ಸೋಮವಾರ, ಜನವರಿ 20, 2020
18 °C

ಬೆಂಗಳೂರಿನಲ್ಲಿ ಇಸ್ರೇಲ್ ಕಾನ್ಸುಲೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆರುಸಲೇಂ (ಪಿಟಿಐ): ಉಭಯ ರಾಷ್ಟ್ರಗಳ ಮಧ್ಯೆ  ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತವು ಇಸ್ರೇಲ್‌ಗೆ ಬೆಂಗಳೂರಿನಲ್ಲಿ ತನ್ನ ಕಾನ್ಸುಲೆಟ್ ಕಚೇರಿ ಆರಂಭಿಸಲು ಅನುಮತಿ ನೀಡಿದೆ.ಭಾರತದ ಈ ನಿರ್ಧಾರಕ್ಕಾಗಿ ಇಲ್ಲಿಗೆ ಎರಡು ದಿನಗಳ ಭೇಟಿ ನೀಡಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ ಇಸ್ರೇಲ್ ವಿದೇಶಾಂಗ ಸಚಿವ ಆವಿಗ್ದಾರ್ ಲೀಬರ್‌ಮನ್, ಇದರಿಂದ ಎರಡೂ ದೇಶಗಳ ವ್ಯಾಪಾರ ಬಾಂಧವ್ಯ ಇನ್ನಷ್ಟು ವೃದ್ಧಿಸುವುದು ಎಂದು     ಹೇಳಿದರು.ಭದ್ರತಾ ಮಂಡಳಿ ಸದಸ್ಯತ್ವಕ್ಕೆ ಬೆಂಬಲ: ಭಾರತವು ಜಗತ್ತಿನ `ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರ~ ಎಂದು ಬಣ್ಣಿಸಿರುವ ಇಸ್ರೇಲ್, `ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕೆಂಬುದು ತನ್ನ ಬಯಕೆಯಾಗಿದೆ~ ಎಂದು ಬೆಂಬಲ ಸೂಚಿಸಿದೆ.ಕಳೆದ ಒಂದು ದಶಕದಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ವಿದೇಶಾಂಗ ಸಚಿವರಾಗಿರುವ ಎಸ್.ಎಂ. ಕೃಷ್ಣ ಅವರನ್ನು ಸೋಮವಾರ ರಾತ್ರಿ ಬರಮಾಡಿಕೊಂಡ ಇಸ್ರೇಲ್ ಅಧ್ಯಕ್ಷ ಸೈಮನ್ ಪೆರೆಸ್, ತಮ್ಮ ದೇಶವು ಭಾರತವನ್ನು ಹೆಚ್ಚು  ಆಸಕ್ತಿಯಿಂದ ಗಮನಿಸುತ್ತಿದೆ ಎಂದು ತಿಳಿಸಿದರು.`ನಮಗೆ ಎಲ್ಲದಕ್ಕೂ ಮುನ್ನ ಭಾರತ ಒಂದು ಸಂಸ್ಕೃತಿ. ನಂತರ ಭೂಮಿಯ ಮೇಲಿರುವ ಮಹಾನ್ ಪ್ರಜಾಸತ್ತೆ. ಆನಂತರ ಸ್ವಾತಂತ್ರ್ಯದಲ್ಲಿ ಬಡವಾಗದೆ ಬಡತನ ನಿರ್ಮೂಲನೆಯಲ್ಲಿ ನಂಬಲು ಅಸಾಧ್ಯವಾದ ಸಾಧನೆ ಮಾಡಿರುವ ದೇಶ~ ಎಂದು ಅವರು ಹೇಳಿದರು. ಭಾರತೀಯ ಸ್ವಾತಂತ್ರ್ಯ ಹೋರಾಟದ ಪಿತಮಹಾ ಮಹಾತ್ಮ ಗಾಂಧಿ ಅವರನ್ನು `ಪ್ರವಾದಿ~ಎಂದು ಮತ್ತು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು `ರಾಜ~ ಎಂದು ಅವರು ಬಣ್ಣಿಸಿದರು. `ಭಾರತ ಮತ್ತು ಚೀನಾ ಇಲ್ಲದಿದ್ದರೆ ವಿಶ್ವವನ್ನು ಹಸಿವು ಆಳುವುದು~ ಎಂದೂ ಅವರು ನುಡಿದರು.`ವಿಶ್ವದಲ್ಲಿ ಅನೇಕ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದನೆಯನ್ನು ಹರಡುವ ಮೂಲಕ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಮ್ಮ ದೇಶವು ಮಾನವನ ಮೆದುಳಿನ ಸಂಶೋಧನೆಯನ್ನು ಮೊದಲ ಆದ್ಯತೆಯಲ್ಲಿ ಕೈಗೆತ್ತಿಕೊಳ್ಳುವುದು~ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.ನಂತರ ಮಾತನಾಡಿದ ಕೃಷ್ಣ, ಎರಡೂ ದೇಶಗಳ ಸಂಬಂಧ ಸುಧಾರಣೆಯಲ್ಲಿ ಮಹಾನ್ ಮುತ್ಸದ್ದಿ ಪೆರೆಸ್ ಅವರ ಕೊಡುಗೆಯನ್ನು ಶ್ಲಾಘಿಸಿದರು.`ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಇಸ್ರೇಲ್ ರಾಷ್ಟ್ರವು ಭಾರತಕ್ಕೆ ಸ್ಫೂರ್ತಿಯಾಗಿದೆ~ ಎಂದೂ ತಿಳಿಸಿದರು. ಸಚಿವರು      ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನೂ ಭೇಟಿಯಾಗಿ ದ್ವಿಪಕ್ಷೀಯ ಬಾಂಧವ್ಯದ ಕುರಿತು ಸಮಾಲೋಚಿಸಿದರು.

ಪ್ರತಿಕ್ರಿಯಿಸಿ (+)