ಬೆಂಗಳೂರಿನಲ್ಲಿಯೇ 7,600 ಭಿಕ್ಷುಕರು!

7

ಬೆಂಗಳೂರಿನಲ್ಲಿಯೇ 7,600 ಭಿಕ್ಷುಕರು!

Published:
Updated:
ಬೆಂಗಳೂರಿನಲ್ಲಿಯೇ 7,600 ಭಿಕ್ಷುಕರು!

ಬೆಂಗಳೂರು: `ರಾಜ್ಯದಾದ್ಯಂತ ನಡೆಯುತ್ತಿರುವ ಭಿಕ್ಷುಕರ ಎಣಿಕೆ ಕಾರ್ಯ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ರಾಜಧಾನಿಯಲ್ಲೇ 7,600 ಭಿಕ್ಷುಕರು ಇರುವುದು ಬೆಳಕಿಗೆ ಬಂದಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.



ನಗರದ ಮಾಗಡಿ ಮುಖ್ಯರಸ್ತೆಯ ಕೊಟ್ಟಿಗೆಪಾಳ್ಯದಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಅವರು ಕೇಂದ್ರದ ಕಾರ್ಯಚಟುವಟಿಕೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.



`ಐದು ವರ್ಷಗಳಲ್ಲಿ ಕರ್ನಾಟಕವನ್ನು ಭಿಕ್ಷಾಟನೆಮುಕ್ತ ರಾಜ್ಯವನ್ನಾಗಿ ಘೋಷಣೆ ಮಾಡುವ ಗುರಿ ಇರಿಸಿಕೊಂಡಿದ್ದು, ಭಿಕ್ಷುಕರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸಂಕಲ್ಪಿಸಲಾಗಿದೆ~ ಎಂದರು.



`ರಾಜ್ಯದಲ್ಲಿ 14 ಭಿಕ್ಷುಕರ ಪರಿಹಾರ ಕೇಂದ್ರಗಳಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಈ ಕೇಂದ್ರಗಳಲ್ಲಿ 380 ಮಹಿಳೆಯರು, 1362 ಪುರುಷರು ಸೇರಿದಂತೆ 1742 ಭಿಕ್ಷುಕರು ದಾಖಲಾಗಿದ್ದಾರೆ. 16 ಜಿಲ್ಲೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.



ವರ್ಷಾಂತ್ಯದೊಳಗೆ ನಾಲ್ಕು ಕೇಂದ್ರಗಳು ಆರಂಭವಾಗಲಿವೆ. ನಾಲ್ಕು ಕಂದಾಯ ವಿಭಾಗಗಳಲ್ಲಿ ಮಹಿಳಾ ಭಿಕ್ಷುಕರ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು~ ಎಂದು ಅವರು ಮಾಹಿತಿ ನೀಡಿದರು.



`ಬೆಂಗಳೂರಿನ ಪರಿಹಾರ ಕೇಂದ್ರವನ್ನು ದೇಶದಲ್ಲಿಯೇ ಮಾದರಿ ಕೇಂದ್ರವನ್ನಾಗಿ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಇಲ್ಲಿನ ಕೇಂದ್ರದ ಮಾದರಿಯಲ್ಲಿ ರಾಜ್ಯದ ಎಲ್ಲಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಎಲ್ಲಾ ದಾಖಲೆಗಳ ಕಂಪ್ಯೂಟರೀಕರಣ, ವಿಡಿಯೊ ಸರ್ವಲೆನ್ಸ್, ಟೆಲಿಮೆಡಿಸಿನ್ ಸೌಲಭ್ಯ, ಊಟದ ಟೇಬಲ್ ವ್ಯವಸ್ಥೆ, ಸ್ವಯಂಚಾಲಿತ ಲಾಂಡ್ರಿ ಮೆಷಿನ್ ಸ್ಥಾಪನೆ ಮಾಡಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ಭಿಕ್ಷುಕರಿಗೆ ಉದ್ಯೋಗ ಕಲ್ಪಿಸಲಾಗುವುದು~ ಎಂದರು.



ಬಿಬಿಎಂಪಿಯಿಂದ 20 ಕೋಟಿ ಬಾಕಿ: `ಸಾರ್ವಜನಿಕ ಭೂಮಿ, ನಿವೇಶನ, ಕಟ್ಟಡಗಳ ಮೇಲೆ ಶೇ 3ರಷ್ಟು ಭಿಕ್ಷುಕರ ಕರ ಹಾಕಿ ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಲಾಗುತ್ತದೆ. 2011-12ನೇ ಸಾಲಿನಲ್ಲಿ ಕರದ ರೂಪದಲ್ಲಿ ಜಮಾ ಆಗಿರುವ ಮೊತ್ತ ರೂ. 33.40 ಕೋಟಿ. ಇನ್ನೂ ರೂ. 33 ಕೋಟಿ ಕರ ಬರಬೇಕಾಗಿದೆ.

 

ಬಿಬಿಎಂಪಿಯಿಂದಲೇ ರೂ. 20 ಕೋಟಿ ಕರ ಪಾವತಿಯಾಗಬೇಕಿದೆ. ಕೇಂದ್ರ ಪರಿಹಾರ ಸಮಿತಿಯಲ್ಲಿ ರೂ. 70.12 ಕೋಟಿ ಇದ್ದು, ಪುನರ್ವಸತಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.



ಸಮಾಜ ಕಲ್ಯಾಣ ಮತ್ತು ಬಂಧಿಖಾನೆ ಸಚಿವ ನಾರಾಯಣಸ್ವಾಮಿ, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಕೆ.ಎ.ರಾಮಲಿಂಗಪ್ಪ, ಸಮಿತಿಯ ಕಾರ್ಯದರ್ಶಿ ಡಾ.ಆರ್.ಎನ್. ರಾಜಾ ನಾಯ್ಕ, ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.



ಭಿಕ್ಷಾಟನೆ ಬಗ್ಗೆ ನಗರದಾದ್ಯಂತ ಜಾಗೃತಿ ಮೂಡಿಸಲು ಆರು ಪ್ರಚಾರ ವಾಹನಗಳಿಗೆ ಚಾಲನೆ ನೀಡಲಾಯಿತು. ಕೇಂದ್ರದಲ್ಲಿ ಅಳವಡಿಸಿರುವ ಟೆಲಿಮೆಡಿಸಿನ್ ವ್ಯವಸ್ಥೆ, ಗ್ರಂಥಾಲಯ, ಭೋಜನ ಕೊಠಡಿ, ಗಣಕೀಕೃತ ಲಾಂಡ್ರಿ, ಕೇಂದ್ರದ ಜಮೀನಿನಲ್ಲಿ ಅಳವಡಿಸಿರುವ 64 ಸಿ.ಸಿ. ಕ್ಯಾಮರಾಗಳ ಕಾರ್ಯನಿರ್ವಹಣೆಯನ್ನು ಮುಖ್ಯಮಂತ್ರಿ ವೀಕ್ಷಿಸಿದರು.



25 ಮಂದಿಗೆ ಉದ್ಯೋಗ

ಭಿಕ್ಷುಕರ ಪರಿಹಾರ ಕೇಂದ್ರದ 25 ಮಂದಿಗೆ ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಾವಕಾಶ ಲಭಿಸಿದೆ.



ಸೋಮವಾರ ನಡೆದ ಸಮಾರಂಭದಲ್ಲಿ ಸಾಂಕೇತಿಕವಾಗಿ ಇಬ್ಬರಿಗೆ ಮುಖ್ಯಮಂತ್ರಿ ಅವರು ಉದ್ಯೋಗಪತ್ರ ವಿತರಿಸಿದರು. ನಗರದ ನಂದಾ ಗ್ರೂಪ್ ಉದ್ಯೋಗ ನೀಡಲು ಮುಂದೆ ಬಂದಿದೆ. ಅವರ ಕೋಳಿ ಫಾರಂನಲ್ಲಿ 25 ಮಂದಿ ಉದ್ಯೋಗಿಗಳಾಗಿರುವರು. ಪ್ರತಿ ಉದ್ಯೋಗಿಯು ತಿಂಗಳಿಗೆ ರೂ ನಾಲ್ಕು ಸಾವಿರ ವೇತನ ಪಡೆಯವರು. ವೇತನ ಅವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.



`ಇಲ್ಲಿರುವ ಎಲ್ಲಾ ಭಿಕ್ಷುಕರಿಗೆ ಆಧಾರ್ ಕಾರ್ಡ್ ಮಾಡಿಸಲಾಗಿದ್ದು, ಈ ಕಾರ್ಡ್ ಸಿಕ್ಕ ಬಳಿಕ ಎಂಟಕ್ಕೂ ಅಧಿಕ ಕಂಪೆನಿಗಳು ಉದ್ಯೋಗ ನೀಡಲು ಮುಂದೆ ಬಂದಿವೆ. ಆ ಸಂಸ್ಥೆಗಳ ವಿಶ್ವಾಸಾರ್ಹತೆ ನೋಡಿಕೊಂಡು ಮುಂದುವರಿಯಲಾಗುವುದು~ ಎಂದು ಕೇಂದ್ರದ ಕಾರ್ಯದರ್ಶಿ ಡಾ.ಆರ್.ಎನ್. ರಾಜಾ ನಾಯ್ಕ ಹೇಳಿದರು

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಐವರು ಮಹಿಳೆಯರು ಹಾಗೂ ನಾಲ್ವರು ಪುರುಷರಿಗೆ ಸಾಂಕೇತಿಕವಾಗಿ ಆಧಾರ್ ಕಾರ್ಡ್ ವಿತರಿಸಿದರು.



ಕುಶಲೋಪರಿ

`ಅಮ್ಮ ನಿಮ್ಮ ಹೆಸರೇನು, ಇಲ್ಲಿ ಊಟ ಚೆನ್ನಾಗಿದೆಯಾ, ವ್ಯವಸ್ಥೆ ಹೇಗುಂಟು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಭಿಕ್ಷುಕರ ಕೇಂದ್ರದಲ್ಲಿದ್ದ ಮಹಿಳೆಯರನ್ನು ಪ್ರಶ್ನಿಸಿದರು.



ಕೇಂದ್ರದ ವ್ಯವಸ್ಥೆಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ ಅವರು, `ಇಲ್ಲಿ ಏಕೆ ಇದ್ದೀರಾ, ಮನೆಗೆ ಹೋಗುವುದಿಲ್ಲವಾ, ನೋಡಿಕೊಳ್ಳುವವರು ಯಾರೂ ಇಲ್ಲವಾ~ ಎಂದು ವಿಚಾರಿಸಿದರು. 



 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry