ಬೆಂಗಳೂರಿನಲ್ಲಿ ಕಾಂಗ್ರೆಸ್ ಜನಾಂದೋಲನ

7

ಬೆಂಗಳೂರಿನಲ್ಲಿ ಕಾಂಗ್ರೆಸ್ ಜನಾಂದೋಲನ

Published:
Updated:
ಬೆಂಗಳೂರಿನಲ್ಲಿ ಕಾಂಗ್ರೆಸ್ ಜನಾಂದೋಲನ

ಬೆಂಗಳೂರು: `ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ. ಬ3ದಿಂದ ತತ್ತರಿಸಿರುವ ಜನತೆಗೆ ಆಡಳಿತಾರೂಢ ಬಿಜೆಪಿ ಸರ್ಕಾರದ ಅಸಾಮರ್ಥ್ಯದ ಕಾರಣ ಅಗತ್ಯ ನೆರವೂ ದೊರೆಯುತ್ತಿಲ್ಲ. ವಿಧಾನ ಸೌಧದಿಂದ ಕೂಗಳತೆಯ ದೂರದಲ್ಲಿ ಅಧಿಕಾರಿಯೊಬ್ಬರು ಹತ್ಯೆಯಾಗಿದ್ದರೂ ತಪ್ಪಿತಸ್ಥರನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ~ ಎಂದು ಕಾಂಗ್ರೆಸ್ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಬೆಂಗಳೂರು ಮಹಾನಗರ ಹಾಗೂ ನಗರ ಜಿಲ್ಲಾ ಕಾಂಗ್ರೆಸ್ ಘಟಕಗಳ ವತಿಯಿಂದ ಇಲ್ಲಿನ `ಸ್ವಾತಂತ್ರ್ಯ ಉದ್ಯಾನ~ದಲ್ಲಿ ಗುರುವಾರ ಆಯೋಜಿಸಲಾಗಿದ್ದ `ಜನಾಂದೋಲನ~ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಮೋಟಮ್ಮ ಇತರರು ಸರ್ಕಾರದ ವಿರುದ್ಧ ಆರೋಪಿಸಿದರು.ಸರ್ಕಾರದ ಕೆಲವು ಸಚಿವರು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ನಾಯಕತ್ವದಲ್ಲಿ ವಿಶ್ವಾಸವಿಲ್ಲ ಎಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಆದರೆ ಈ ಸಚಿವರು ಇನ್ನೂ ತಮ್ಮ ಕಚೇರಿಗೆ ತೆರಳಿ ಕಡತಗಳಿಗೆ ಸಹಿ ಹಾಕುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿರುವ ಇಂಥ ನಡತೆ ದೇಶದಲ್ಲೇ ಮೊದಲು ಎಂದು ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣದ ಕೆಲವು ಸಚಿವರನ್ನು ಪರೋಕ್ಷವಾಗಿ ಛೇಡಿಸಿದರು.`ಬರ ಪರಿಸ್ಥಿತಿ ಭೀಕರವಾಗಿದ್ದರೂ ರಾಜ್ಯ ಸರ್ಕಾರ ಮಾತ್ರ ಕೇಂದ್ರದ ಹಣಕ್ಕೇ ಕಾದು ಕೂತಿದೆ~ ಎಂದು ಆರೋಪಿಸಿದ ಅವರು, `ನರ್ಮ್ ಯೋಜನೆಯಡಿ ಕೇಂದ್ರದಿಂದ ಹಣಕಾಸಿನ ನೆರವು ಬಾರದಿದ್ದರೆ ರಾಜ್ಯ ಸರ್ಕಾರದ್ದು ನಾಯಿಪಾಡು ಆಗುತ್ತಿತ್ತು. ಬೆಂಗಳೂರಿನಲ್ಲಿ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿರಲಿಲ್ಲ~ ಎಂದರು.`ಸಿಬಿಐ ತನಿಖೆ ನಡೆಸಿ~: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಗಳ ಕುರಿತು ಸರ್ಕಾರ ಸಿಬಿಐ ತನಿಖೆ ನಡೆಸಲಿ. ಈ ಅವ್ಯವಹಾರದಲ್ಲಿ ಕಾಂಗ್ರೆಸ್ಸಿಗರ ಪಾತ್ರವಿದ್ದರೆ ಪಕ್ಷ ಅವರ ರಕ್ಷಣೆಗೆ ಮುಂದಾಗುವುದಿಲ್ಲ. ಮಹಾಂತೇಶ ಹತ್ಯೆ ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಬೇಕು~ ಎಂದು ಪರಮೇಶ್ವರ್ ಆಗ್ರಹಿಸಿದರು. ಹಣಕಾಸಿನ ತೊಂದರೆಗೆ ಸಿಲುಕಿರುವ ಬಿಬಿಎಂಪಿ ಬೆಂಗಳೂರಿನ ಹೆಮ್ಮೆಯ ಯುಟಿಲಿಟಿ ಕಟ್ಟಡವನ್ನೇ ಅಡವಿಡಲು ಮುಂದಾಗಿದೆ ಎಂದು ಟೀಕಿಸಿದರು.ಮುಖಂಡರಾದ ಆರ್.ರೋಷನ್ ಬೇಗ್, ನೆ.ಲ. ನರೇಂದ್ರಬಾಬು, ದಿನೇಶ್ ಗುಂಡೂರಾವ್, ಎಸ್.ಟಿ. ಸೋಮಶೇಖರ್, ಅಭಯಚಂದ್ರ ಜೈನ್, ತೇಜಸ್ವಿನಿ ರಮೇಶ್, ರಾಣಿ ಸತೀಶ್, ಎಲ್. ಹನುಮಂತಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಂಧನ, ಬಿಡುಗಡೆ

ಕಾರ್ಯಕ್ರಮದ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಉದ್ದೇಶದಿಂದ ತೆರಳುತ್ತಿದ್ದ ಕಾಂಗ್ರೆಸ್ ಮುಖಂಡರಾದ ಡಾ. ಪರಮೇಶ್ವರ್, ಸಿದ್ದರಾಮಯ್ಯ, ಮೋಟಮ್ಮ, ಎಸ್.ಟಿ. ಸೋಮಶೇಖರ್, ದಿನೇಶ್ ಗುಂಡೂರಾವ್ ಮತ್ತಿತರರನ್ನು ಪೊಲೀಸರು ಅರಮನೆ ರಸ್ತೆಯಲ್ಲಿ ತಡೆದರು. ಮುಖಂಡರನ್ನು ಬಂಧಿಸಿದ ಪೊಲೀಸರು ಉಪ್ಪಾರಪೇಟೆ ಠಾಣೆಗೆ ಕರೆದೊಯ್ದು, ನಂತರ ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry