ಸೋಮವಾರ, ಮೇ 10, 2021
22 °C

ಬೆಂಗಳೂರಿನಲ್ಲಿ ಜೋಗ ಶಿವಮೊಗ್ಗದಲ್ಲಿ ಮಾಸ್ತಿ

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

ಕೆ.ಎಸ್. ನಿಸಾರ್ ಅಹಮದ್ ಕನ್ನಡಿಗರ ಪ್ರೀತಿಗೆ ಪಾತ್ರರಾದ ಅನನ್ಯ ಕವಿ. `ನಿತ್ಯೋತ್ಸವ~, `ಕುರಿಗಳು ಸಾರ್ ಕುರಿಗಳು~, `ಮನೋರಮಾ~, `ಪ್ರಾಯ~, `ರಂಗೋಲಿ ಮತ್ತು ಮಗ~, `ಅಮ್ಮ ಆಚಾರ ಮತ್ತು ನಾನು~- ಒಂದೊಂದು ಕವಿತೆಯೂ ನಿಸಾರ್ ಕಾವ್ಯದ ಕಸುಬುದಾರಿಕೆಯಲ್ಲಿ ಮೂಡಿದ ಅಪ್ಪಟ ಕಲಾಕೃತಿಗಳು. ಈಚೆಗಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದ ಕವಿ, ಸಹೃದಯರ ಪ್ರೀತಿಯನ್ನೇ ಔಷಧಿಯಾಗಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ.

 

ಅನಾರೋಗ್ಯ ಉಳಿಸಿದ ದಣಿವು ಇನ್ನೂ ತೀರದಿದ್ದರೂ, ಕವಿತೆಯ ಮಾತಿಗೆ ಬಂದರೆ, ಶಿವಮೊಗ್ಗ-ಜೋಗದ ನೆನಪುಗಳನ್ನು ಜೀಕಿದರೆ ನಿಸಾರ್ ಅಕ್ಷರಶಃ ಭೋರ್ಗರೆವ ಜಲಪಾತ! ದಣಿವಿನ ನಡುವೆಯೂ `ಸಾಪ್ತಾಹಿಕ ಪುರವಣಿ~ ಜೊತೆ ನಿಸಾರ್ ಉತ್ಸಾಹದಿಂದ ಮಾತನಾಡಿದರು. ಅವರ ಮಾತುಗಳ ಸಂಗ್ರಹರೂಪ ಇಲ್ಲಿದೆ.

                                             =============

“ನನ್ನ ಹುಟ್ಟೂರು ಬೆಂಗಳೂರು. ಆದರೆ, ಶಿವಮೊಗ್ಗದಲ್ಲಿ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸಿದ್ದರಿಂದ ಮತ್ತು `ನಿತ್ಯೋತ್ಸವ~ ಕವಿತೆಯಲ್ಲಿ ಜೋಗದ ಬಗ್ಗೆ ನೀಡಿದ ವರ್ಣನೆಯಿಂದಲೋ ಏನೂ ಶಿವಮೊಗ್ಗದ ಜನರು ನನ್ನನ್ನು `ನಮ್ಮೂರ~ವನು ಎಂದು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.ಒಮ್ಮೆ ಹೀಗೆ ಆಗಿತ್ತು. ಉಡುಪಿಯಲ್ಲೊಂದು ನಡೆದ ಅಭಿನಂದನಾ ಸಮಾರಂಭ. ನನ್ನ ಪರಿಚಯ ಮಾಡಿಕೊಡುತ್ತಿದ್ದ ವ್ಯಕ್ತಿಯೊಬ್ಬರು, `ನಿಸಾರ್ ಅವರು ಮೂಲತಃ ಶಿವಮೊಗ್ಗದವರು~ ಎಂದು ಹೇಳಿ ನನ್ನನ್ನೇ ದಂಗುಬಡಿಸಿದ್ದರು. ಅನೇಕ ಸಾಹಿತ್ಯ ಸಮಾರಂಭಗಳಲ್ಲಿ ಎದುರಾಗುವ ಶಿವಮೊಗ್ಗದ ಜನರು, `ಶಿವಮೊಗ್ಗದಲ್ಲಿ ನೀವು ಎಲ್ಲಿ?~ ಎಂದು ಕೇಳುತ್ತಾರೆ.ನಾನು ಬೆಂಗಳೂರಿನ ಮಾವಳ್ಳಿ ರಸ್ತೆಯ ಮನೆಯೊಂದರಲ್ಲಿ ಹುಟ್ಟಿ ಬೆಳೆದವನು. ಪ್ರೌಢಶಾಲೆಯಲ್ಲಿದ್ದಾಗ `ಭಿತ್ತಿ ಪತ್ರ~ವೊಂದನ್ನು ಸಿದ್ಧಪಡಿಸಲು ತರಗತಿಯ ಮೇಷ್ಟ್ರು ಹೇಳಿದರು. ಆ ಭಿತ್ತಿಪತ್ರವನ್ನು ಸಂಪೂರ್ಣವಾಗಿ ರಂಗುಗೊಳಿಸಲು ಮತ್ತು ಆ ಪತ್ರಕ್ಕೆ ಸಾಹಿತ್ಯ ಸ್ಪರ್ಶ ನೀಡುವ ಸಲುವಾಗಿ ಕವಿತೆ ಬರೆಯಲು ಆರಂಭಿಸಿದೆ.ಆ ಸಂದರ್ಭದಲ್ಲಿ ರಚಿಸಿದ ಕವಿತೆ `ಜಲಪಾತ~. ಅದರ ಮುಂದುವರಿದ ಭಾಗದಂತೆ `ನಿತ್ಯೋತ್ಸವ~ ಕವಿತೆ ಹೊರಹೊಮ್ಮಿರಬಹುದೇನೋ! ಬೆಂಗಳೂರಿನಲ್ಲಿದ್ದಾಗ ಜೋಗದ ಸಿರಿಯನ್ನು ಕಾವ್ಯವಾಗಿಸಿದೆ. ಶಿವಮೊಗ್ಗದಲ್ಲಿದ್ದಾಗ ಬೆಂಗಳೂರಿನ ಗಾಂಧಿ ಬಜಾರನ್ನು ಕವಿತೆಯಾಗಿ ದಕ್ಕಿಸಿಕೊಂಡೆ. ಇದೇ ಜೀವನದ ವಿಶೇಷತೆ.`ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ~ ಎಂಬ ಅಡಿಗರ ಸಾಲಿನಂತೆ, ಕವಿತೆಯ ವಸ್ತುಗಳು ಎಲ್ಲೋ ಇದ್ದಾಗ ಕಾಡಿ, ಇನ್ನೆಲ್ಲೋ ಕಾವ್ಯವಾಗಿ ಹೊರಹೊಮ್ಮುತ್ತದೆ. ಉದ್ಯಾನನಗರಿಯಲ್ಲಿದ್ದರೂ ಜಲಪಾತದ ವರ್ಣನೆಯನ್ನು ರಚಿಸಿದ್ದು ಒಂದು ರೋಚಕ ಅನುಭವ.ಮಾವಳ್ಳಿ ರಸ್ತೆಯಲ್ಲಿರುವ ಕನ್ನಡಶಾಲೆಯಲ್ಲಿ ಓದುತ್ತಿರುವಾಗ ಮಿನರ್ವದ ಸಮೀಪವಿದ್ದ ಒಂದು ಸಿನಿಮಾ ಟಾಕೀಸ್‌ಗೆ ನಾನು ಮತ್ತು ನನ್ನ ಅಣ್ಣ ಸೇರಿ, ಗೇಟ್ ಕೀಪರ್‌ಗೆ ತೂತು ಬಿಲ್ಲೆ ( ಅರ್ಧ ಪೈಸೆ) ನೀಡಿ ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದೆವು. ಆ ಸಿನಿಮಾಗಳಲ್ಲಿ ಬರುತ್ತಿದ್ದ ಜಲಪಾತ ನನ್ನನ್ನು ಎಡೆಬಿಡದೆ ಕಾಡಿ ಜೋಗ ಜಲಪಾತದ ಕುರಿತು ಪದ್ಯ ಬರೆಯುವಂತೆ ಪ್ರೇರೇಪಿಸಿತು.

 

ಒತ್ತಾಯಕ್ಕಿಂತ ಒಳಗಿನ ಒತ್ತಡಗಳಿಂದ ಹುಟ್ಟುವ ಕವಿತೆ ಗಟ್ಟಿಯಾಗಿ ನೆಲೆ ನಿಲ್ಲುತ್ತದೆ. ಹಾಗೆ, ಒಳಗಿನ ಒತ್ತಡಗಳಿಂದ ಹುಟ್ಟಿದ್ದು `ನಿತ್ಯೋತ್ಸವ~.`ಸದಾ ಇವರು ಹೀಗೆಯೇ.. ಇಲ್ಲೇ ಗಾಂಧಿ ಬಜಾರಿನ ಹಿರಿ ಚೌಕದೆದುರಲ್ಲಿ ಸಿಗರೇಟು ಸೇದುತ್ತಲೋ, ಪ್ರತಿಕೆ ಓದುತ್ತಲೋ ಹರಟುತ್ತಲೋ ಇದ್ದಾಗ ಎದುರಾಗುವರು ನಿರ್ದಿಷ್ಟ ಸಮಯದಂತೆ~ ಎಂದು ಮಾಸ್ತಿ ಅವರ ಕುರಿತು ಬರೆದ ಕವಿತೆಯೂ ಹಾಗೇ, ಶಿವಮೊಗ್ಗದಲ್ಲಿದ್ದಾಗಲೇ ರಚಿಸಿದ್ದು! ವೃತ್ತಿ ಜೀವನದ ಆರಂಭದಿಂದಲೂ ಬೆನ್ನುತಟ್ಟಿ ಪ್ರೋತ್ಸಾಹಿಸಿದ ನನ್ನ ನೆಚ್ಚಿನ ಗುರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್.

 

ದೂರವಾದಾಗ ಹೆಚ್ಚು ಕಾಡುವ ನೆನಪಿನಂತೆ, ಶಿವಮೊಗ್ಗಕ್ಕೆ ಹೋದಾಗ ಮಾಸ್ತಿಯವರ ಕಾಡುವಿಕೆ ಇನ್ನಷ್ಟು ಹೆಚ್ಚಾಯಿತು. ಆ ಕಾಡುವಿಕೆಯ ಕಾರಣದಿಂದಲೇ, ಶಿವಮೊಗ್ಗದಲ್ಲೇ ಕೂತು `ಮಾಸ್ತಿ~ ಎಂಬ ಕವಿತೆ ರಚಿಸಿದೆ.ಗಾಂಧಿ ಬಜಾರಿನಲ್ಲಿರುವ ಇಸ್ಪೀಟ್ ಕ್ಲಬ್ ಈಗಲೂ ಇದೆ. ಮಾಸ್ತಿಯವರು ಗವಿಪುರದಿಂದ ಕ್ಲಬ್‌ಗೆ ಹೋಗುತ್ತಿದ್ದ ದೃಶ್ಯ ನನ್ನ ನೆನಪಿನಲ್ಲಿ ಉಳಿದಿದೆ. ಆಗೆಲ್ಲ ಮಾರ್ಗದರ್ಶನ ಮಾಡಲು ಮಹಾನ್ ಗುರುಗಳಿದ್ದರು. ಪ್ರಸ್ತುತ ದಿನಗಳಲ್ಲಿ ಜನರ ನಡವಳಿಕೆಯಲ್ಲಿ ಸಭ್ಯತೆಯೆಂಬ ವಿಷಯವು ಶೂನ್ಯವಾಗುತ್ತಿರುವುದಕ್ಕೆ ಖೇದವೆನಿಸುತ್ತದೆ.ಜಿ.ಪಿ.ರಾಜರತ್ನಂ ಅವರು ಸಭ್ಯತೆಯ ಬಗ್ಗೆಯೇ ಒಂದು ಕೃತಿ ರಚಿಸಿದ್ದಾರೆ. ಇಂದಿನ ಪೀಳಿಗೆ ತಪ್ಪದೇ ಆ ಕೃತಿಯನ್ನು ಓದಬೇಕು. ಸಭ್ಯತೆ ಮತ್ತು ಸಹೃದಯತೆಯನ್ನು ಬೆಳೆಸಿಕೊಂಡಾಗ ಮಾತ್ರ ಸಾಧನೆಯ ಶಿಖರವನ್ನು ಏರಲು ಸಾಧ್ಯವಿದೆ.ಮಾತನಾಡಲು ನೆನಪಿನ ಬುತ್ತಿಯಲ್ಲಿ ಬಹಳಷ್ಟು ವಿಚಾರಗಳಿವೆ. ಆದರೆ ಹೆಚ್ಚು ಮಾತನಾಡುವಂತಿಲ್ಲ, ಬಳಲಿಕೆ. ಅಂದಹಾಗೆ, ಹೆಚ್ಚು ಮಾತನಾಡಿ ನಿಮಗೆ ತೊಂದರೆ ಕೊಟ್ಟೆನೇ?”

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.