ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ತಾಯಿ- ಮಗ

7

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ತಾಯಿ- ಮಗ

Published:
Updated:

ಬೆಂಗಳೂರು: ತಾಯಿ ಮತ್ತು ಮಗ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೆ.ಪಿ.ನಗರ ಒಂದನೇ ಹಂತದ ಸಾರಕ್ಕಿಯಲ್ಲಿ ಸೋಮವಾರ ನಡೆದಿದೆ.ಘಟನೆಯಲ್ಲಿ ತೀವ್ರ ಸುಟ್ಟ ಗಾಯಗಳಾಗಿ ಅಸ್ವಸ್ಥಗೊಂಡಿರುವ ವರಲಕ್ಷ್ಮೀ (40) ಮತ್ತು ಅವರ ಮಗ ಜಯಂತ್‌ನನ್ನು (12) ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರಲಕ್ಷ್ಮೀ ಅವರ ಪತಿ ಚಂದ್ರಶೇಖರ್ ನಗರದ ಕೆ.ಆರ್.ರಸ್ತೆಯಲ್ಲಿ ಸೀಮೇಎಣ್ಣೆ ಸಗಟು ವ್ಯಾಪಾರ ನಡೆಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಾರಕ್ಕಿಯಲ್ಲಿ ವಾಸವಿರುವ ಅವರಿಗೆ ಪಿಯುಸಿ ಓದುತ್ತಿರುವ ವಿದ್ಯಾ ಎಂಬ ಮಗಳಿದ್ದಾಳೆ. ಜಯಂತ್ ಸಾರಕ್ಕಿಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ.

ವರಲಕ್ಷ್ಮೀ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಜಯಂತ್ ಸೋಮವಾರ ಶಾಲೆಗೆ ಹೋಗುವುದು ಬೇಡ ಎಂದು ಆಕೆ ಹೇಳಿದ್ದರು. ಆದರೆ, ಶಾಲೆಗೆ ಹೋಗಿದ್ದ ಜಯಂತ್ ಬೇಗ ಮನೆಗೆ ಹಿಂದಿರುಗಿದ್ದ. ಮನೆಗೆ ಬಂದ ನಂತರ ಅವರಿಬ್ಬರೂ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದರು.

`ಚಂದ್ರಶೇಖರ್ ಸೋಮವಾರ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದರು. ಅವರ ಮಗಳು ವಿದ್ಯಾ ಕಾಲೇಜಿಗೆ ಹೋಗಿದ್ದಳು. ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಇವರಿಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯೊಳಗಿನಿಂದ ದೊಡ್ಡದಾಗಿ ಚೀರಾಟ ಕೇಳಿ ಬಂತು. ಮನೆ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿಕೊಂಡಿದ್ದರು. ಬಾಗಿಲು ಒಡೆದು ಒಳ ಹೋದಾಗ ಇಬ್ಬರಿಗೂ ಬೆಂಕಿ ಹೊತ್ತಿಕೊಂಡಿತ್ತು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು' ಎಂದು ಪಕ್ಕದ ಮನೆಯ ಮನೋಜ್ ಮಾಹಿತಿ ನೀಡಿದರು.

`ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಆಕೆಗೆ ಚಿಕಿತ್ಸೆಯನ್ನೂ ಕೊಡಿಸಲಾಗುತ್ತಿತ್ತು. ಆದರೆ, ಇನ್ನೂ ಆಕೆ ಸಂಪೂರ್ಣವಾಗಿ ಗುಣವಾಗಿರಲಿಲ್ಲ. ಯಾವ ಕಾರಣದಿಂದ ಆಕೆ ಆತ್ಮಹತ್ಯೆಗೆ ಯತ್ನಿಸಿದರು ಎಂಬುದು ಗೊತ್ತಾಗಿಲ್ಲ' ಎಂದು ವರಲಕ್ಷ್ಮೀ ಅವರ ಸೋದರ ರುದ್ರೇಶ್ ತಿಳಿಸಿದರು.

ಆತ್ಮಹತ್ಯೆ ಯತ್ನದ ಬಗ್ಗೆ ತಾಯಿ ಮತ್ತು ಮಗ ಸರಿಯಾದ ಕಾರಣ ನೀಡುತ್ತಿಲ್ಲ. ಒಮ್ಮೆ ಪತಿಯ ಹಿಂಸೆ ತಡೆಯಲಾರದೇ ಆತ್ಮಹತ್ಯೆಗೆ ಮುಂದಾಗಿದ್ದಾಗಿ ಹೇಳಿಕೆ ನೀಡಿದರೆ, ಮತ್ತೊಮ್ಮೆ ಆತ್ಮಹತ್ಯೆಗೆ ನಾವು ಯತ್ನಿಸಿಯೇ ಇರಲಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ.

ತಾಯಿ ಆತ್ಮಹತ್ಯೆಗೆ ಮುಂದಾದ ಕಾರಣ ನಾನೂ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಜಯಂತ್ ಹೇಳಿಕೆ ನೀಡಿದ್ದಾನೆ. ಇಬ್ಬರಿಗೂ ಶೇ 70ರಷ್ಟು ಸುಟ್ಟಗಾಯಗಳಾಗಿವೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.ಜೆ.ಪಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry