ಬೆಂಕಿ ಹಚ್ಚಿ ಮಗು ಕೊಂದ ಅಪ್ಪ

7

ಬೆಂಕಿ ಹಚ್ಚಿ ಮಗು ಕೊಂದ ಅಪ್ಪ

Published:
Updated:
ಬೆಂಕಿ ಹಚ್ಚಿ ಮಗು ಕೊಂದ ಅಪ್ಪ

ಬೆಂಗಳೂರು: ಗಂಡನೇ ತನ್ನ ಹೆಂಡತಿ ಹಾಗೂ ಒಂದೂವರೆ ವರ್ಷದ ಮಗುವನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ಕೆ.ಆರ್.ಪುರ ಪೋಲೀಸ್ ಠಾಣೆ ವ್ಯಾಪ್ತಿಯ ಟಿ.ಸಿ.ಪಾಳ್ಯದಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ಚಂದನ ಎಂಬ ಒಂದೂವರೆ ವರ್ಷದ ಹೆಣ್ಣು ಮಗು ತೀವ್ರ ಸುಟ್ಟಗಾಯಗಳಿಂದಾಗಿ ಮೃತ ಪಟ್ಟಿದೆ.ಕೆ.ಆರ್.ಪುರದ ಆನಂದಪುರ ಬಳಿಯ ಟಿ.ಸಿ.ಪಾಳ್ಯದ ನಿವಾಸಿ ಆಶಾ (25) ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ಆರೋಪಿ ವೇಣುಗೋಪಾಲ್ (34) ಹಾಗೂ ಆತನ ಮನೆಯವರು ತಲೆ ಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಘಟನೆ ಹಿನ್ನೆಲೆ :
ನಗರದ ಟಿ.ಸಿ.ಪಾಳ್ಯದ ಗುತ್ತಿಗೆದಾರ ವೇಣುಗೋಪಾಲ್ ಜೊತೆ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ನಿವಾಸಿ ಆಶಾ ಅವರ ವಿವಾಹ ಮೂರು ವರ್ಷಗಳ ಹಿಂದೆ ನಡೆದಿತ್ತು. `ವೇಣುಗೋಪಾಲ್ ಮತ್ತೊಬ್ಬ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದನ್ನು ವಿರೋಧಿಸುತ್ತಿದ್ದ ಆಶಾ ಅವರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಆಶಾ ಸಂಬಂಧಿಕರು ದೂರಿನಲ್ಲಿ ತಿಳಿಸಿದ್ದಾರೆ~ ಎಂದು ಪೊಲೀಸರು ತಿಳಿಸಿದರು.`ಆಶಾ ಗಂಡನೊಂದಿಗೆ ಕೆಲದಿನಗಳ ಹಿಂದೆ ಜಗಳವಾಡಿಕೊಂಡು ಬ್ಯಾಡರಹಳ್ಳಿಯ ತನ್ನ ತವರು ಮನೆಯಲ್ಲಿದ್ದರು. ಆಶಾ ಅವರನ್ನು ಇಂದು ಬೆಳಿಗ್ಗೆ ಮನೆಗೆ ಬಂದು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ ವೇಣುಗೋಪಾಲ್ ಆಕೆಯನ್ನು ಟಿ.ಸಿ.ಪಾಳ್ಯದ ತನ್ನ ಮನೆಗೆ ಕರೆದೊಯ್ದಿದ್ದಾನೆ.ಆಶಾ ಜೊತೆಗೆ ಮಗುವಿಗೂ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲುವ ಪ್ರಯತ್ನ ಮಾಡಿದ್ದಾನೆ. ಘಟನೆಯಲ್ಲಿ ಮಗು ಸತ್ತು, ಆಶಾ ಸ್ಥಿತಿ ಗಂಭೀರವಾಗಿದೆ~ ಎಂದು ಪೊಲೀಸರು ಹೇಳಿದರು. `ಆಶಾ ಅವರ ದೇಹದ ಶೇಕಡಾ 80 ರಷ್ಟು ಭಾಗ ಬೆಂಕಿಯಿಂದ ಬೆಂದು ಹೋಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ~ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಎರಡನೇ ಮದುವೆ : ಆಶಾ ಜೊತೆಗೆ ವಿವಾಹಕ್ಕೂ ಮುನ್ನ ವೇಣುಗೋಪಾಲ್ ಆಶಾ ಅವರ ಅಕ್ಕ ಅಶ್ವಿನಿ ಎಂಬುವರನ್ನು ಎಂಟು ವರ್ಷಗಳ ಹಿಂದೆಯೇ ಮದುವೆಯಾಗಿದ್ದ. ಐದು ವರ್ಷಗಳ ಹಿಂದೆ ಅಶ್ವಿನಿ ಅವರ ಸಾವಿನ ನಂತರ ಆಶಾಳ ಮನೆಯವರನ್ನು ಒಪ್ಪಿಸಿ ಅವರನ್ನು ಮದುವೆಯಾಗಿದ್ದ ಎಂದು ಸಂಬಂಧಿಕರು ತಿಳಿಸಿದರು.`ಐದು ವರ್ಷಗಳ ಹಿಂದೆ ವೇಣುಗೋಪಾಲ್ ಮನೆಯವರು ಅಶ್ವಿನಿ ಅವರನ್ನು ಕೊಲೆ ಮಾಡಿ ಆತ್ಮಹತ್ಯೆಯ ನಾಟಕವಾಡಿದ್ದರು. ಮೂರು ವರ್ಷಗಳ ಹಿಂದೆ ಆಶಾಳನ್ನು ಮದುವೆ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದ. ಅಶ್ವಿನಿಗೆ ಎರಡು ಮಕ್ಕಳಿದ್ದು ಬೇರೆಯವರನ್ನು ಮದುವೆಯಾದರೆ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಕಣ್ಣೀರು ಹಾಕಿದ್ದ.ಅವನು ಬದಲಾಗಿದ್ದಾನೆ ಎಂಬ ನಂಬಿಕೆಯಿಂದ ಆಶಾಳನ್ನು ವೇಣುಗೋಪಾಲ್‌ಗೆ ಮದುವೆ ಮಾಡಿಕೊಟ್ಟಿದ್ದೆವು. ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದ್ದ ಆತ ಈಗ ಸ್ವಂತ ಮಗು ಹಾಗೂ ಹೆಂಡತಿಯ ಪ್ರಾಣಕ್ಕೇ ಮುಳುವಾಗಿದ್ದಾನೆ~ ಎಂದು ಆಶಾ ಅವರ ಸಹೋದರ ಅರುಣ್ `ಪ್ರಜಾವಾಣಿ~ಗೆ ತಿಳಿಸಿದರು.ಕಂದಮ್ಮನನ್ನೇ ಕೊಂದ : `ತನ್ನ ಹೆಂಡತಿ ಮತ್ತು ಮಗುವನ್ನೇ ಕೊಲ್ಲಲು ಯತ್ನಿಸಿದ ವೇಣುಗೋಪಾಲ್‌ನನ್ನು ಕೂಡಲೇ ಬಂಧಿಸಬೇಕು. ತನ್ನ ಮಗುವನ್ನೇ ಕೊಂದ ಪಾಪಿ ತಂದೆಗೆ ಕಠಿಣ ಶಿಕ್ಷೆಯಾಗಬೇಕು. ಘಟನೆಯಲ್ಲಿ ಭಾಗಿಗಳಾಗಿರುವ ಆತನ ಮನೆಯವರೆಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು~ ಎಂದು ಆಶಾ ತಾಯಿ ಮಂಜುಳಾ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry