ಭಾನುವಾರ, ಜೂನ್ 20, 2021
28 °C

ಬೆಂಗಳೂರಿನಲ್ಲಿ ಅಲೆ ಎಬ್ಬಿಸಿದ ಕೇಜ್ರಿವಾಲ್‌

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಲ್ಲಿ ಪೊರಕೆಗಳು ಅಲೆ–ಅಲೆಯಾಗಿ ಮೇಲೇಳುತ್ತಿದ್ದವು. ಅಲ್ಲಿದ್ದವರ ತಲೆಗಳ ಮೇಲೆಲ್ಲ ಪೊರಕೆ ಚಿತ್ರದ ಗಾಂಧಿ ಟೋಪಿಗಳು ಪವಡಿಸಿ­ದ್ದವು. ವಾಹನಗಳಲ್ಲಿ ಹೊರಟವರು ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿ ನಿಂತು, ಮೊಬೈಲ್‌ ಕ್ಯಾಮೆರಾಗಳಲ್ಲಿ ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು. ತೆರೆದ ಜೀಪಿನಲ್ಲಿದ್ದ ಆ ವ್ಯಕ್ತಿ ಕೈಬೀಸು­ತ್ತಿದ್ದಂತೆಯೇ ಚಪ್ಪಾಳೆ ಸದ್ದೇ ಸದ್ದು.ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್‌ ಶನಿವಾರ ನಗರದಲ್ಲಿ ಬೆಳಗಿನಿಂದ ಸಂಜೆವರೆಗೂ ಒಟ್ಟು 40 ಕಿ.ಮೀ. ದೂರ ರೋಡ್‌ ಷೋ ನಡೆಸಿದರು. ದಕ್ಷಿಣ ಭಾರತದ ನಗರವೊಂ­ದರಲ್ಲಿ ಲೋಕಸಭೆ ಚುನಾವಣೆಗೆ ಕೇಜ್ರಿವಾಲ್‌ ಕೈಗೊಂಡ ಮೊದಲ ಪ್ರಚಾರ ಯಾತ್ರೆ ಇದಾಗಿತ್ತು.ತೆರೆದ ಜೀಪಿನಲ್ಲಿ ಹೊರಟ ಅವರು, ರಸ್ತೆಯ ಅಕ್ಕ–ಪಕ್ಕದಲ್ಲಿ ನೋಡಲು ಸೇರಿದ್ದ ಜನರತ್ತ ನಗುನಗುತ್ತಾ ಕೈಬೀಸುತ್ತಿದ್ದರು. ಹತ್ತಿರ ಬಂದವರಿಗೆ ಹಸ್ತಲಾಘವ ನೀಡುತ್ತಿದ್ದರು. ಜನರು ಪ್ರೀತಿಯಿಂದ ತಂದ ಹೂವಿನ ಹಾರಗಳಿಗೆ ಕೊರಳನ್ನು ಒಡ್ಡುತ್ತಿದ್ದರು. ಹೆಬ್ಬಾಳದ ಮೇಲ್ಸೇತುವೆ ಬಳಿಯಿಂದ ಬೆಳಿಗ್ಗೆ 9.30ಕ್ಕೆ ಯಾತ್ರೆ ಆರಂಭವಾಯಿತು. ಗಂಗಾನಗರದ ಇಕ್ಕಟ್ಟಾದ ಗಲ್ಲಿಯಲ್ಲಿ ಮೆರವಣಿಗೆ ಹೊರಟಾಗ ಜನ ಮಹಡಿಗಳ ಮೇಲೂ ನಿಂತುಕೊಂಡು ನೋಡಿದರು. ಆದರೆ, ಹೆಚ್ಚಿನ ಜನ ಕಂಡುಬಂದದ್ದು ಮಾತ್ರ ಜಯನಗರ, ಗಾಂಧಿ ಬಜಾರ್‌, ಬಸವನಗುಡಿ, ಮಲ್ಲೇಶ್ವರ ಮತ್ತು ಸುತ್ತಲಿನ ಪ್ರದೇಶಗಳ ಕಡೆಗೆ ಯಾತ್ರೆ ಬಂದಾಗ.ಅಲ್ಲಲ್ಲಿ ಯಾತ್ರೆಯನ್ನು ನಿಲ್ಲಿಸಿ ಚುಟುಕಾದ ಭಾಷಣ ಮಾಡುತ್ತಿದ್ದ ಕೇಜ್ರಿವಾಲ್‌, ‘ನೀವು ನನಗೆ ಕೊಟ್ಟ ಪ್ರೀತಿಗೆ ಧನ್ಯವಾದ’ ಎಂದು ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸುತ್ತಿದ್ದರು. ‘ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳು ಕರ್ನಾಟಕ­ವನ್ನು ಕೊಳ್ಳೆ ಹೊಡೆದಿವೆ. ಭ್ರಷ್ಟಾಚಾರವನ್ನು ತೊಲಗಿಸಲು ಎಎಪಿ ಬಂದಿದೆ. ಇದು ನಿಮ್ಮ ಪಕ್ಷ, ಜನಸಾಮಾನ್ಯರ ಪಕ್ಷ’ ಎಂದು ಹೇಳುತ್ತಿದ್ದರು.ಕಪ್ಪು ಟಿ–ಶರ್ಟ್‌ ಮತ್ತು ಬಿಳಿ ಬಾವುಟ ಹಿಡಿದಿದ್ದ ಯುವಕರ ತಂಡ ಬೆಂಗಾವಲು ಪಡೆಯಾಗಿ ಕೇಜ್ರಿವಾಲ್‌ ಅವರ ಜೀಪ್‌ ಸುತ್ತ ಗಿರಕಿ ಹೊಡೆ­ಯುತ್ತಿತ್ತು. ಪೊಲೀಸರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಅವರಿಗೆ ಭದ್ರತೆ ಒದಗಿ­ಸಿದ್ದರು.‘ಎಎಪಿ ಬಂದಿದೆ, ಭ್ರಷ್ಟರನ್ನು ಗುಡಿ­ಸಲಿದೆ, ಅಯ್ಯಯ್ಯೋ ಅಯ್ಯ­ಯ್ಯೋ ಭ್ರಷ್ಟಾಚಾರ ಅಯ್ಯಯ್ಯೋ, ಏಕ್‌ ದಿನ್‌ ದೇಶ್‌ ಕೆ ನಾಮ್‌ (ದೇಶ­ಕ್ಕಾಗಿ ಒಂದು ದಿನ), ಭಾರತ್‌ ಮಾತಾ ಕೀ ಜೈ’ ಮೊದಲಾದ ಘೋಷಣೆಗಳು ಮಾರ್ಗದುದ್ದಕ್ಕೂ ಮೊಳಗುತ್ತಿದ್ದವು.‘ಬೆಂಗಳೂರಿನ ಮೂರೂ ಲೋಕ­ಸಭಾ ಅಭ್ಯರ್ಥಿಗಳು ಕೇಜ್ರಿವಾಲ್‌ ಅವರ ಜತೆಯಲ್ಲಿದ್ದರು. ಅವರನ್ನು ಜನ­ತೆಗೆ ಪರಿಚಯಿಸುತ್ತಿದ್ದ ಎಎಪಿ ನೇತಾರ, ಮತಕ್ಕಾಗಿ ಮನವಿ ಮಾಡು­ತ್ತಿದ್ದರು. ಯಾತ್ರೆಯಲ್ಲಿ ಟೆಕ್ಕಿಗಳೇ ಹೆಚ್ಚಾ­­­ಗಿದ್ದರು. ದಾರಿಯಲ್ಲಿ ಸಿಕ್ಕವರಿಗೆ ಎಎಪಿ ಟೋಪಿ ಕೊಟ್ಟು ಧರಿಸಲು ಹೇಳುತ್ತಿದ್ದರು. ರಾಜಕೀಯ­ದಲ್ಲಿ ಹೊಸ ಅಲೆ ಎಬ್ಬಿಸಿದ ನವನಾಯಕ­ನನ್ನು ಜನ ಕುತೂಹಲ­ದಿಂದ ನೋಡು­ತ್ತಿದ್ದರು.ರೋಡ್‌ ಷೋ ಮಾರ್ಗದುದ್ದಕ್ಕೂ ಪೊಲೀಸರು ಮುಂಚಿತವಾಗಿಯೇ ಸಂಚಾರ ವ್ಯವಸ್ಥೆ ಬದಲಿಸಲು ಕ್ರಮ ಕೈಗೊಂಡಿ­ದ್ದರಿಂದ ಎಲ್ಲಿಯೂ ಸಾರ್ವ­ಜ­­ನಿಕರು ಹೆಚ್ಚಿನ ತೊಂದರೆ ಅನುಭವಿ­ಸಲಿಲ್ಲ.ಶಾಂತಿನಗರ, ಮಲ್ಲೇಶ್ವರ ಮತ್ತಿ­ತರ ಕಡೆಗಳಲ್ಲಿ ಒಂದಿಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ಚುನಾವಣಾ ಆಯೋಗದ ಸಿಬ್ಬಂದಿ, ಪೊಲೀಸರು ಹಾಗೂ ಎಎಪಿ ಕಾರ್ಯಕರ್ತರು ಯಾತ್ರೆ­ಯನ್ನು ಸಂಪೂರ್ಣವಾಗಿ ಚಿತ್ರಿಸಿ­ಕೊಂಡರು. ಸಂಜೆಯ ವೇಳೆಗೆ ಯುಟ್ಯೂ­ಬ್‌ನಲ್ಲಿ ರೋಡ್‌ ಷೋ ದೃಶ್ಯಗಳು ಹರಿದಾಡಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.