ಬೆಂಗಳೂರಿಗರ ಮೌನ ಸರಿಯಲ್ಲ

7

ಬೆಂಗಳೂರಿಗರ ಮೌನ ಸರಿಯಲ್ಲ

Published:
Updated:

ಬೆಂಗಳೂರು: ಕಾವೇರಿ ನೀರು ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು. ರೈತರು, ಚಿತ್ರರಂಗದ ಕಲಾವಿದರು, ಮಠಾಧೀಶರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು.ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಚಲನಚಿತ್ರ ನಟ ಅಂಬರೀಷ್ ಮತ್ತು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ರ‌್ಯಾಲಿಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಅಂಬರೀಷ್, `ಈ ಹೋರಾಟ ರಾಜಕೀಯ ಪ್ರೇರಿತವಾದುದಲ್ಲ. ಕಾವೇರಿ ನೀರು ನಮ್ಮ ಜನ್ಮ ಸಿದ್ಧ ಹಕ್ಕು. ಕಾವೇರಿ ನೀರಿಗಾಗಿ ಹೋರಾಟ ಮಾಡುವುದು ನಾಡಿನ ಜನರ ಕರ್ತವ್ಯ. ಮಂಡ್ಯ, ಮೈಸೂರಿನಲ್ಲಿ ರೈತರು 22 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಬೆಂಗಳೂರಿನ ನಿವಾಸಿಗಳು ಮಾತ್ರ ನಮಗೂ- ಕಾವೇರಿ ವಿವಾದಕ್ಕೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.`ಬೆಳೆಯುತ್ತಿರುವ ನಗರಕ್ಕೆ ನೀರಿನ ಅಗತ್ಯ ತುಂಬಾ ಇದೆ. ಹೀಗಾಗಿ ಎಲ್ಲರೂ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಬಂದೊದಗಿದೆ~ ಎಂದು ಹೋರಾಟಕ್ಕೆ ಕರೆ ನೀಡಿದರು.`ರಾಜ್ಯದಿಂದ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ ಕಾವೇರಿ ನದಿ ನೀರು ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು, ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡವನ್ನು ಈಗ ಕಳುಹಿಸಿದ್ದಾರೆ. ಈ ಕೆಲಸವನ್ನು ಆದೇಶ ಹೊರಡಿಸುವ ಮೊದಲೇ ಮಾಡಬಹುದಿತ್ತು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಪ್ರತಿ ಬಾರಿಯೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ನಾವು ಶಾಂತಿಯುತವಾಗಿಯೇ ಹೋರಾಟ ನಡೆಸೋಣ. ಜನ ಭಾವೋದ್ವೇಗಕ್ಕೆ ಒಳಗಾಗುವುದು ಬೇಡ~ ಎಂದು ಮನವಿ ಮಾಡಿದರು.ನಂತರ ಮಾತನಾಡಿದ ಬಾಲಗಂಗಾಧರನಾಥ ಸ್ವಾಮೀಜಿ, `ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು, ಹನಿ ಹನಿ ನೀರನ್ನೂ ಸಂರಕ್ಷಿಸುವ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಅಲ್ಪ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡಲು ಕೇಂದ್ರ ಸರ್ಕಾರ ಆದೇಶಿಸಿರುವುದು ಸರಿಯಲ್ಲ. ಜಾತಿ, ಭಾಷೆ, ಧರ್ಮ, ಪಕ್ಷ ಹೀಗೆ ಯಾವುದೇ ಚೌಕಟ್ಟುಗಳಿಲ್ಲದೇ ನಮ್ಮ ಹಕ್ಕಿಗಾಗಿ ಸ್ವಾರ್ಥವಿಲ್ಲದ ಹೋರಾಟ ಮಾಡಬೇಕು. ಆಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ~ ಎಂದರು.

ಪ್ರಮುಖ ರಸ್ತೆಗಳಲ್ಲಿ ರ‌್ಯಾಲಿ

ರ‌್ಯಾಲಿಗೆ ಚಾಲನೆ ದೊರೆತ ನಂತರ ಪ್ರತಿಭಟನಾಕಾರರು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ನ್ಯಾಷನಲ್ ಕಾಲೇಜು ಮೈದಾನದಿಂದ ಸಜ್ಜನ್‌ರಾವ್ ವೃತ್ತ, ಪುರಭವನ, ಮೈಸೂರು ಬ್ಯಾಂಕ್ ವೃತ್ತ, ಸೆಂಟ್ರಲ್ ಕಾಲೇಜು ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನ ತಲುಪಿದರು. ರ‌್ಯಾಲಿ ವೇಳೆ `ಪ್ರಾಣ ಬಿಟ್ಟೇವು, ಒಂದು ಹನಿ ನೀರು ಬಿಡೆವು~, `ಕಾವೇರಿ ನಮ್ಮ ಜನ್ಮಸಿದ್ಧ ಹಕ್ಕು~, `ಯಾರಿಗಾಗಿ ಹೋರಾಟ, ನೀರಿಗಾಗಿ ಹೋರಾಟ~ ಎಂಬ ಘೋಷಣೆಗಳು ಮೊಳಗಿದವು. ಅಲ್ಲದೇ, ಪ್ರತಿಭಟನಾಕಾರರು ಪ್ರಧಾನಮಂತ್ರಿ ಮನಮೋಹನ ಸಿಂಗ್, ತಮಿಳುನಾಡು ಮಖ್ಯಮಂತ್ರಿ ಜಯಲಲಿತಾ, ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕೆಲವು ಅಂಗಡಿಗಳ ಮಾಲೀಕರು ಮುಂಜಾಗ್ರತಾ ಕ್ರಮವಾಗಿ ಮೊದಲೇ ಅಂಗಡಿ ಬಾಗಿಲುಗಳನ್ನು ಮುಚ್ಚಿದ್ದರು. ಕೆಲವೆಡೆ ಪ್ರತಿಭಟನಾಕಾರರೇ ಅಂಗಡಿಗಳನ್ನು ಮುಚ್ಚಿಸುತ್ತಿದ್ದ ದೃಶ್ಯ ಕಂಡು ಬಂತು.ಕಲ್ಲು ತೂರಾಟ: ಕಾವೇರಿ ವಿವಾದ ಸಂಬಂಧ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಹಲವೆಡೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಮೂರು ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಿದರು. ಅಲ್ಲದೇ, ಕೆಲ ಉದ್ರಿಕ್ತರು ಆನಂದರಾವ್ ವೃತ್ತದ ಬಳಿ ಇರುವ ಹೋಟೆಲ್, ಬಾರ್ ಮತ್ತು ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಕೂಡಲೇ ಮಾಲೀಕರು ಅಂಗಡಿ ಬಾಗಿಲುಗಳನ್ನು ಮುಚ್ಚಿದರು.ಆನಂದರಾವ್ ವೃತ್ತ, ಕಂಠೀರವ ಸ್ಟುಡಿಯೊ, ಮೂಡಲಪಾಳ್ಯ, ಗೋಪಾಲನ್ ಮಾಲ್, ರಾಜಾಜಿನಗರ, ರಾಮಕೃಷ್ಣ ಆಶ್ರಮ, ಸುಮನಹಳ್ಳಿ, ನಂದಿನಿ ಲೇಔಟ್, ಹೆಬ್ಬಾಳ ಸೇರಿದಂತೆ ಹಲವೆಡೆ ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆಗಳೂ ನಡೆದವು.ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು, ಹಿರಿಯ ನಟ ಶಿವರಾಂ, ನಟ ಪ್ರೇಮ್, ನಟಿ ಪ್ರಿಯಾ ಹಾಸನ್, ಗಾಯಕಿ ಶಮಿತಾ ಮಲ್ನಾಡ್, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಆರ್.ಕೆ.ನಲ್ಲೂರು ಪ್ರಸಾದ್, ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿ.ಎನ್.ವಿ.ಸುಬ್ರಹ್ಮಣ್ಯ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವರು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.ಗೋಸಾಯಿ ಮಠದ ಸುರೇಶ್ವರಾನಂದ ಭಾರತಿ ಸ್ವಾಮೀಜಿ, ಸ್ಫಟಿಕ ಕ್ಷೇತ್ರದ ನಂಜಾವಧೂತ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಸಂಜೆ ವೇಳೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ವಿಜಯ್‌ಕುಮಾರ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಆರ್.ರಮೇಶ್ ಹೋರಾಟದಲ್ಲಿ ಭಾಗಿಯಾದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತನಾಡಿದ ನಂಜಾವಧೂತ ಸ್ವಾಮೀಜಿ, `ಕಾವೇರಿ ಕಣಿವೆ ಪ್ರದೇಶದ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಮಂಡ್ಯ, ಮದ್ದೂರು, ಮಳವಳ್ಳಿ ಭಾಗದಲ್ಲಿ ಬೆಳೆಗಳು ಒಣಗಿವೆ. ಇದಕ್ಕೆ ಸರ್ಕಾರದ ಅವೈಜ್ಞಾನಿಕ ನೀತಿಗಳೇ ಕಾರಣ. ಆದ್ದರಿಂದ ಬೆಳೆ ಹಾನಿಯಿಂದ ರೈತರಿಗಾಗಿರುವ ನಷ್ಟವನ್ನು ಸರ್ಕಾರವೇ ತುಂಬಿಕೊಡಬೇಕು~ ಎಂದು ಆಗ್ರಹಿಸಿದರು.`ಕಾವೇರಿ ಕಣಿವೆ ಪ್ರದೇಶದ ರೈತರು ಮಾತ್ರ ಕಾವೇರಿ ನೀರಿಗಾಗಿ ಹೋರಾಟಕ್ಕಿಳಿದಿದ್ದಾರೆ.ಬೆಂಗಳೂರಿನ ಜನ ಇದಕ್ಕೆ ಸ್ಪಂದಿಸುತ್ತಿಲ್ಲ. ನಗರದ ನಿವಾಸಿಗಳಲ್ಲಿ ಕನಿಷ್ಠ ಶೇ 25ರಷ್ಟು ಜನ ಬೀದಿಗಿಳಿದು ಹೋರಾಟ ಮಾಡಿದರೆ ಸಾಕು, ಕೇಂದ್ರ ಸರ್ಕಾರ ಬೆಚ್ಚಿ ಬೀಳುತ್ತದೆ. ಇಲ್ಲವಾದರೆ, ಬೆಂಗಳೂರಿನ ನಾಗರಿಕರು ಕುಡಿಯಲು ನೀರಿಲ್ಲದೇ ಪರಿತಪಿಸಬೇಕಾಗುತ್ತದೆ~ ಎಂದರು.`ಸುಪ್ರೀಂ ಕೋರ್ಟ್ ಯಾವ ಆಧಾರದ ಮೇಲೆ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿದೆ ಅರ್ಥವಾಗುತ್ತಿಲ್ಲ. ಕಾವೇರಿ ನದಿ ಹಂಚಿಕೆ ವಿಚಾರ ಬಂದಾಗಲೆಲ್ಲಾ ತಮಿಳುನಾಡು ಗೆಲುವು ಸಾಧಿಸುತ್ತದೆ. ನಮ್ಮ ರಾಜ್ಯದ ಸಚಿವರಿಗೆ ಕೋರ್ಟ್ ಆದೇಶವನ್ನು ಪ್ರಶ್ನಿಸುವ ಧೈರ್ಯವಿಲ್ಲ. ಕೂಡಲೇ ತೀರ್ಪಿನ ಪುನರ್ ಪರಿಶೀಲನೆಯಾಗಬೇಕು. ಇಲ್ಲದಿದ್ದರೆ ಮುಂದೆ ಆಗಬಹುದಾದ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ~ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಸಂಚಾರ ಅಸ್ತವ್ಯಸ್ತ

ಕರವೇ, ಅಖಿಲ ಭಾರತ ಕನ್ನಡ ರಕ್ಷಣಾ ದಳ, ರಾಜ್ಯ ಒಕ್ಕಲಿಗರ ಸಂಘ, ಕನ್ನಡ ಚಳವಳಿ ವಾಟಾಳ್ ಪಕ್ಷ, ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಶುಕ್ರವಾರ ನಗರದಲ್ಲಿ ನಡೆಸಿದ ರ‌್ಯಾಲಿ, ಪ್ರತಿಭಟನೆಯಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಸಜ್ಜನ್‌ರಾವ್ ವೃತ್ತ, ಪುರಭವನ, ಮೈಸೂರು ಬ್ಯಾಂಕ್ ವೃತ್ತ, ಮಲ್ಲೇಶ್ವರ, ಮೈಸೂರು ರಸ್ತೆ, ಮೆಜೆಸ್ಟಿಕ್, ರಾಜಾಜಿನಗರ, ಹೆಬ್ಬಾಳ, ಶೇಷಾದ್ರಿರಸ್ತೆ, ಓಕಳಿಪುರ, ಜೆ.ಸಿ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ವಾಹನಗಳು ಮಂದಗತಿಯಲ್ಲಿ ಸಾಗಿದವು. ಇದರಿಂದ ವಾಹನ ಸವಾರರು ಪರದಾಡಬೇಕಾಯಿತು.ದೂರದರ್ಶನ ಕೇಂದ್ರಕ್ಕೆ  ಕರವೇ ಮುತ್ತಿಗೆ

ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜೆ.ಸಿ.ನಗರದಲ್ಲಿರುವ ದೂರದರ್ಶನ ಕೇಂದ್ರಕ್ಕೆ ಬೀಗ ಹಾಕಿಸಿ ಪ್ರತಿಭಟನೆ ಮಾಡಿದರು.ಆರ್.ಟಿ.ನಗರದಿಂದ ಜಾಥಾ ಹೊರಟ ಪ್ರತಿಭಟನಾಕಾರರು ದೂರ ದರ್ಶನದ ಕೇಂದ್ರದ ಮುಂದೆ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹನ ಮಾಡಿದರು. ನಂತರ ದೂರದರ್ಶನ ಕೇಂದ್ರದ ನಿರ್ದೇಶಕರನ್ನು ಭೇಟಿ ಮಾಡಿ ಕೇಂದ್ರಕ್ಕೆ ಬೀಗ ಹಾಕುವಂತೆ ಮನವಿ ಮಾಡಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.ಕೆಆರ್‌ಎಸ್‌ಗೆ ಸೈಕಲ್ ಜಾಥಾ


ಜಯ ಕರ್ನಾಟಕ ಸಂಘಟನೆ ಸದಸ್ಯರು ಪುರಭವನದ ಮುಂಭಾಗ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸಂಘಟನೆ ಸದಸ್ಯರ ಒಂದು ತಂಡ ನಲವತ್ತು ಸೈಕಲ್‌ಗಳಲ್ಲಿ ಶುಕ್ರವಾರ ಕೃಷ್ಣರಾಜಸಾಗರ ಅಣೆಕಟ್ಟೆಗೆ ಜಾಥಾ ಹೊರಟಿತು.ಅದೇ ರೀತಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಎಮ್ಮೆ ಮೇಲೆ ಕುಳಿತುಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಆತ್ಮಾಹುತಿ ಯತ್ನ

ಕಾವೇರಿ ನದಿ ನೀರು ಹಂಚಿಕೆ ತೀರ್ಪನ್ನು ಪುನರ್‌ಪರಿಶೀಲನೆ ಮಾಡ ಬೇಕೆಂದು ಆಗ್ರಹಿಸಿ ಜೆಡಿಎಸ್ ಮತ್ತು ವಿವಿಧ ಜನಪರ ಸಂಘಟನೆಗಳು ಹೆಬ್ಬಾಳದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಂಘಟನೆಯೊಂದರ ಕಾರ್ಯಕರ್ತ ರಾಜೇಂದ್ರ ಎಂಬುವರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಾ ಹುತಿಗೆ ಯತ್ನಿಸಿದಾಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗುತ್ತ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡ ರಾಜೇಂದ್ರ, ಬೆಂಕಿ ಹಚ್ಚಿಕೊಳ್ಳಲು ಮುಂದಾದಾಗ ಅಲ್ಲಿದ್ದ ಜನ ಅವರನ್ನು ತಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry