ಬೆಳೆಗೆ ಕಂಡು ಬರುವ ರೋಗಗಳಲ್ಲಿ ಬೆಂಕಿರೋಗ ಪ್ರಮುಖವಾಗಿದೆ. ಪ್ರಾರಂಭದಲ್ಲಿ ಕಂದು ಬಣ್ಣದ ಚುಕ್ಕಿಯಂತೆ ಕಾಣಿಸಿಕೊಳ್ಳುವ ಈ ರೋಗ, ನಂತರದಲ್ಲಿ ಅವು ದಟ್ಟ ಕಂದು ಬಣ್ಣಕ್ಕೆ ತಿರುಗಿ ದೊಡ್ಡದಾಗುತ್ತವೆ. ಆ ಚುಕ್ಕೆಗಳು ಒಂದಕ್ಕೊಂದು ಸೇರಿ ಮಚ್ಚೆಯಂತಾಗಿ ಎಲೆಯನ್ನು ಒಣಗಿಸಿಬಿಡುತ್ತದೆ. ಆಗ ದೂರದಿಂದ ಭತ್ತದ ಬೆಳೆಯನ್ನು ನೋಡಿದಾಗ ಬೆಳೆಗೆ ಬೆಂಕಿ ಹೊತ್ತಿಕೊಂಡಂತೆ ಕಾಣುತ್ತದೆ.ಈ ಬೆಂಕಿ ರೋಗವು ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಸೇರಿದಂತೆ ಹಲವು ಹಳ್ಳಿಗಳ ಸುಮಾರು 3,000  ಹೆಕ್ಟೇರ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದರೆ, ಶಿಗ್ಗಾವಿ ತಾಲ್ಲೂಕಿನ ಕುಂದೂರು, ಅರಟಾಳ, ದುಂಡಸಿ, ಕುನ್ನೂರು, ಅಂದಲಗಿ ಸೇರಿದಂತೆ ಹಲವು ಗ್ರಾಮಗಳು ಸುಮಾರು 1,600 ಹೆಕ್ಟೇರ್ ಪ್ರದೇಶದಲ್ಲಿ ಕಂಡುಬಂದಿದೆ. ಉಳಿದ ತಾಲ್ಲೂಕುಗಳಲ್ಲಿ ಸಹ ಕೆಲ ಪ್ರದೇಶದಲ್ಲಿ ಕಂಡು ಬಂದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪರಾಜು `ಪ್ರಜಾವಾಣಿ~ಗೆ ತಿಳಿಸಿದರು.ಕೆಲವೊಂದು ಹೊಲಗಳಲ್ಲಿ ಬೆಂಕಿರೋಗದ ಬಾಧೆ ಜೊತೆಗೆ ದುಂಡಾಣು ಎಲೆಮಚ್ಚೆ ರೋಗವು ಕಂಡು ಬಂದಿದ್ದು, ಈ ರೋಗಗಳು ಸಕಾಲದಲ್ಲಿ ನಿಯಂತ್ರಣವಾಗದಿದ್ದರೆ, ತೆನೆ ಹಾಗೂ ಕಾಳು ಕಟ್ಟುವುದರ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಒಟ್ಟು ಇಳುವರಿಯಲ್ಲಿ ಶೇ 40ರಿಂದ 60 ರಷ್ಟು ಕಡಿಮೆಯಾಗಲಿದೆ ಎಂದು ಹನುಮನಮಟ್ಟಿಯ ಭತ್ತದ ವಿಜ್ಞಾನಿ ಅಷ್ಟಪತ್ರಿ ತಿಳಿಸುತ್ತಾರೆ.ರೈತರ ಹರಸಾಹಸ: ಉತ್ತಮ ಮಳೆಯಾಗಿದ್ದಕ್ಕೆ ಭತ್ತ ಬಿತ್ತನೆ ಮಾಡಿದ ರೈತರು, ಉತ್ತಮ ರೀತಿಯಲ್ಲಿ ಬೆಳೆದ ಭತ್ತವನ್ನು ನೋಡಿ ಸಂತಸಪಟ್ಟಿದ್ದರು. ಈಗ ಏಕಾಏಕಿ ಎರಗಿರುವ ಬೆಂಕಿ ರೋಗದಿಂದ ತತ್ತರಿಸಿದ್ದಾರೆ. `ಭತ್ತಕ್ಕೆ ತಗಲಿದ ಈ ರೋಗದ ನಿಯಂತ್ರಣಕ್ಕೆ ಕಳೆದ ಒಂದು ವಾರದಿಂದ ಕೃಷಿ ಇಲಾಖೆ ಜತೆಗೂಡಿ ಹರಸಾಹಸ ಪಡುತ್ತಿದ್ದೇವೆ. ಆದರೂ, ಕೃಷಿ ಇಲಾಖೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಕೆಲವಡೆ ರೋಗ ಉಲ್ಬಣಗೊಂಡರೂ ಈವರೆಗೆ ಭೇಟಿ ನೀಡಿಲ್ಲ ಎಂದು ಶಿಗ್ಗಾವಿ ತಾಲ್ಲೂಕಿನ ಕುನ್ನೂರು ಗ್ರಾಮದ ರೈತ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಭರಮಗೌಡ ಪಾಟೀಲ ಆರೋಪಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry