ಬೆಂಗಳೂರಿಗೆ ತೆರಳುತ್ತಿದ್ದ ವಿಮಾನ ಗೋವಾದಲ್ಲಿ ತುರ್ತು ಭೂ ಸ್ಪರ್ಶ
ಪಣಜಿ (ಪಿಟಿಐ): ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಿಂಗ್ಫಿಷರ್ ಏರ್ಬಸ್ ಎ-320 ವಿಮಾನದ ಗಾಳಿತಡೆ ಗಾಜಿನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಗೋವಾ ನಿಲ್ದಾಣದಲ್ಲಿ ವಿಮಾನವು ತುರ್ತು ಭೂ ಸ್ಪರ್ಶ ಮಾಡಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಹೊರ ಭಾಗದಲ್ಲಿ ಬಿರುಕು ಉಂಟಾಗಿರುವುದನ್ನು ಗಮನಿಸಿದ ಪೈಲಟ್ ಬೆಳಿಗ್ಗೆ 8.10ಕ್ಕೆ ಗೋವಾದ ಡಬೋಲಿಮ್ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
ವಿಮಾನದಲ್ಲಿ 100 ಜನ ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ಮುಂಜಾಗರೂಕತಾ ಕ್ರಮವಾಗಿ ಪೈಲಟ್ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರಿಗೆ ತೆರಳಲು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಗೋವಾ ನಿಲ್ದಾಣದಲ್ಲಿ ಕಿಂಗ್ಫಿಷರ್ ವಿಮಾನದ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ.
ಹೈಕೋರ್ಟಿನಲ್ಲಿ ರಿಲಯನ್ಸ್ ಟೆಲಿಕಾಂ ಅರ್ಜಿ
ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಆರೋಪ ನಿಗದಿ ಮಾಡಿರುವುದನ್ನು ರದ್ದು ಪಡಿಸಬೇಕು ಎಂದು ಕೋರಿ ರಿಲಯನ್ಸ್ ಟೆಲಿಕಾಂ ಲಿಮಿಟೆಡ್ (ಆರ್ಟಿಎಲ್) ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.
ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಆ ಕಾರಣಕ್ಕಾಗಿ ನಿಗದಿ ಪಡಿಸಲಾಗಿರುವ ಆರೋಪಗಳನ್ನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಕೆಳ ನ್ಯಾಯಾಲಯ ಆರ್ಟಿಎಲ್ ವಿರುದ್ಧ ಸಂಚು, ವಂಚನೆ ಮತ್ತು ಫೋರ್ಜರಿ ಆರೋಪಗಳನ್ನು ನಿಗದಿ ಮಾಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.