ಸೋಮವಾರ, ಮಾರ್ಚ್ 1, 2021
30 °C
ಅನಿಸಿಕೆ

ಬೆಂಗಳೂರಿನಲ್ಲಿ ಫುಟ್‌ಬಾಲ್‌ಗೆ ನವಚೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಫುಟ್‌ಬಾಲ್‌ಗೆ ನವಚೇತನ

ಬೆಂಗಳೂರಿನಲ್ಲಿ ಇದೀಗ ಫುಟ್‌ಬಾಲ್‌ ಹೊಸ ರಂಗು ಪಡೆದುಕೊಳ್ಳುತ್ತಿದೆ. ದೇಶದ ಪ್ರತಿಷ್ಠಿತ ಐ ಲೀಗ್‌ ಟ್ರೋಫಿ ಬೆಂಗಳೂರಿಗೆ ಒಲಿದಿದೆ. ಇದೇನೂ ಕಡಿಮೆ ಸಾಧನೆ ಏನಲ್ಲ. ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ)ನ ಕಳೆದ ಒಂದು ವರ್ಷದ ಚಟುವಟಿಕೆ ಈ ನಗರದಲ್ಲಿ ಫುಟ್‌ಬಾಲ್‌ಗೆ ಹೊಸ ಆಯಾಮ ನೀಡುವಂತಿದೆ. ಜತೆಗೆ ರಾಜ್ಯ ಫುಟ್‌ಬಾಲ್‌ಗೂ ಹೊಸ ಆಯಾಮ ನೀಡಿದೆ. ಬಿಎಫ್‌ಸಿಯ ಮುಖ್ಯ ತಂಡದಲ್ಲಿ ರಾಜ್ಯದ ಮಂಜು, ಕುಟ್ಟಿಮಣಿ, ಶಂಕರ್‌ , ವಿಶಾಲ್‌ ಸ್ಥಾನ ಪಡೆದಿದ್ದರು. ಈ ತಂಡದಲ್ಲಿ ಬಹುತೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಎತ್ತರದ ದೇಶ ವಿದೇಶಗಳ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು, ನಿಜ. ಆದರೆ ಈ ಎಲ್ಲರೂ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ರಾಜ್ಯದ ಫುಟ್‌ಬಾಲ್‌ ರಂಗಕ್ಕೆ ಸ್ಫೂರ್ತಿಯ ಸಿಂಚನ ಮಾಡಿದ್ದಾರೆ.ಈಚೆಗಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಐಟಿಐ ಸೇರಿದಂತೆ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗವಕಾಶಗಳು ಕಡಿಮೆಯಾಗಿವೆ. ಅದೇ ರೀತಿ ರಾಜ್ಯದ ಪೊಲೀಸ್‌ ಇಲಾಖೆಯಲ್ಲಿಯೂ ಫುಟ್‌ಬಾಲ್‌ ಚಟುವಟಿಕೆಯೇ ಕಡಿಮೆಯಾಗಿದೆ. ಫುಟ್‌ಬಾಲ್‌ ಆಟಗಾರರ ನೇಮಕಾತಿ ಪ್ರಕ್ರಿಯೆ ಸದ್ಯಕ್ಕೆ ಸ್ತಬ್ಧಗೊಂಡಂತಿದೆ. ಇಂತಹ ಸಂದಿಗ್ಧದಲ್ಲಿ ಪ್ರತಿಭಾವಂತ ಆಟಗಾರರು ಕ್ಲಬ್‌ ಫುಟ್‌ಬಾಲ್‌ ರಂಗದತ್ತ ನೋಡುತ್ತಿದ್ದಾರೆ. ಆದರೆ ಕ್ರಿಕೆಟ್‌ನ ಐಪಿಎಲ್‌ನಷ್ಟು ಪ್ರಭಾವಶಾಲಿಯಾಗಿ ನಮ್ಮ ಫುಟ್‌ಬಾಲ್‌ ಚಟುವಟಿಕೆ ಬೆಳೆದು ನಿಂತಿಲ್ಲ. ಹಾಗಿದ್ದರೂ, ಬಹುತೇಕ ಎಳೆಯರು ಐಲೀಗ್‌ ಟೂರ್ನಿಗಳಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಇದೊಂದು ಅರ್ಥಪೂರ್ಣ ಬೆಳವಣಿಗೆಯೇ ಆಗಿದೆ.ಏಕೆಂದರೆ ಭಾರತದ ಪ್ರಮುಖ ಫುಟ್‌ಬಾಲ್‌ ಟೂರ್ನಿಯಾಗಿದ್ದ ಸಂತೋಷ್‌್ ಟ್ರೋಫಿಯಲ್ಲಿ ಗೆದ್ದವರಿಗೆ ಆಕರ್ಷಕ ಪಾರಿತೋಷಕಗಳ ಸಂಭ್ರಮ ಸಿಗುತಿತ್ತೇ ಹೊರತು, ಈಗ ಕ್ಲಬ್‌ ಟೂರ್ನಿಗಳಲ್ಲಿ ಆಡಿದವರಿಗೆ ಸಿಗುವಷ್ಟು ಹಣ ಸಿಗುತ್ತಿರಲಿಲ್ಲ. ಇವತ್ತು ಬಹುತೇಕ ಎಲ್ಲಾ ಕ್ರೀಡೆಗಳೂ ವೃತ್ತಿಪರತೆಯ ಸ್ವರೂಪ ಕಂಡುಕೊಳ್ಳುತ್ತಿರುವಾಗ ಫುಟ್‌ಬಾಲ್‌ ಕೂಡಾ ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿರುವುದು ಸರಿಯೇ ಆಗಿದೆ.ಈ ವೃತ್ತಿಪರ ಹಾದಿಯಲ್ಲಿ ಬಿಎಫ್‌ಸಿ ದಾಪುಗಾಲು ಹಾಕಿರುವುದು ಬೆಂಗಳೂರಿನ ಫುಟ್‌ಬಾಲ್‌ಗೆ ಹೊಸ ರಂಗು ನೀಡಿದೆ. ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ನವರು ಇದೀಗ ಸೂಪರ್‌ ಡಿವಿಷನ್‌ನಲ್ಲಿ ಆಡಲಿಕ್ಕೆ ಸ್ಥಳೀಯರಿಂದಲೇ ತುಂಬಿರುವ ಉತ್ತಮ ತಂಡವೊಂದನ್ನು ಕಟ್ಟಿದೆ. ಇವರು 16 ವರ್ಷದೊಳಗಿನವರ ಮತ್ತು 19 ವರ್ಷದೊಳಗಿನವರ ಬಲಿಷ್ಟ ತಂಡಗಳನ್ನು ಕಟ್ಟುವುದಕ್ಕೂ ಯತ್ನಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯೇ ಹೌದು. ಹಿಂದೆ ಐಟಿಐಗೆ ಆಡುತ್ತಿದ್ದ ನಿಕ್ಸನ್‌ ಬಿಎಫ್‌ಸಿಯ ಕಿರಿಯರ ತಂಡಕ್ಕೆ ತರಬೇತಿ ನೀಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಕ್ಲಬ್‌ನ ನೆರಳಿನಲ್ಲಿಯೇ ಹತ್ತು ಹಲವು ರಾಷ್ಟ್ರೀಯ ಎತ್ತರದ ಆಟಗಾರರು ಮೂಡಿಬಂದರೂ ಅಚ್ಚರಿ ಏನಿಲ್ಲ.ಬಿಎಫ್‌ಸಿಗೆ ಈಚೆಗಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಪ್ರಾಮುಖ್ಯತೆ ಸಿಕ್ಕಿಬಿಟ್ಟಿದೆ. ಇದರಿಂದ ಇತರ ಕ್ಲಬ್‌ಗಳು ಅವಗಣನೆಗೆ ಒಳಗಾಗುವ ಸಾಧ್ಯತೆಗಳಿಲ್ಲದಿಲ್ಲ. ಈ ಹಿನ್ನೆಲೆಯಲ್ಲಿ ಇತರ ಕ್ಲಬ್‌ಗಳ ಸಂಘಟಕರೂ ತಮ್ಮ ತಮ್ಮ ಕ್ಲಬ್‌ಗಳ ಗುಣಮಟ್ಟ ಹೆಚ್ಚಿಸಲು ಶ್ರಮ ವಹಿಸುವ ಅನಿವಾರ್ಯತೆ ಇದೆ. ಇವೆಲ್ಲವೂ ಸಮರೋಪಾದಿಯಲ್ಲಿ ನಡೆದು ಬಿಟ್ಟರೆ ಬೆಂಗಳೂರು ನಗರ ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ತನ್ನ ಹಿಂದಿನ ಹಿರಿಮೆಯನ್ನು ಮರಳಿ ಪಡೆಯಲು ಸಾಧ್ಯವಿದೆ.ಹಿಂದೆ ಕೇರಳದಲ್ಲಿ ಫುಟ್‌ಬಾಲ್‌ ಅತ್ಯಂತ ಜನಪ್ರಿಯವೆನಿಸಿತ್ತು. ರಾಷ್ಟ್ರೀಯ ಕೂಟಗಳಲ್ಲಿ ಆ ರಾಜ್ಯದ ಆಟಗಾರರದೇ ಮೇಲುಗೈ ಇರುತಿತ್ತು. ಆದರೆ ಈಚೆಗೆ ಅಲ್ಲಿನ ಪ್ರಭಾವ ಕುಂದುತ್ತಿದ್ದು, ಈಶಾನ್ಯ ರಾಜ್ಯಗಳಿಂದ ಹೆಚ್ಚು ಆಟಗಾರರು ಬರುತ್ತಿದ್ದಾರೆ. ಗೋವಾ ಹಿಂದಿಗಿಂತಲೂ ಈಗ ಹೆಚ್ಚು ಎತ್ತರಕ್ಕೇರುತ್ತಿದೆ. ಬಂಗಾಳ ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಕರ್ನಾಟಕ ತನ್ನ ಇರುವಿಕೆಯನ್ನು ತೋರಿಸಲು ಉತ್ತಮ ಅವಕಾಶವಿದೆ.

(ಲೇಖಕರು 1997ರಲ್ಲಿ ನಡೆದ 4ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಕರ್ನಾಟಕ ಫುಟ್‌ಬಾಲ್‌ ತಂಡದ ಸದಸ್ಯ. ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ (ಸಂತೋಷ್‌ ಟ್ರೋಫಿಯಲ್ಲಿ) ಹತ್ತು ವರ್ಷಗಳ ಕಾಲ ರಾಜ್ಯವನ್ನು ಪ್ರತಿನಿಧಿಸಿದ್ದು. ಒಮ್ಮೆ ರಾಜ್ಯ ತಂಡದ ನಾಯಕತ್ವ ವಹಿಸಿದ್ದು. 1993ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪರ ಆಡಿದ್ದು. ಫೆಡರೇಷನ್‌ ಕಪ್‌, ರೋವರ್ಸ್‌ ಕಪ್‌ ಸೇರಿದಂತೆ ದೇಶದ ಹಲವು ಪ್ರಮುಖ ಟೂರ್ನಿಗಳಲ್ಲಿ ಐಟಿಐ ತಂಡದ ನೇತೃತ್ವ ವಹಿಸಿದ್ದು. ಪ್ರಸಕ್ತ ರಕ್ಷಣಾ ಇಲಾಖೆಯ ಡಿಆರ್‌ಡಿಒದಲ್ಲಿ ತಂತ್ರಜ್ಞ. ಡಿಆರ್‌ಡಿಒ ತಂಡದ ಆಟಗಾರ ಕೂಡಾ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.