ಬೆಂಕಿ ಹಚ್ಚಿ ಪತ್ನಿಯ ಕೊಲೆ

7

ಬೆಂಕಿ ಹಚ್ಚಿ ಪತ್ನಿಯ ಕೊಲೆ

Published:
Updated:

ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಚಾಮರಾಜಪೇಟೆಯ ವಾಲ್ಮೀಕಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.



ವಾಲ್ಮೀಕಿನಗರ ಅಶ್ವತ್ಥಕಟ್ಟೆ ರಸ್ತೆ ನಿವಾಸಿ ವಿನೋದ್ ಎಂಬಾತ ಪತ್ನಿ ನಂದಿನಿ (23) ಅವರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ನಂದಿನಿ, ಆತನನ್ನು ಪ್ರೀತಿಸಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ವಿನೋದ್ ಚಪ್ಪಲಿ ವ್ಯಾಪಾರ ಮಾಡುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.



ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಅಂತೆಯೇ ರಾತ್ರಿಯೂ ಅವರ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡ ವಿನೋದ್ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಆತನಿಗೂ ಬೆಂಕಿಯ ಜ್ವಾಲೆ ತಗುಲಿ ಸುಟ್ಟ ಗಾಯಗಳಾಗಿವೆ. ತೀವ್ರ ಸುಟ್ಟ ಗಾಯಗಳಾಗಿ ಅಸ್ವಸ್ಥಗೊಂಡ ನಂದಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.



`ಮದ್ಯವ್ಯಸನಿಯಾದ ವಿನೋದ್ ಮಗಳಿಗೆ ಕಿರುಕುಳ ನೀಡುತ್ತಿದ್ದ. ಆತನೇ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ~ ಎಂದು ನಂದಿನಿ ತಂದೆ ಕೃಷ್ಣಪ್ಪ ದೂರು ಕೊಟ್ಟಿದ್ದಾರೆ.



ಗಾಯಾಳು ವಿನೋದ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ ಗುಣಮುಖನಾದ ನಂತರ ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಬಸ್ ಡಿಕ್ಕಿ: ವ್ಯಕ್ತಿ ಸಾವು

ಖಾಸಗಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸೂರು ರಸ್ತೆಯ ರೂಪೇನಅಗ್ರಹಾರ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ನಡೆದಿದೆ.



ಗದಗ ಜಿಲ್ಲೆಯ ಸೀಮಣ್ಣ (32) ಮೃತಪಟ್ಟವರು. ಕೃಷಿಕರಾದ ರೂಪೇನ ಅಗ್ರಹಾರದಲ್ಲಿ ನೆಲೆಸಿರುವ ಸಂಬಂಧಿಕ ಭೀಮಪ್ಪ ಮನೆಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.



ಮೆಜೆಸ್ಟಿಕ್‌ಗೆ ಹೋಗಿದ್ದ ಭೀಮಪ್ಪ ಮತ್ತು ಸೀಮಣ್ಣ ಅವರು ಬಿಎಂಟಿಸಿ ಬಸ್‌ನಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ರೂಪೇನ ಅಗ್ರಹಾರಕ್ಕೆ ಬಂದರು. ಬಸ್‌ನಿಂದ ಕೆಳಗಿಳಿದ ಅವರು ರಸ್ತೆ ದಾಟುತ್ತಿದ್ದಾಗ ಅದೇ ಮಾರ್ಗವಾಗಿ ಬಂದ ಖಾಸಗಿ ಬಸ್ ಸೀಮಣ್ಣ ಅವರಿಗೆ ಡಿಕ್ಕಿ ಹೊಡೆಯಿತು.



ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಬಸ್ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿವಾಳ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.



ಕೊಲೆ ಆರೋಪಿಗಳ ಬಂಧನ

ಯಡಿಯೂರು ಸಮೀಪದ ಎ.ಕೆ.ಕಾಲೊನಿ ನಿವಾಸಿ ನಾರಾಯಣಸ್ವಾಮಿ (23) ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ತ್ಯಾಗರಾಜನಗರ ಪೊಲೀಸರು ಆಟೊ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.



ಎ.ಕೆ.ಕಾಲೊನಿಯ ವೇಣುಗೋಪಾಲ್ ಅಲಿಯಾಸ್ ವೇಣು (30), ತ್ಯಾಗರಾಜನಗರದ ಪ್ರತಾಪ್ (19) ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೋಡನಹಳ್ಳಿಯ ಹರೀಶ ಉರುಫ್ ಹರಿಕೃಷ್ಣ (24) ಬಂಧಿತರು.

ಪ್ರಕರಣದ ಪ್ರಮುಖ ಆರೋಪಿಯಾದ ವೇಣುಗೋಪಾಲ್, ನಾರಾಯಣಸ್ವಾಮಿ ಅವರ ಮನೆಯ ಸಮೀಪವೇ ವಾಸವಿದ್ದ. ನಾರಾಯಣಸ್ವಾಮಿ, ಆತನ ಪತ್ನಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದರು.



ಈ ವಿಷಯ ತಿಳಿದು ಕೋಪಗೊಂಡಿದ್ದ ಆತ ಇತರೆ ಆರೋಪಿಗಳ ಜತೆ ಸೇರಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ. ಆರೋಪಿಗಳು ಪೂರ್ವಯೋಜಿತ ಸಂಚಿನಂತೆ ಅವರನ್ನು ಫೆ.3ರಂದು ಪ್ರತಾಪ್‌ನ ರೂಂಗೆ ಕರೆದೊಯ್ದು ಚೆನ್ನಾಗಿ ಮದ್ಯ ಕುಡಿಸಿದರು. ನಂತರ ಚಾಕುವಿನಿಂದ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.



ಕೊಲೆ ಮಾಡಿದ ನಂತರ ಶವವನ್ನು 1 ದಿನ ಪ್ರತಾಪ್‌ನ ರೂಂನಲ್ಲೇ ಬಿಟ್ಟಿದ್ದರು. ಬಳಿಕ ಫೆ.4ರಂದು ಶವವನ್ನು ಚೀಲವೊಂದರಲ್ಲಿ ತುಂಬಿ ಆಟೊದಲ್ಲಿ ಸಾಗಿಸಿ ತ್ಯಾಗರಾಜನಗರದ ಬೈರಪ್ಪ ಬ್ಲಾಕ್‌ನ ಎರಡನೇ ಮುಖ್ಯರಸ್ತೆಯ ಕಟ್ಟಡವೊಂದರ ಬಳಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.



ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, ಜಯನಗರ ಉಪ ವಿಭಾಗದ ಎಸಿಪಿ ಜಿ.ಬಿ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಜಿ.ಮಹಾದೇವ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry