ಬೆಂಗಳೂರಷ್ಟೇ ಕರ್ನಾಟಕವಲ್ಲ, ಕಾವೇರಿಯೊಂದೇ ನದಿಯಲ್ಲ!

7

ಬೆಂಗಳೂರಷ್ಟೇ ಕರ್ನಾಟಕವಲ್ಲ, ಕಾವೇರಿಯೊಂದೇ ನದಿಯಲ್ಲ!

Published:
Updated:

ಕುಷ್ಟಗಿ: ಕಾವೇರಿ ನದಿ ನೀರಿನ ವಿಷಯದಲ್ಲಿ `ಕರ್ನಾಟಕ ಬಂದ್~ ಕರೆ ನೀಡಲಾಗಿರುವುದಕ್ಕೆ ಇಲ್ಲಿ ಅಪಸ್ವರ ಕೇಳಿಬಂದಿದ್ದು, ಉತ್ತರ ಕರ್ನಾಟಕ, ಹೈ.ಕ ಭಾಗದ ನೆಲ, ಜಲ ವಿಚಾರದ ಯಾವುದೇ ಸಮಸ್ಯೆಗಳಿಗೆ  ಚಕಾರ್ ಎತ್ತದ ಹಳೆ ಮೈಸೂರು ಭಾಗದವರ ಹೋರಾಟಕ್ಕೆ ಇಲ್ಲಿಯ ಜನರೇಕೆ ಬೆಂಬಲ ನೀಡಬೇಕು? ಎಂದು ಪ್ರಶ್ನಿಸಲಾಗಿದೆ.ವಿದ್ಯುನ್ಮಾನ ಮಾಧ್ಯಮಗಳಿಗೆ, ಚಿತ್ರೋದ್ಯಮದವರು, ಬೆಂಗಳೂರು, ಮೈಸೂರು ಮೂಲದ ಸಾಹಿತಿಗಳು, ಸಾರ್ವಜನಿಕರಿಗೆ ಕೇವಲ ಕಾವೇರಿಯೊಂದೆ ನದಿಯಾಗಿದೆ, ಹಳೆ ಮೈಸೂರು ಭಾಗದ ಸಮಸ್ಯೆಗಳೇ ಇಡಿ ಕರ್ನಾಟಕಕ್ಕೆ ಸೇರಿವೆ ಎಂಬ ಭ್ರಮೆ ಇದ್ದು ಬೀದಿಗಿಳಿಯುತ್ತಾರೆ, ಇಡಿ ಕರ್ನಾಟ ಬಂದ್‌ಗೆ ಕರೆ ಕೊಡುತ್ತಾರೆ.ಆದರೆ ಈ ಭಾಗದ ಜನ ಬೆಳೆಗೆ ಹೋಗಲಿ ಕುಡಿಯುವ ನೀರಿಗೂ ಆಂಧ್ರ, ಗೋವಾ, ಮಹಾರಾಷ್ಟ್ರ ರಾಜ್ಯಗಳು ತಗಾದೆ ಎತ್ತುತ್ತ ಬಂದಿವೆ, ಹೈ.ಕ ಪ್ರದೇಶದಲ್ಲಿ ಜಟಿಲ ಸಮಸ್ಯೆಗಳಿದ್ದರೂ ಇವರ‌್ಯಾರೂ ಅದಕ್ಕೆ ದನಿ ಎತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.ರಾಜ್ಯದಲ್ಲೇ ಅತಿ ಹೆಚ್ಚು ಮುಳುಗಡೆ ಪ್ರದೇಶ ಹೊಂದಿರುವ ಮತ್ತು ತೀರಾ ಕಡಿಮೆ ಪ್ರಮಾಣದ ನೀರಾವರಿ ಹೊಂದಿರುವ ಆಲಮಟ್ಟಿ ಜಲಾಶಯದ ಗೋಡೆಯನ್ನು 519 ಮೀಟರ್‌ಗೆ ಎತ್ತರಿಸುವ ವಿಚಾರದಲ್ಲಿ ಅಡ್ಡಗಾಗಲಾಗಿರುವ ಆಂಧ್ರಪ್ರದೇಶ ರಾಯಚೂರು ಬಳಿಯ ರಾಜೊಳ್ಳಿಬಂಡಾ ತಿರುವು ಯೋಜನೆಗೂ ಅಡ್ಡಿಪಡಿಸುತ್ತ    ಬಂದಿದೆ.ಕುಡಿಯುವ ನೀರು ಪೂರೈಕೆ ಸಲುವಾಗಿರುವ ಕಳಸಾ ಬಂಡೋರ (ಮಹದಾಯಿ) ಯೋಜನೆಗೆ ಗೋವಾ ಅಪಸ್ವರ ತೆಗೆದಿದೆ. ಆದರೆ ಈ ಯಾವ ವಿಷಯಗಳೂ ಹಳೆ ಮೈಸೂರು ಪ್ರಾಂತ್ಯ ಈ ವಿಷಯದಲ್ಲಿ ಈ ಭಾಗದಲ್ಲಿ ಚಳುವಳಿ ನಡೆದರೂ ಅಲ್ಲಿಯ ಜನರಿಗೆ ಇವು ಪ್ರಮುಖ ಸಮಸ್ಯೆಗಳಾಗಿ ಕಾಣಲಿಲ್ಲವೆ? ಎಂದು ಅಖಿಲ ಭಾರತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಕೇಂದ್ರ ಸಮಿತಿ ಸದಸ್ಯ ಎಂ.ದೇವಪ್ಪ ಮತ್ತಿತತರು ಪ್ರಶ್ನಿಸಿದರು.ಹಿಂದುಳಿದಿರುವ ಹೈ.ಕ ಪ್ರದೇಶಕ್ಕೆ ಸಂವಿಧಾನದ 371ನೇ (ಜೆ) ಕಲಂಗೆ ತಿದ್ದುಪಡಿ ತರುವ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಯ ಜನ ಮೂರು ದಶಕಗಳಿಂದ ಹೋರಾಡುತ್ತ ಬಂದರೂ ಅಲ್ಲಿಯ ಯಾವುದೇ ಚುನಾಯಿತ ಪ್ರತಿನಿಧಿಗಳು, ಪ್ರಮುಖ ನಾಯಕರು ನೈತಿಕ ಬೆಂಬಲ ವ್ಯಕ್ತಪಡಿಸಲಿಲ್ಲ. ಕನಿಷ್ಟ ಇಲ್ಲಿಯ ಜನಸಮುದಾಯದ ಪರವಾಗಿ ಒಂದು ಹೇಳಿಕೆಯನ್ನೂ ನೀಡಲಿಲ್ಲ.ಕಾವೇರಿ ಈ ನಾಡಿನ ನದಿಯಾಗಿದೆ, ಹಾಗಾಗಿ ಅಲ್ಲಿಯ ಜನರ ಹೋರಾಟಕ್ಕೆ ಮಾನಸಿಕ ಬೆಂಬಲ ನೀಡುತ್ತೇವೆ ಹೊರತು ಬಂದ್‌ಗೆ ಬೆಂಬಲವಿಲ್ಲ ಎಂದು ಹೈ.ಕ ಹೋರಾಟ ಸಮಿತಿ ಪ್ರಮುಖರಾದ ಡಾ.ಶಾಹಮೀದ ದೋಟಿಹಾಳ ಹೇಳಿದರು.ಒಟ್ಟಿನಲ್ಲಿ ಹಳೆಮೈಸೂರು ಪ್ರಾಂತ್ಯದವರಿಗೆ ಕನ್ನಡ ನಾಡಿಗೆ ಕೇವಲ ಕಾವೇರಿಯಷ್ಟೇ ಮಾತೆಯಾಗುತ್ತಾಳೆ, ಕೃಷ್ಣೆ, ತುಂಗೆ ಲೆಕ್ಕಕ್ಕಿಲ್ಲ, ಬೆಂಗಳೂರು ಅಷ್ಟೇ ಕರ್ನಾಟಕ ಎಂಬ ಭಾವನೆ ಬಲವಾಗಿದೆ. ಈ ಭಾಗ ಅಭಿವೃದ್ಧಿ ಹೊಂದುವುದೇ ಅವರಿಗೆ ಬೇಕಾಗಿಲ್ಲ. ಆದರೆ ಅಲ್ಲಿ ಸಣ್ಣ ಸಮಸ್ಯೆಯಾದರೂ ಈ ಪ್ರದೇಶಗಳ ಜನ ಮಾತ್ರ ಬೀದಿಗಿಳಿದು ಹೋರಾಡಬೇಕು ಎಂಬುದು ವಿಪರ್ಯಾಸ ಎಂದು ರೈತ ಮುಖಂಡ ಬಸವರಾಜ ಅತೃಪ್ತಿ                  ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry